ಭೂಮಿ ಮಂಜೂರಾತಿ ಸೇರಿದಂತೆ ಯಾವುದೇ ವಿಷಯದಲ್ಲೂ ಅಕ್ರಮಕ್ಕೆ ಅವಕಾಶವಿಲ್ಲ: ಎಂ.ಬಿ.ಪಾಟೀಲ್

3 years ago

#There #noroom #illegality #any #matter #including #land #allotment #MBPatil

ಬೆಂಗಳೂರು: ಬೃಹತ್ ಕೈಗಾರಿಕೆ ಇಲಾಖೆಯಲ್ಲಿ ಭೂಮಿ ಮಂಜೂರಾತಿ ಸೇರಿದಂತೆ ಯಾವುದೇ ವಿಷಯದಲ್ಲೂ ಅಕ್ರಮಕ್ಕೆ ಅವಕಾಶವಿಲ್ಲ. ಎಲ್ಲಿಯಾದರೂ ಅಕ್ರಮ ನಡೆದಿರುವುದು ಪತ್ತೆಯಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿಧಾನಪರಿಷತ್‍ಗೆ ತಿಳಿಸಿದರು.

ಪ್ರಶ್ನೋತ್ತರ ಕಲಾಪದಲ್ಲಿ‌ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಧಾರವಾಡ ಜಿಲ್ಲೆಯ ಮಮ್ಮಿಘಟ್ಟಿ , ಕೆಲಗೇರಿ ಮತ್ತು ಕೋಟೂರು ಗ್ರಾಮಗಳಲ್ಲಿ ಕೆಐಎಡಿಬಿ ಮೂಲಕ ಸ್ವಾಧೀನಪಡಿಸಿಕೊಂಡಿರುವ ಜಮೀನಿನಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿದ್ದರೆ ಅಂಥವರ ವಿರುದ್ಧ ಪರಿಶೀಲಿಸಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

2022-23ನೇ ಸಾಲಿನಲ್ಲಿ ಧಾರವಾಡದ ಕೆಐಎಡಿಬಿ ಕಚೇರಿ ವ್ಯಾಪ್ತಿಯಲ್ಲಿ ಸ್ವಾೀಧಿನಪಡಿಸಿಕೊಂಡ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಎರಡು ಬಾರಿ ಅಥವಾ ಹೆಚ್ಚಿನ ಪರಿಹಾರ ನೀಡಿದ್ದಾರೆಂದು ಸದಸ್ಯರು ನನ್ನ ಗಮನಕ್ಕೆ ತಂದಿದ್ದಾರೆ. ಅಂದಾಜು 20 ಕೋಟಿ ಅವ್ಯವಹಾರ ನಡೆದಿದೆ. ಇದರ ಬಗ್ಗೆ ನಾನು ಕೂಲಂಕುಷವಾಗಿ ಪರಿಶೀಲಿಸಿ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.

ಈಗಾಗಲೇ ಇದರ ಬಗ್ಗೆ ಸಿಒಡಿ ತನಿಖೆ ನಡೆಯುತ್ತಿದೆ. ಒಟ್ಟು 11 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದ್ದೇವೆ. ನಾಲ್ವರು ಅಧಿಕಾರಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ತನಿಖೆ ನಡೆಯುತ್ತಿರುವ ಹಂತದಲ್ಲಿ ನಾವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ತನಿಖಾ ವರದಿಯಲ್ಲಿ ಕೆಐಎಡಿಬಿಯ ವಿಶೇಷ ಭೂಸ್ವಾಧೀನ ಅಧಿಕಾರಿ ಇ.ಡಿ.ಸಜ್ಜನ್, ಕೆಐಎಡಿಬಿಯ ವ್ಯವಸ್ಥಾಪಕ ಎಂ.ಕೆ.ಶಿಂಪಿ, ಹಿರಿಯ ಸಹಾಯಕ ಶಂಕರ್ ವೈ.ತಳವಾರ್, ನಿವೃತ್ತ ಶಿರಸ್ತೇದಾರ್ ಹೇಮಚಂದ್ರ ಮಣಿ ಇವರ ಮೇಲೆ ಕ್ರಮ ಜರುಗಿಸಿದ್ದೇವೆ ಎಂದರು.

ಈ ಪ್ರಕರಣದಲ್ಲಿ ಅಧಿಕಾರಿಗಳು ಮಾತ್ರವಲ್ಲದೆ ಬ್ಯಾಂಕ್ ಸಿಬ್ಬಂದಿ ಕೂಡ ಶಾಮೀಲಾಗಿರುವ ಶಂಕೆ ಇರುವುದರಿಂದ ಎರಡು ಬಾರಿ ಭೂ ಪರಿಹಾರ ಪಡೆದ 10 ಭೂ ಮಾಲೀಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಕೆಲವರನ್ನು ಸೇವೆಯಿಂದ ಅಮಾನತುಪಡಿಸಿದ್ದೇವೆ. ಯಾರನ್ನೂ ಕೂಡ ರಕ್ಷಿಸುವ ಉದ್ದೇಶವಿಲ್ಲ. ತನಿಖೆ ಪ್ರಗತಿ ಹಂತದಲ್ಲಿದೆ. ಕೆಐಎಡಿಬಿಯಲ್ಲಿರುವ ದಯಾನಂದ ಬಂಡಾರಿ, ವಾಣಿ, ದೊರೆಸ್ವಾಮಿ, ಮಂಜುನಾಥ್ ಮದಕವಿ ಅವರ ವಿರುದ್ಧವೂ ಸದಸ್ಯರು ಆರೋಪ ಮಾಡಿದ್ದಾರೆ. ಅವರು 20 ವರ್ಷದಿಂದ ಒಂದೇ ಜಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕೆಂದು ಸದಸ್ಯರು ಮನವಿ ಮಾಡಿಕೊಂಡಿದ್ದಾರೆ. ಕೇವಲ ವರ್ಗಾವಣೆ ಮಾಡುವುದಲ್ಲ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು

ವಿಮಾನ ನಿಲ್ದಾಣ: ಶಿವಮೊಗ್ಗ ವಿಮಾನ ನಿಲ್ದಾಣದ ಪರಿಷ್ಕೃತ ಅಂದಾಜು ಮೊತ್ತದಲ್ಲಿ  ಅವ್ಯವಹಾರ ನಡೆದಿದೆ ಎಂಬ ಆರೋಪಗಳಿವೆ. ಒಂದು ವೇಳೆ ಅವ್ಯವಹಾರ ನಡೆದಿದ್ದರೆ ಸರ್ಕಾರ ತನಿಖೆ ನಡೆಸಲು ಸಿದ್ದವಿದೆ ಎಂದು ಕಾಂಗ್ರೆಸ್ ನ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದರು.

ಶಿವಮೊಗ್ಗ ವಿಮಾನ ನಿಲ್ದಾಣದ ಪ್ರಾರಂಭಿಕ ಅಂದಾಜು ಮೊತ್ತ 220 ಕೋಟಿಗೆ ಇತ್ತು. ಇದನ್ನು ಎರಡು ಬಾರಿ ಪರಿಷ್ಕರಿಸಲಾಗಿದ್ದು, ಪ್ರಸ್ತುತ ಈ ಯೋಜನೆಗೆ 449.27 ಕೋಟಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಹಾಗೊಂದು ವೇಳೆ ಇದರಲ್ಲಿ ಅಕ್ರಮ ನಡೆದಿದ್ದರೆ ಸರ್ಕಾರ ತನಿಖೆಗೆ ಸಿದ್ದವಿದೆ ಎಂದು ತಿಳಿಸಿದರು.

Leave a Reply