ಮೂಲಭೂತ ಹಕ್ಕುಗಳಿಗೆ ಬೆಲೆ ಇಲ್ಲದಂತಾಗಿ ತುರ್ತು ಪರಿಸ್ಥಿತಿಯತ್ತ ದೇಶ ಜಾರುವ ಆತಂಕ

4 years ago

ಚೇತನ್ ಕುಮಾರ್ ಅಲಿಯಾಸ್ ಚೇತನ್ ಅಹಿಂಸಾ ಎಂಬ ಸ್ಪುರದ್ರೂಪಿ ಕನ್ನಡ ಚಲನಚಿತ್ರ ನಟ, ಸಾಮಾಜಿಕ ಜಾಲತಾಣಗಳಲ್ಲಿ ಬಾಬ್ರಿ ಮಸೀದಿ, ಹಿಂದುತ್ವ, ಉರಿಗೌಡ – ನಂಜೇಗೌಡ ಮುಂತಾದ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರಂತೆ. ಅವುಗಳು ಆಕ್ಷೇಪಾರ್ಹವಾದವುಗಳೆಂದು / ಅವಹೇಳನಕಾರಿಯಾಗಿವೆಯೆಂದು ಖಾಸಗಿ ವ್ಯಕ್ತಿಯೋರ್ವರು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಚಿತ್ರನಟ ಚೇತನ್ಯವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ ನ್ಯಾಯಾಧೀಶರು ಚೇತನ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿ ವಿಚಾರಣೆಯನ್ನು ಇದೇ ತಿಂಗಳ 23 ನೇ ತಾರೀಖಿನಂದು ನಿಗದಿಪಡಿಸಿರುತ್ತಾರೆ.

ಚೇತನ್ ಪರ ವಕೀಲರು ವಕಾಲತ್ ದಾಖಲಿಸಿ, ಬಂಧನವನ್ನು ವಿರೋಧಿಸಿ ತಮ್ಮ ವಾದವನ್ನು ಮಂಡಿಸಿ ಜಾಮೀನು ಅರ್ಜಿಯನ್ನು ಸಲ್ಲಿಸಿರುತ್ತಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ತಕರಾರು ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಹಿಂದೆಯೂ ಸಹ ಶೇಷಾದ್ರಿಪುರಂ ಪೋಲಿಸ್ ಠಾಣೆ ಅಧಿಕಾರಿಗಳು ಚೇತನ್ ಅವರ ಹಿಂದಿನ ಟ್ವೀಟ್ ಓದಿ ಅದರಿಂದ ಸಾಮರಸ್ಯ ಹಾಳಾಗುವುದು ಎಂದು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಈ ಮೊಕದ್ದಮೆಯಲ್ಲಿ ಖಂಡಿತವಾಗಿಯೂ ಚೇತನ್ ಅವರಿಗೆ ಗೆಲುವು ಲಭಿಸುವ ಸಾಧ್ಯತೆ ಹೆಚ್ಚಿದೆ.

ಕೋರ್ಟಿನ ಆವರಣದಲ್ಲಿ ಮತ್ತು ಹೊರಗೆ ಸಾರ್ವಜನಿಕರು, ರಾಜ್ಯ ಸರ್ಕಾರವು ಮತ್ತು ಆಡಳಿತ ಪಕ್ಷವು ಚುನಾವಣೆ ಸನ್ನಿಹಿತವಾಗಿರುವುದರಿಂದ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ದಿನಕ್ಕೊಂದು ರೀತಿಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದು ಅವುಗಳ ಕುರಿತಾಗಿ ದನಿಯೆತ್ತಿದವರನ್ನು ಪೊಲೀಸರ ಮೂಲಕ ದಮನಿಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ವ್ಯಕ್ತಿಯೊಬ್ಬನ ವಿರುದ್ಧ ದೂರು ನೀಡಿದಾಕ್ಷಣ ಪೊಲೀಸರು ಬಂಧಿಸುವುದು ಮತ್ತು ದಂಡಾಧಿಕಾರಿಗಳ ನ್ಯಾಯಾಲಯಗಳು ತಮ್ಮ ವಿವೇಚನಾಧಿಕಾರವನ್ನು ಬಳಸದೆ ಜೇಲಿಗಟ್ಟುವುದು ಇವುಗಳಿಗೆ ಸುಪ್ರೀಂ ಕೋರ್ಟ್ ಅಂಕುಶ ಹಾಕಿ ಸ್ಪಷ್ಟ ನಿರ್ದೇಶನಗಳನ್ನು ರೂಪಿಸದಿದ್ದರೆ ಸಂವಿಧಾನಾತ್ಮಕವಾಗಿ ಭಾರತೀಯ ಪ್ರಜೆಗಳಿಗೆ ದತ್ತಕವಾಗಿರುವ ಅನೇಕ ಮೂಲಭೂತ ಹಕ್ಕುಗಳಿಗೆ ಬೆಲೆ ಇಲ್ಲದಂತಾಗಿ ಮತ್ತೆ 1975 – 77 ರ ನಡುವಿನ ತುರ್ತು ಪರಿಸ್ಥಿತಿಯತ್ತ ದೇಶ ಜಾರುವ ಆತಂಕವಿದೆ ಎಂದು ಇಂದು ಅನೇಕ ಹಿರಿಯ ವಕೀಲರುಗಳು ನ್ಯಾಯಾಲಯಗಳ ಮೊಗಸಾಲೆ ಮತ್ತು ವಕೀಲರ ಸಂಘದ ಸಭಾಂಗಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಚೇತನ್ ಅವರ ಅಭಿಪ್ರಾಯಗಳೆಲ್ಲವನ್ನು ಅಥವಾ ಆತನ ಯಾವುದೇ ಅಭಿಪ್ರಾಯವನ್ನು ನಾವು ಒಪ್ಪಬೇಕಾಗಿಲ್ಲ, ಆದರೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಆತನ ಹಕ್ಕನ್ನು ನಾವು ಬೆಂಬಲಿಸುವುದು ಇಂದಿನ ತುರ್ತು.

ನ್ಯಾಯಾಂಗದ ಕುರಿತು ಅಸಭ್ಯ ಅಸಂಸದೀಯ ಪ್ರತಿಕ್ರಿಯೆ ನೀಡಿ ನ್ಯಾಯಾಂಗ ನಿಂದನೆ ವ್ಯಾಜ್ಯಗಳಿಗೆ ತುತ್ತಾಗಬೇಡಿ.

– ಜಿ ಟಿ ನರೇಂದ್ರ ಕುಮಾರ್, ವಕೀಲರು ಮತ್ತು ಕಾನೂನು ಸಲಹೆಗಾರರು, ಬೆಂಗಳೂರು

Leave a Reply