ಕಳೆದ ಮೂರು ದಿನ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮತ್ತು ಶಿಗ್ಗಾಂವ ಸುತ್ತಿ ಅಲ್ಲಲ್ಲಿಯ ಸ್ಥಳೀಯರ ಮಾತುಗಳನ್ನು ಕೇಳುವುದು, ಮಾತಿಗೆ ತೊಡಗಿಕೊಳ್ಳುವುದು ಮಾಡಿ ಬಂದೆ. ಇನ್ನು ನಾಲ್ಕು ದಿನಗಳಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.
ನಾನು ಸುತ್ತಿದ ಕ್ಷೇತ್ರಗಳಲ್ಲಿ ಸಾಮಾನ್ಯವಾಗಿ ಆಡಳಿತದಲ್ಲಿರುವ ಬಿಜೆಪಿ ವಿರೋಧಿ ಅಲೆ ಇದೆ. ಆದರೆ, ಬಿಜೆಪಿಯನ್ನು ವಿರೋಧಿಸುವ ಪ್ರಮುಖ ಪಕ್ಷಗಳ ಕಸರತ್ತು ತೀರಾ ಕಡಿಮೆ ಇದೆ ಎಂದು ಢಾಳಾಗಿ ಕಾಣುವ ಅಂಶ. ಇದನ್ನು ಸ್ಥಳೀಯರೂ ಹೇಳುತ್ತಿದ್ದರು ಎನ್ನುವುದನ್ನು ಮುಖ್ಯವಾಗಿ ಗಮನಿಸಬೇಕು.
ಬಿಜೆಪಿ ತನ್ನ ಸಾಂಪ್ರದಾಯಿಕ ಮಾದರಿಯಲ್ಲಿ ಹೆಣೆದಿರುವ ಬೂತ್ ಹಂತದ ನೆಟ್ವರ್ಕಿಂಗ್ ಇತರ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಸರಳವಾಗಿ ಹೇಳುವುದಾದರೆ, ಅವು ಮಾಡಲಿಲ್ಲ. ಬಿಜೆಪಿ ರಾಜ್ಯದಲ್ಲಿ ಆಡಳಿತ ಹಿಡಿದ ನಂತರ, ಅದರಲ್ಲೂ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ಈ ನೆಟ್ವರ್ಕ್ ಅನ್ನು ತನ್ನ 40% ಫಂಡಿಂಗಿನಿಂದ ಇನ್ನಷ್ಟು ಆಳದಲ್ಲಿ ವಿಸ್ತರಿಸಿತು ಎನ್ನುವುದು ತಿಳಿದೇ ಇದೆ.
ಸ್ಥಳೀಯ ನಿರುದ್ಯೋಗಿ ಯುವಕರನ್ನು ಸೆಳೆದು ಪಕ್ಷದ ಕಾರ್ಯಕರ್ತರ ದೊಡ್ಡ ಪಡೆಯನ್ನು ನಿರ್ಮಿಸಿಕೊಂಡು ನಿಯಮಿತವಾಗಿ ಖರ್ಚಿಗೆ ದುಡ್ಡು, ಸೌಲಭ್ಯಗಳನ್ನು ಕೊಟ್ಟು ನಿರಂತರವಾಗಿ ತನಗೆ ಕೆಲಸ ಮಾಡುವಂತೆ ಉಳಿಸಿಕೊಂಡಿದೆ. ಈ ಹುಡುಗರಿಗೆ ದೇಶ, ಧ್ಯೇಯ, ಗುರಿ ಎಲ್ಲವೂ ಬಿಜೆಪಿ ಮತ್ತು ಆರೆಸ್ಸೆಸ್ ಹೇಳಿಕೊಟ್ಟ ಗಿಳಿಪಾಠವೇ ಆಗಿದೆಯೇ ಹೊರತು ಅವರು ಯಾರೂ ಸ್ವತಂತ್ರವಾಗಿ ಯೋಚಿಸುತ್ತಿಲ್ಲ. ಕೆಲಸ ಕೊಟ್ಟ ಧಣಿಗಳಿಗೆ ನಿಯತ್ತಾಗಿ ಇರುವುದು ಮಾತ್ರ ಅವರಲ್ಲಿ ಕಾಣುತ್ತಿದೆಯೇ ಹೊರತು, ಬಿಜೆಪಿ ಮತ್ತು ಆರೆಸ್ಸೆಸ್ ಅಂದರೆ ಏನೆಂದು ಗೊತ್ತಿಲ್ಲ. ಬೀದಿಯ ವಾರಿಗೆಯ ಹುಡುಗರಲ್ಲಿ ತಾವು ಸ್ಪೆಷಲ್ ಎಂದು ತೋರಿಸಿಕೊಳ್ಳುವುದಕ್ಕೆ ಅವಕಾಶವಾಗಿರುವುದು ಇನ್ನೊಂದು ಆಕರ್ಷಣೆ.
ಇನ್ನು ಕೆಲವು ಕಡೆ ಬಿಜೆಪಿಯ ನೆಟ್ವರ್ಕಿನಲ್ಲಿ ಜಾಗ ಸಿಗದವರು, ಬಿಜೆಪಿ ಹತ್ತಿರ ಬಿಟ್ಟುಕೊಳ್ಳದ ಅಲ್ಪಸಂಖ್ಯಾತ ಯುವಕರುಗಳು ಇತರೆ ಪಕ್ಷಗಳ ಯುವ ಕಾರ್ಯಕರ್ತರು. ಅಲ್ಲೂ ಎಲ್ಲ ಕಡೆಗಳಲ್ಲಿಯೂ ಯುವಕರು ಕಾಣುವುದಿಲ್ಲ. ನಲವತ್ತು ದಾಟಿದ ಕಾರ್ಯಕರ್ತರೇ ಇಂದಿಗೂ ಮುಂದುವರೆದಿದ್ದಾರೆ.
ಹೀಗಿದ್ದರೂ ಈ ಚುನಾವಣೆಯಲ್ಲಿ ಆಡಳಿತ ವಿರೋಧೀ ಅಲೆ ಹೆಚ್ಚು ಕಾಣುತ್ತಿರುವುದರಿಂದ, ಬಿಜೆಪಿಯ ಈ ಯುವ ಕಾರ್ಯಕರ್ತರ ನೆಟ್ವರ್ಕ್ ಬೆವರು ಸುರಿಸಿ ಕೆಲಸ ಮಾಡುತ್ತಿದ್ದರೂ ಅವರ ಬೆವರು ವ್ಯರ್ಥವಾಗುವ ಚಾನ್ಸು ಹೆಚ್ಚಾಗಿದೆ. ಆ ಭೀತಿ ಆ ಪಕ್ಷವನ್ನು ಆವರಿಸಿಕೊಂಡಿದೆ. ಇದನ್ನೇ ಗಟ್ಟಿಯಾಗಿ ಬಳಸಿಕೊಂಡು ವಿರೋಧಪಕ್ಷಗಳು ಈ ಕೊನೇ ಘಳಿಗೆಯಲ್ಲಾದರೂ ತಮ್ಮ ಕಾರ್ಯಕರ್ತರನ್ನು ಆಯಾ ಕ್ಷೇತ್ರಗಳ ಪ್ರತಿ ಬೂತಿನಲ್ಲಿಯೂ ಇನ್ನಷ್ಟು ಹುರುಪಿನಿಂದ ಕೆಲಸ ಮಾಡಲು ಹಚ್ಚಬೇಕಿತ್ತು. ಆ ಉತ್ಸಾಹ ಕಡಿಮೆ ಇದೆ.
ಬಿಜೆಪಿಗೆ ತನ್ನ ಆಡಳಿತದ ಸಾಧನೆಗಳನ್ನು ಹೇಳಿಕೊಳ್ಳುವ ಅಂಶಗಳು ತುಂಬಾ ಕಡಿಮೆ ಇವೆ. ಅದಕ್ಕೆ ತನ್ನ ಜನವಿರೋಧೀ ಆಡಳಿತದ ಪಟ್ಟಿಯನ್ನು ಮುಚ್ಚಿಟ್ಟುಕೊಳ್ಳುವುದೇ ಒಂದು ದೊಡ್ಡ ಸವಾಲಾಗಿದೆ. ಅದು ಬಿಜೆಪಿಗೇ ಚೆನ್ನಾಗಿ ಗೊತ್ತು. ಅವನ್ನು ಸಾಮಾಜಿಕ ಕಾರ್ಯಕರ್ತರು, ಪ್ರಗತಿಪರರು, ವಿರೋಧ ಪಕ್ಷಗಳು ಸಾಕಷ್ಟು ಯಶಸ್ವಿಯಾಗಿ ಜನರ ಮುಂದೆ ಇಡುತ್ತಿದ್ದಾರೆ. ಮಾರಿಕೊಂಡ ಮಾಧ್ಯಮಗಳ ವರಾತ ಸಾಮಾಜಿಕ ಶಕ್ತಿಗಳ ಮುಂದೆ ಏನೂ ಇಲ್ಲ ಎನ್ನುವಷ್ಟು ಪರಿಣಾಮಕಾರಿಯಾಗಿ ಈ ಕೆಲಸ ನಡೆಯುತ್ತಿದೆ. ಆದರೆ, ಸಾಮಾಜಿಕ ಶಕ್ತಿಗಳ ರೀಚ್ ಅನೇಕ ಸಾರಿ ಲಿಮಿಟೆಡ್ ಆಗಿರುವ ಸಾಧ್ಯತೆಗಳೇ ಹೆಚ್ಚು. ಅವು ದೊಡ್ಡ ಸಂಖ್ಯೆಯ ಜನರನ್ನು ಮುಟ್ಟಬೇಕಾದ ವೇಗದಲ್ಲಿ ಮುಟ್ಟುವುದು ಕಷ್ಟ.
ಸಾಮಾಜಿಕ ಶಕ್ತಿಗಳ ನಿಲುವುಗಳಿಗೂ ಸ್ಥಳೀಯ ಬೂತ್ ಮತ್ತು ಕ್ಷೇತ್ರದ ಹಂತದಲ್ಲಿನ ಸೂತ್ರಗಳಿಗೂ ದೊಡ್ಡ ಕಂದಕಗಳು ಇವೆ. ಸಾಮಾಜಿಕ ಶಕ್ತಿಗಳು ಇಲ್ಲಿ ಪ್ರಜಾಪ್ರಭುತ್ವ, ಸಂವಿಧಾನ, ಸಮಾನತೆ, ಸಹಬಾಳ್ವೆ ಎಂದೆಲ್ಲ ಮಾತಾಡಿದರೆ, ಸ್ಥಳೀಯರಲ್ಲಿ ಅಭಿಪ್ರಾಯ ಮೂಡಿಸುವ, ಅಭಿಪ್ರಾಯ ಕಲೆಹಾಕುವ ಮತ್ತು ಒಂದು ತೆರನಾಗಿ ಓಟು ಮಾಡಿಸುವ ಪ್ರೇರಣೆಗಳೇ ಬೇರೆ.
ಈ ಚುನಾವಣೆ ಬರೀ ಇನ್ನೊಂದು ಚುನಾವಣೆಯಲ್ಲ, ದೇಶದ ಪ್ರಜಾತಂತ್ರವನ್ನು ಉಳಿಸಿಕೊಳ್ಳಲು ಜನತೆ ತನ್ನ ಶಕ್ತಿಯನ್ನು ಸಾಬೀತುಪಡಿಸಿಕೊಳ್ಳಬೇಕಾದ ಚುನಾವಣೆ ಎಂದು ಸಾಮಾಜಿಕ ಶಕ್ತಿಗಳು ಎಷ್ಟೆಲ್ಲ ಹೇಳಿದರೂ, ಅದು ಸಮಾಜದ ಎಲ್ಲ ಹಂತದಲ್ಲೂ ಪಸರಿಸಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಡಿಜಿಟಲ್ ಅಲ್ಲದ, ಮಾಧ್ಯಮಗಳಿಗೆ ತೆರೆದುಕೊಳ್ಳದ ಬಹುದೊಡ್ಡ ಜನಸಂಖ್ಯೆಯಲ್ಲಿ ಬೆಲೆ ಏರಿಕೆ, ಮುಂತಾದ ಕೆಲವು ಕಾರಣಗಳು ಆಡಳಿತ ವಿರೋಧಿ ಭಾವ ಮೂಡಿಸಿದೆ. ಅಲ್ಪಸಂಖ್ಯಾತ ವರ್ಗಗಳ ಈ ಆಡಳಿತ ವಿರೋಧಿ ಭಾವನೆಗೆ ಇನ್ನಷ್ಟು ವಿಸ್ತಾರವಿದೆ. ಅಷ್ಟು ಬಿಟ್ಟರೆ, ಆ ಜನಸಂಖ್ಯೆಗೆ ಇದು ಮತ್ತೊಂದು ಚುನಾವಣೆ ಎಂದಷ್ಟೇ ಕಾಣುತ್ತಿದೆ ಎನ್ನುವುದು ಬಹುತೇಕ ಹೌದು.
ಬೂತ್ ಹಂತದಿಂದಲೂ ವ್ಯಕ್ತಿ ಪ್ರತಿಷ್ಠೆ, ಅದರಿಂದ ಉಂಟಾಗುವ ಒಡಕುಗಳು ಪಕ್ಷಗಳಲ್ಲೇ ಆಂತರಿಕವಾಗಿ ಕಾಣುತ್ತಿದ್ದವು. ಕೆಲವು ಜಾತಿ, ಧರ್ಮಗಳಲ್ಲೂ ಒಳಗೊಳಗೇ ಒಡಕುಗಳಿವೆ. ಮುಸ್ಲಿಮರಲ್ಲಿ ಎಲ್ಲರೂ ಒಂದೇ ಎಂದು ಹೇಳಲು ಬರುವುದಿಲ್ಲ. ಅವರನ್ನು ತಮ್ಮ ತಮ್ಮ ಕಡೆಗೆ ಸೆಳೆಯಲು ಹಲವು ರಾಜಕೀಯ, ಆಂತರಿಕ ಧಾರ್ಮಿಕ ಶಕ್ತಿಗಳೂ ಕೆಲಸ ಮಾಡುತ್ತಿವೆ. ಹಾಗೆಯೇ, ಲಿಂಗಾಯ್ತರಲ್ಲಿಯೂ ಇಂಥಾ ಒಡಕುಗಳನ್ನು ಕಾಣಬಹುದು.
‘ಬಿಜೆಪಿ ಈ ಬಾರಿ ಒಂದು ಓಟಿಗೆ ಐದರಿಂದ ಹತ್ತು ಸಾವಿರ ಕೊಡಲೂ ತಯಾರಾಗುತ್ತಿದೆ, ನಮ್ಮ ಪಕ್ಷ ಇನ್ನೂ ಒಂದು ಸಾವಿರ ಎನ್ನುವುದಕ್ಕೂ ಹಿಂದುಮುಂದು ನೋಡುತ್ತಿದೆ, ನಾವು ಹೆಂಗೆ ಓಟು ಹಾಕಿಸ್ಬೇಕು ಹೇಳ್ರಿ?’ ಎನ್ನುವುದು ಇತರ ಪಕ್ಷಗಳ ಕಾರ್ಯಕರ್ತರ ವಿಶೇಷ ಅಳಲಾಗಿತ್ತು. ಅದು ತನ್ನ ಪ್ರತಿಸ್ಪರ್ಧಿ ಬಿಜೆಪಿ ಕಾರ್ಯಕರ್ತನ ಮೇಲಿನ ಈರ್ಷೆ ಎಂದೇ ಹೆಚ್ಚು ಕಾಣುತ್ತಿತ್ತು ಎನ್ನುವುದು ಬೇರೇ ವಿಷಯ.
ಕೆಲವು ಕ್ಷೇತ್ರಗಳಲ್ಲಿ ಸಾಂಪ್ರದಾಯಿಕ ಉಳಿಗಮಾನ್ಯ ಲೀಡರುಗಳ ನಡುವೆ ಸಿಂಡಿಕೇಟ್ ಒಪ್ಪಂದ ಆಗಿ, ಅವರವರೇ ಅಧಿಕಾರ ಹಂಚಿಕೊಳ್ಳುವುದೂ ನಡಿದಿರಬಹುದು, ಇಲ್ಲದಿದ್ದರೆ ಒಬ್ಬ ಪ್ರಭಾವೀ ಅಭ್ಯರ್ಥಿಯ ಮುಂದೆ ಒಬ್ಬ ಸಾಮರ್ಥ್ಯವೇ ಇಲ್ಲದ ವ್ಯಕ್ತಿಗೆ ಹೇಗೆ ಟಿಕೆಟ್ ದೊರಕಲು ಸಾಧ್ಯ? ಎನ್ನುವ ಅನುಮಾನಗಳನ್ನೂ ಕೆಲವರು ಹೊರಹಾಕಿದರು.
ಮತದಾರರ ಪಟ್ಟಿಯಿಂದ ಕೆಲವು ಮುಸ್ಲಿಂ ಕುಟುಂಬಗಳ ಹೆಸರುಗಳು ಡಿಲೀಟ್ ಆಗಿದ್ದರೂ, ಅವು ಮತ್ತೆ ಸೇರ್ಪಡೆ ಆಗಿವೆ ಎಂದು ಕೆಲವರು ಹೇಳಿದರು. ಕೆಲವು ಕ್ಷೇತ್ರಗಳ ದೇವಸ್ಥಾನ, ಮಸೀದಿಗಳಿಗೆ ಪ್ರಭಾವೀ ಬಿಜೆಪಿ ಶಾಸಕರುಗಳು ಹಿಂದೆ ನೀಡಿದ ಫಂಡಿಗಿಂತ ಡಬ್ಬಲ್ ವ್ಯವಸ್ಥೆ ಮಾಡಿದ್ದಾರೆ ಎನ್ನುವ ಮಾತುಗಳೂ ಕೇಳಿಸಿದವು.
ಕೆಲವು ಬೂತುಗಳಲ್ಲಿ ಅಜ್ಮೀರ್ ದರ್ಗಾ ಯಾತ್ರೆ ಏರ್ಪಾಡು ಮಾಡಿ ಇನ್ನೂರು ಮುನ್ನೂರು ಮುಸ್ಲಿಮರನ್ನು ಕಳಿಸಿ, ಚುನಾವಣೆ ದಿನ ಅವರು ಯಾರೂ ಮತ ಚಲಾಯಿಸದಂತೆ ಗೈರಾಗಿಸುವ ತಂತ್ರಗಳೂ ನಡೆಯುತ್ತಿವೆ ಎಂಬ ಮಾತುಗಳು ಕೇಳಿಬಂದವು.
ಇನ್ನೂ ಸರಳವಾದ ತಂತ್ರವೆಂದರೆ, ಚುನಾವಣೆಯ ದಿನವೇ ನಲ್ಲಿ ನೀರು ಬಿಟ್ಟು, ಮಹಿಳೆಯರು ನೀರು ತುಂಬಿಸಿಕೊಳ್ಳುವಲ್ಲಿ ಎಂಗೇಜ್ ಮಾಡಿ, ಅವರು ಮತ ಚಲಾಯಿಸಲು ಬರಲಾಗದಂತೆ ಮಾಡುವುದು. ಒಟ್ಟಲ್ಲಿ ಮುಸ್ಲಿಮರ ಓಟಿನ ಸಂಖ್ಯೆ ಎಷ್ಟು ಕಡಿಮೆಯಾದರೆ ಅಷ್ಟು ಬಿಜೆಪಿಗೆ ಲಾಭ ಎನ್ನುವ ಇಂಥಾ ಹತ್ತಾರು ತಂತ್ರಗಳು ಕೆಲಸ ಮಾಡುತ್ತಿವೆ ಎನ್ನುವುದನ್ನು ಪೂರ್ತಿ ತೆಗೆದುಹಾಕಲಾಗುವುದಿಲ್ಲ.
ಈ ನಡುವೆ ವಿರೋಧ ಪಕ್ಷಗಳ ಅನೇಕ ಅಭ್ಯರ್ಥಿಗಳಿಗೆ ಈ ಚುನಾವಣೆಯ ನಿಜವಾದ ಮಹತ್ವ ತಿಳಿದಿದೆಯೋ, ಅಥವಾ ಅವರುಗಳೂ ಇದನ್ನು ಮತ್ತೊಂದು ಚುನಾವಣೆ ಎಂದಷ್ಟೇ ಭಾವಿಸಿದ್ದಾರೋ ಎನ್ನುವ ಅನುಮಾನವೂ ಸುಳಿಯದೇ ಇರಲಿಲ್ಲ. ಆಡಳಿತ ವಿರೋಧಿ ಅಲೆಯಿದೆ, ತಾವೇ ಸರ್ಕಾರ ರಚಿಸುತ್ತೇವೆ ಎನ್ನುವ ಅತಿ ಆತ್ಮವಿಶ್ವಾಸವನ್ನು ಇತರ ಪಕ್ಷಗಳು ಈಗಲಾದರೂ ಬದಿಗಿಟ್ಟು, ಬಿಜೆಪಿಯ ವಿರುದ್ಧ ಮುಂದಿನ ಮೂರು ದಿನ ಗ್ರಾಸ್’ರೂಟ್ ಹಂತದಿಂದಲೂ ಕೆಲಸ ಮಾಡಿದ್ದೇ ಆದರೆ ಖಂಡಿತವಾಗಿಯೂ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬಹುದು ಎಂದಂತೂ ಅನಿಸಿತು.
- ಕೇಸರಿ ಹರವೂ




