ಬೆಂಗಳೂರು: ರಾಜ್ಯದ ಎಲ್ಲಾ ಸಹಕಾರ ಸಂಘಗಳ ಸದಸ್ಯರಾದ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಧಾನಪರಿಷತ್ ನಲ್ಲಿ ಹೇಳಿದ್ದಾರೆ.
ಬಿಜೆಪಿಯ ಪ್ರತಾಪ್ ಸಿಂಹ ನಾಯಕ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಯಶಸ್ವಿನಿ ಯೋಜನೆಯಡಿ ನೊಂದಾಯಿಸಿಕೊಂಡಿರುವ ಬಹುತೇಕ ಎಲ್ಲ ಕುಟುಂಬಗಳ 12.89 ಲಕ್ಷ ಕಾರ್ಡ್ಗಳ ಡೇಟಾ ಎಂಟ್ರಿ ಮಾಡಿ ಕಾರ್ಡ್ ಗಳನ್ನು ತಯಾರಿಸಿ ಜನವರಿ 7ರ ಅಂತ್ಯಕ್ಕೆ ಎಲ್ಲ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ರವಾನಿಸಲಾಗಿದೆ. ಉಪನಿಬಂಧಕರು ಸಂಬಂಧಿಸಿದ ಸಹಕಾರ ಸಂಘಗಳ ಮೂಲಕ ಫಲಾನುಭವಿಗಳಿಗೆ ಕಾರ್ಡ್ ಗಳನ್ನು ರವಾನಿಸುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕುಟುಂಬದಲ್ಲಿನ ಸದಸ್ಯರನ್ನು ಹೊರತುಪಡಿಸಿ ಬೇರೆ ಸದಸ್ಯರನ್ನು ಸೇರಿಸಿರುವುದು, ಒಂದಕ್ಕಿಂತ ಹೆಚ್ಚು ಸಂಘಗಳಲ್ಲಿ ಸೇರ್ಪಡೆಯಾಗಿರುವುದು ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ 18,153 ಕುಟುಂಬಗಳ ಕಾರ್ಡ್ ಗಳ ಸುಮಾರು 70 ಸಾವಿರ ಸದಸ್ಯರಿಗೆ ಸಂಬಂಧಿಸಿದಂತೆ ಡೇಟಾ ಎಂಟ್ರಿ ಮಾಡಲು ಸಾಧ್ಯವಾಗಿಲ್ಲ ಎಂದು ಕಾರ್ಡ್ ಮುದ್ರಣಕಾರರು ತಿಳಿಸಿದ್ದಾರೆಂದು ವಿವರಿಸಿದರು.
ಇಂತಹ ದೋಷಗಳನ್ನು ಜಿಲ್ಲಾವಾರು ಪರಿಶೀಲಿಸಲಾಗುತ್ತಿದೆ. ಇದರ ನಂತರ ಅರ್ಹ ಫಲಾನುಭವಿಗಳ ವಿವರ ಪಡೆದು ಅಂತಹ ಎಲ್ಲ ಸದಸ್ಯರಿಗೆ ಈ ತಿಂಗಳ ಅಂತ್ಯದೊಳಗೆ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ನ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಸಹಕಾರಿಗಳು ಮತ್ತು ಜನಪ್ರತಿನಿಗಳು ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಲು ಒತ್ತಾಯ ಮಾಡಿದ ಹಿನ್ನಲೆಯಲ್ಲಿ ಸರ್ಕಾರ ಕಳೆದ ಬಜೆಟ್ನಲ್ಲೇ ಪರಿಷ್ಕೃತ ಯೋಜನೆಯನ್ನು ಜಾರಿಗೊಳಿಸಿ ಘೋಷಣೆ ಮಾಡಿದೆ. ಇದನ್ನು ಎರಡು ಬಾರಿ ವಿಸ್ತರಣೆ ಮಾಡಲಾಗಿತ್ತು. ಒಟ್ಟು 30 ಲಕ್ಷ ಸದಸ್ಯರನ್ನು ನೋಂದಣಿ ಮಾಡುವ ಗುರಿ ನಿಗದಪಡಿಸಿದ್ದು, ಈಗಾಗಲೇ 45 ಲಕ್ಷಕ್ಕೂ ಹೆಚ್ಚು ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
ರಾಜ್ಯಾದ್ಯಂತ ಇರುವ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆ ಕಲ್ಪಿಸಲು ಈ ಯೋಜನೆಯ ಅವಧಿಯನ್ನು ಡಿಸೆಂಬರ್ 23ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಉತ್ತರಿಸಿದರು.
2023ರ ಮಾರ್ಚ್ ಅಂತ್ಯಕ್ಕೆ 45 ಲಕ್ಷ ನೋಂದಣಿಯಾಗಿದೆ. ಪ್ರಸಕ್ತ ವರ್ಷದಲ್ಲಿ 22,499 ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. ಒಟ್ಟು 38.52 ಕೋಟಿ ರೂ. ಜಮೆ ಮಾಡಲಾಗಿದೆ. ಬಜೆಟ್ನಲ್ಲಿ 300 ಕೋಟಿ ಅನುದಾನ ಘೋಷಿಸಲಾಗಿತ್ತು. ಇದರಲ್ಲಿ 100 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಯಶಸ್ವಿನಿ ಯೋಜನೆಗೆ ವಯಸ್ಸಿನ ಮಿತಿಯಿಲ್ಲ. ಅಲ್ಲದೆ ಖಾಸಗಿ ವಿಮಾ ಏಜೆನ್ಸಿಯವರೊಂದಿಗೆ ನಾವು ಒಪ್ಪಂದ ಮಾಡಿಕೊಂಡಿರುವುದಿಲ್ಲ ಎಂದು ಹೇಳಿದರು.




