ಕೋರ್ಟ್ ನಲ್ಲಿ ಪ್ರಕರಣ ಇತ್ಯರ್ಥವಾಗದ ಹೊರತು ಹೊಸ ಪಿಎಸ್‍ಐ ನೇಮಕಾತಿಗೆ ಕ್ರಮ ಕೈಗೊಳ್ಳುವುದಿಲ್ಲ: ಡಾ. ಜಿ.ಪರಮೇಶ್ವರ್

3 years ago

#No #action #taken #recruit #new #PSI #case #settled #court #GParameshwar

ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ನಲ್ಲಿ ತಕರಾರು ಅರ್ಜಿ ಸಲ್ಲಿಕೆಯಾಗಿದೆ. ಕೋರ್ಟ್ ನಲ್ಲಿ ಈ ಪ್ರಕರಣ ಇತ್ಯರ್ಥವಾಗದ ಹೊರತು ಹೊಸ ಪಿಎಸ್‍ಐ ನೇಮಕಾತಿಗೆ ಕ್ರಮ ಕೈಗೊಳ್ಳುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ವಿಧಾನಸಭೆಗೆ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪಲ್ಲಿ ಬಿಜೆಪಿಯ ಸಿದ್ದು ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 545 ಪಿಎಸ್‍ಐ ಗಳ ನೇಮಕಾತಿಗಳ ಪ್ರಕರಣ ಹೈಕೋರ್ಟ್ ನ ವಿಚಾರಣೆಯಲ್ಲಿದೆ. ಅದು ಇತ್ಯರ್ಥ ಆಗದ ಹೊರತು ಹೆಚ್ಚುವರಿ 400 ಪಿಎಸ್‍ಐಗಳ ನೇಮಕಾತಿಯನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ. ಒಂದು ವೇಳೆ 545 ಪಿಎಸ್‍ಐಗಳ ನೇಮಕಾತಿಯನ್ನು ಪೂರ್ಣಗೊಳಿಸದೆ 2ನೇ ಹಂತದ ನೇಮಕಾತಿಯನ್ನು ಕೈಗೆತ್ತಿಕೊಂಡರೆ ಜೇಷ್ಠತೆಯ ಗೊಂದಲಗಳು ಸೃಷ್ಟಿಯಾಗುತ್ತವೆ ಎಂದು ತಿಳಿಸಿದರು.

100 ಕ್ಕೂ ಹೆಚ್ಚು ಸಾವು: ಬಿಜೆಪಿಯ ಸುರೇಶ್ ಕುಮಾರ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಬೆಂಗಳೂರು- ಮೈಸೂರು ದಶಪಥ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಕಳೆದ ಮಾರ್ಚ್ ನಿಂದ ಜೂನ್ ವರೆಗೂ 100 ಕ್ಕೂ ಹೆಚ್ಚು ಜನ ಅಪಘಾತದಲ್ಲಿ ಮೃತಪಟ್ಟು 335 ಮಂದಿ ಗಾಯಗೊಂಡಿದ್ದಾರೆಂದು ತಿಳಿಸಿದರು.

ರಸ್ತೆ ಉದ್ಘಾಟನೆಯಾದ ಮಾರ್ಚ್ ತಿಂಗಳಿನಲ್ಲಿ 19 ಮಾರಾಣಾಂತಿಕ, 42 ಮಾರಾಣಾಂತಿಕವಲ್ಲದ ಅಪಘಾತಗಳು ನಡೆದು 20 ಮಂದಿ ಮೃತಪಟ್ಟು, 63 ಮಂದಿ ಗಾಯಗೊಂಡಿದ್ದಾರೆ. ಏಪ್ರಿಲ್‍ನಲ್ಲಿ 75 ಅಪಘಾತಗಳು ಆಗಿ, 23 ಜನ ಸತ್ತಿದ್ದು, 73 ಮಂದಿ ಗಾಯಗೊಂಡಿದ್ದಾರೆ. ಮೇ ತಿಂಗಳಲ್ಲಿ 94 ಅಪಘಾತಗಳಲ್ಲಿ 29 ಮಂದಿ ಪ್ರಾಣ ಕಳೆದುಕೊಂಡು 93 ಮಂದಿ ಗಾಯಗೊಂಡಿದ್ದು, ಕಳೆದ ತಿಂಗಳು ಜೂ.ನಲ್ಲಿ 77 ಅಪಘಾತಗಳು ಆಗಿ 28 ಮಂದಿ ಸಾವನ್ನಪ್ಪಿ 96 ಮಂದಿ ಗಾಯಗೊಂಡಿದ್ದಾರೆ ಎಂದು ವಿವರಿಸಿದರು.

ಅಚ್ಚುಕಟ್ಟಾದ ರಸ್ತೆ ಜನರಿಗೆ ಅನುಕೂಲವಾಗುವ ಬದಲಾಗಿ ಸಾಕಷ್ಟು ನ್ಯೂನತೆಗಳಿಂದ ಕೂಡಿದೆ. ರಸ್ತೆ ತಿರುವುಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಪಥ ಶಿಸ್ತು ಪಾಲನೆ ಆಗುತ್ತಿಲ್ಲ. ಅಗತ್ಯ ಇರುವ ಕಡೆ ಸುರಕ್ಷತಾ ಸೂಚನಾ ಫಲಕಗಳನ್ನು ಅಳವಡಿಸದಿರುವುದರಿಂದ ಸಮಸ್ಯೆ ಆಗುತ್ತಿದೆ. ರಸ್ತೆ ಬದಿಯ ಬೇಲಿ ಕಿತ್ತುಹೋಗಿದ್ದು, ಜನ ರಸ್ತೆಗೆ ಬರುತ್ತಿದ್ದಾರೆ. ಹೀಗಾಗಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಸಂಚಾರ ವಿಭಾಗದ ಎಡಿಜಿಪಿಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸಲಾಗಿತ್ತು. ಪ್ರತಿ 35 ಕಿ.ಮೀ.ಗೆ ಒಂದರಂತೆ ಹೆದ್ದಾರಿ ಗಸ್ತು ವಾಹನಗಳಿರಬೇಕು. ಅಲ್ಲಲ್ಲಿ ವೇಗದ ಮಿತಿ ಅಳತೆಗೆ ಇಂಟರ್ ಸೆಕ್ಟರ್‍ಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.

Leave a Reply