ಲಾಭ ಇಲ್ಲದೆ ಬಿಜೆಪಿಗರು ನಾಯಿಗೂ ಅನ್ನ ಹಾಕಲ್ಲ
ನಾನು ಸಂಘಪರಿವಾರದಲ್ಲಿ ಸಕ್ರಿಯವಾಗಿರುವಾಗಿನ ನೆನಪುಗಳಿಂದ, ವಿಧಾನಸಭಾ ಚುನಾವಣೆಯ ಸಂದರ್ಭ, ನಾನು ಸಕ್ರಿಯವಾಗಿದ್ದ ಸಂಘಟನೆಯ ನಾಯಕರೊಬ್ಬರನ್ನು ಪೊಲೀಸರು ಬಂಧಿಸಿದರು ಎನ್ನುವ ಸುದ್ದಿ ಬಂದಿತು. ಸುದ್ದಿ ತಿಳಿದಾಕ್ಷಣ ನಾವೆಲ್ಲ ಕಾರ್ಯಕರ್ತರು ಉಡುಪಿ ಜಿಲ್ಲಾ ಕೇಂದ್ರಕ್ಕೆ ತೆರಳಿದೆವು. ರಾತ್ರಿ ಎಂಟು ಗಂಟೆಯಾಗಿತ್ತು, ನಾಯಕರ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಅದಾಗಲೇ ಅಲ್ಲಿ ಸುಮಾರು ಎರಡು ಸಾವಿರದಷ್ಟು ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಯಾವ ಪ್ರಕರಣ, ಯಾಕೆ ಬಂಧನ ಮಾಡಲಾಗಿದೆ, ಆರೋಪ ಏನು ಎನ್ನುವ ಯಾವುದೇ ಮಾಹಿತಿ ಇಲ್ಲದೆ ಗೊಂದಲ್ಲಿದ್ದು ಆಕ್ರೋಶಿತರಾಗಿದ್ದ ಕಾರ್ಯಕರ್ತರ ಕೋಪವನ್ನು ತಣಿಸಲು ಕೆಲವು ಪ್ರಮುಖರು ಎನಿಸಿಕೊಂಡವರು ಸಮಾಧಾನಪಡಿಸುವುದು ಎಲ್ಲ ನಡೆಯುತ್ತಿತ್ತು… ಕಡೆಗೆ ಪೊಲೀಸರಿಂದ ಒಂದು ಮಾಹಿತಿ ಬಂದಿತು, ಗೂಂಡಾ ಕಾಯ್ದೆಯಡಿ ನಿಮ್ಮ ನಾಯಕರನ್ನು ಬಂಧನ ಮಾಡಲಾಗಿದೆ. ಈಗ ರಾತ್ರಿಯಲ್ಲಿ ಅವರನ್ನು ಗುಲ್ಬರ್ಗ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾರೆ ಎನ್ನುವ ಮಾಹಿತಿ ದೊರೆಯಿತು.
ಬಂಧನಕ್ಕೊಳಗಾದ ನಾಯಕರು ನನ್ನ ಆತೀಯರು ಹಾಗೂ ಅವರ ಮೇಲೆ ವಿಪರೀತ ಅಭಿಮಾನ ಇರಿಸಿದ್ದ ನಾನು ನಂತರದ ದಿನಗಳಲ್ಲಿ ಗುಲ್ಬರ್ಗ ಕೇಂದ್ರ ಕಾರಾಗೃಹಕ್ಕೆ ಎರಡು ಬಾರಿ ಹೋಗಿ ಭೇಟಿಯಾಗಿ ಊಟ ತಿಂಡಿ ಕೊಟ್ಟು ಬಂದಿದ್ದೆ. ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾದ ವ್ಯಕ್ತಿಯನ್ನು ಭೇಟಿಯಾಗಲು ಬಂದವರು ಎನ್ನುವ ಮಾಹಿತಿ ತಿಳಿದಾಕ್ಷಣ ಅಲ್ಲಿನ ಕಡುಕೋಪಿ ಜೈಲರ್ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಲು ಪೋಲಿಸರಿಗೆ ಆದೇಶ ಕೊಟ್ಟು ಜೈಲಿನ ಆವರಣದಿಂದ ಓಡಿಸಿದ್ದ, ಕೈಯಲ್ಲಿದ್ದ ಊಟ ತಿಂಡಿ ಬಿಟ್ಟು ಜೈಲಿನ ಆವರಣದಿಂದ ಓಡಿದ ನೆನಪು ಈಗಲೂ ಇದೆ. ನಂತರ ಅಲ್ಲಿನ ಸ್ಥಳೀಯ ವಕೀಲರೊಬ್ಬರ ಸಹಾಯದಿಂದ ನಮ್ಮ ಭೇಟಿ ಸಾಧ್ಯವಾಯಿತು. ನೋಡಲು ಸಿನೆಮಾ ನಟರಂತೆ ಆಕರ್ಷಕವಾಗಿ ಸ್ಪುರದ್ರೂಪಿಯಾಗಿದ್ದ ನಮ್ಮ ನಾಯಕ ಗುಲ್ಬರ್ಗದ ರಣ ಬಿಸಿಲಿಗೆ ಬಸವಳಿದು ಹೋಗಿದ್ದು ಕಂಡು ಬೇಸರವಾಗಿತ್ತು.
ಈ ಮಧ್ಯೆ ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶವೂ ಬಂದಿತ್ತು, ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಂದಿತ್ತಾದರೂ ಸುಳ್ಯದಿಂದ ಹೊನ್ನಾವರದ ತನಕ ಬಿಜೆಪಿ ಶಾಸಕರು ಗೆದ್ದಿದ್ದರು. ಹಲವಾರು ತಿಂಗಳುಗಳ ಕಾಲ ಗುಲ್ಬರ್ಗ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿದ್ದ ನಮ್ಮ ನಾಯಕರು ನಂತರದ ದಿನದಲ್ಲಿ ಸರ್ಕಾರ ಬಂಧಮುಕ್ತಗೊಳಿಸಿತು. ಗೂಂಡಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಹಲವಾರು ತಿಂಗಳುಗಳ ಕಾಲ ಸೆರೆಮನೆ ವಾಸ ಅನುಭವಿಸಿ ಗುಲ್ಬರ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡು ವಾಪಾಸ್ ಉಡುಪಿಗೆ ಬರುತ್ತಿದ್ದ ಇದೇ ನಾಯಕನನ್ನು ನಾವು ಮೆರವಣಿಗೆ ಮೂಲಕ ಸ್ವಾಗತಿಸಬೇಕು ಎನ್ನುವ ಹುಮ್ಮಸ್ಸಿನಲ್ಲಿದ್ದ ನಮಗೆ ಇದೇ ಸಂಘಪರಿವಾರದ ನಾಯಕರ ಸೂಚನೆ ಬಂದಿತ್ತು ಯಾವುದೇ ಕಾರಣಕ್ಕೂ ಮೆರವಣಿಗೆ ಮಾಡಕೂಡದು. ಯಾವುದೇ ಕಾರಣಕ್ಕೂ ಆತನಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಕೊಡಬಾರದು…! ಅದಾಗಲೇ ಆ ನಾಯಕನಿಗೆ ಸಾವಿರಾರು ಅಭಿಮಾನಿಗಳಿದ್ದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಪ್ರಚಾರ ಕೊಟ್ಟಿದ್ದು ಈ ಸಂಘಪರಿವಾರದ ಕೆಂಗಣ್ಣಿಗೆ ಕಾರಣವಾಗಿತ್ತು.
ಎರಡು ಪುಟ್ಟ ಪುಟ್ಟ ಕಂದಮ್ಮಗಳ ತಂದೆಯಾಗಿದ್ದರೂ ತನ್ನ ಕುಟುಂಬವನ್ನು ಬದಿಗಿಟ್ಟು ಇದೇ ಸಂಘಪರಿವಾರದ ನಾಯಕತ್ವ ವಹಿಸಿ ಹಲವಾರು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ ನಂತರ ವಾಪಾಸ್ ಜಿಲ್ಲೆಗೆ ಆಗಮಿಸಿದಾಗ ಆತನನ್ನು ಮೆರವಣಿಗೆ ಮೂಲಕ ಸ್ವಾಗತಿಸುವಂತಿಲ್ಲ ಎಂದು ಫರ್ಮಾನು ಹೊರಡಿಸುವ ಸಂಘಪರಿವಾರದ ನಾಯಕರ ವರ್ತನೆ ಕಂಡು ನನಗೆ ಅಘಾತವಾಗಿತ್ತು…!
ಸ್ವಾಮೀಜಿಯೊಬ್ಬರು ಆ ನಾಯಕನ ಮನೆಗೇ ಹೋಗಿ ಭೇಟಿಯಾಗಿದ್ದು ಬಿಟ್ರೆ ಬೇರೆ ಯಾವ ಬಿಜೆಪಿ ನಾಯಕನಾಗಲಿ, ಹಿಂದು ಸಂಘಟನೆಗಳ ಕಾರ್ಯಕರ್ತರ ಭಿಕ್ಷೆಯಿಂದ ಗೆದ್ದ ಅಷ್ಟೂ ಡಜನ್ ಗಟ್ಟಲೆ ಬಿಜೆಪಿ ಶಾಸಕರಲ್ಲಿ ಯಾವನೂ ಕೂಡ ಈ ನಾಯಕನನ್ನು ಭೇಟಿಯಾಗಿದ್ದು ಇಲ್ಲ…!
ಇಷ್ಟೆಲ್ಲಾ ಕಥೆ ಕಾದಂಬರಿ ಬರೆಯುವ ಮನಸು ಯಾಕಾಯಿತೆಂದರೆ ಒಬ್ಬ ಕಿಡಿಗೇಡಿ, ಕೊಲೆ ಆರೋಪಿ, ಸ್ಟ್ರೀಟ್ ರೌಡಿಯೊಬ್ಬ ಗೂಂಡಾ ಕಾಯ್ದೆಯಡಿ ಜೈಲಿಗೆ ಹೋಗಿ ಬಂದು ಪ್ರಚಾರಕ್ಕಾಗಿ ಉಪವಾಸ ಮಾಡಿದರೆ ಅತನನ್ನು ಕಾಣಲು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಸಿಟಿ ರವಿ, ಹಾಗೂ ನಮ್ಮ ಕರಾವಳಿಯ ಬಿಜೆಪಿ ಶಾಸಕರು, ಮತ್ತು ಡ್ರಾಪ್ ಔಟ್ ಅರುಣ್ ಪುತ್ತಿಲರಂತವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಸೆಕ್ಯುರಿಟಿ ಗಾರ್ಡ್ ಗಳಲ್ಲಿ ವಿನಂತಿ ಮಾಡ್ಕೊಂಡು ಹೋಗಿ ಹೋಗಿ ಆ ಕಿರಾತಕ ಮಲಗಿರುವ ಬೆಡ್ ಪಕ್ಕ ಕೂತು ಸಂತೈಸಿ ಬರುತ್ತಾರೆಂದರೆ ಏನರ್ಥ…! ಅರ್ಥವಿದೆ… ಕಾರಣವಿಲ್ಲದೆ ಬಿಜೆಪಿಗರು ನಾಯಿಗೂ ಅನ್ನ ಹಾಕಲ್ಲ.
ಇವರ ಈ ವರ್ತನೆಗೆ ಒಂದು ಕಾರಣವಿದೆ, ಕರಾವಳಿಯಲ್ಲಿ ಬಿಜೆಪಿ ಪ್ರಭಾವ ಸಾಕಷ್ಟಿದೆ, ಹಾಗಾಗಿ ಇಲ್ಲಿ ಇನ್ನು ಹಿಂದುತ್ವದ ನಾಯಕರ ಅವಶ್ಯಕತೆ ಇಲ್ಲ. ಕೇವಲ RSS ಸೂಚನೆ ಪಾಲಿಸುವ ಆಜ್ಞಾಪಾಲಕರು ಮತ್ತು ಸಂಘಟನೆಯಿಂದಲೇ ಜೀವನ ಪೊರೆಯುವಂತಹ ಕೇವಲ ನಾಮ್ಕೆವಾಸ್ತೆ ನಾಯಕರು ಇದ್ದರೆ ಸಾಕು. ಯಾಕೆಂದರೆ ಇಲ್ಲಿ ಬಿಜೆಪಿಯನ್ನು ಸದ್ಯ ಸೋಲಿಸುವಂತಿಲ್ಲ. ಕರಾವಳಿಯಲ್ಲಿ ಹಿಂದುತ್ವದ ನಾಯಕರು ಗಲ್ಲಿಗಲ್ಲಿಗೂ ಅಂದರೆ ನಮ್ಮ ತುಳು ಭಾಷೆಯಲ್ಲಿ ಹೇಳಬೇಕೆಂದರೆ “ನಾಯಿಸಂತೆ” ಇದ್ದಾರೆ, ಅದರ ಅವಶ್ಯಕತೆ ಬಿಜೆಪಿಗೆ ಸದ್ಯ ಇಲ್ಲಿ ಇಲ್ಲ.
ಆದರೆ ಬಿಜೆಪಿಗೆ ಅಧಿಕಾರ ಪಡೆಯಲು ಕೇವಲ ಕರಾವಳಿ ಮಾತ್ರ ಸಾಕಾಗಲ್ಲ, ಅದಕ್ಕೆ ಬೇಕಾಗಿರುವುದು ಘಟ್ಟದ ಮೇಲಿನ ಜಿಲ್ಲೆಗಳು ಹಾಗೂ ರಾಜ್ಯ ರಾಜಧಾನಿ ಬೆಂಗಳೂರು ಕೇಂದ್ರೀಕೃತವಾಗಿ ಒಬ್ಬ ಹಿಂದುತ್ವದ ನಾಯಕ ಬೇಕು. ಅಲ್ಲಿ ಟಾರ್ಚ್ ಹಾಕಿ ಹುಡಿಕಿದರೂ ಇವರ ಈ ದಾಳಕ್ಕೆ ಬಲಿಯಾಗುವವನು ಯಾವನೂ ಇಲ್ಲ. ಅದಕ್ಕೆಂದೇ ಪುನೀತ್ ಕೆರೆಹಳ್ಳಿ ಎನ್ನುವ ಕಿಡಿಗೇಡಿಗೆ ಇಷ್ಟು ಮಹತ್ವ ಬಂದಿದ್ದು. ಇದು ಕೇಂದ್ರ ಬಿಜೆಪಿಯ ರಹಸ್ಯ ಕಾರ್ಯಸೂಚಿಯ ಭಾಗವಾಗಿರಲೂಬಹುದು. ಅದಕ್ಕಾಗಿಯೇ ಈ ಸ್ಟ್ರೀಟ್ ರೌಡಿ, ಕಿಡಿಗೇಡಿಯನ್ನು ಭೇಟಿಯಾಗಲು ಅರಗ ಜ್ಞಾನೇಂದ್ರ, ಸಿಟಿ ರವಿಯಂತಹ ರಾಜ್ಯ ನಾಯಕರು ಭೇಟಿಯಾಗಿದ್ದು.
ಅಧಿಕಾರದಲ್ಲಿದ್ದು ಸೋತು ಸುಣ್ಣವಾಗಿರುವ ಬಿಜೆಪಿಗೆ ಸದ್ಯ ಆಡಳಿತ ಪಕ್ಷವನ್ನು ಎದುರಿಸಲು ವಿರೋಧ ಪಕ್ಷದ ನಾಯಕನೂ ಇಲ್ಲ, ಸರ್ಕಾರವನ್ನು ವಿರೋಧಿಸಲು ಸರಿಯಾದ ಕಾರಣಗಳೂ ಇಲ್ಲ. ಅದಕ್ಕಾಗಿ ಇಂತಹ ಕಿಡಿಗೇಡಿಗಳನ್ನು ಮುಂದಿಟ್ಟುಕೊಂಡಿದೆಯೆಂದರೆ ರಾಜ್ಯ ಬಿಜೆಪಿ ಹಾಗೂ ಸಂಘಪರಿವಾರ ಅದೆಷ್ಟು ನೈತಿಕವಾಗಿ ದಿವಾಳಿಯಾಗಿದೆ ಎಂದು ಊಹಿಸಿಕೊಳ್ಳಿ.
ಹಿಂದುತ್ವಕ್ಕಗಾಗಿ ತನ್ನದೆಲ್ಲವನ್ನೂ ಕಳೆದುಕೊಂಡರೂ ಪ್ರಚಾರವನ್ನೇ ಪಡೆಯದ, ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡದ ಕರಾವಳಿಯ ಯಾವ ಮಹಾನ್ ತ್ಯಾಗಮಯಿ ಹೋರಟಗಾರ ಹಿಂದೂ ನಾಯಕನಿಗೂ ಇಲ್ಲದ ಮರ್ಯಾದೆ ಗೌರವಗಳು ಒಬ್ಬ ಪ್ರಚಾರಪ್ರಿಯ ಕಿಡಿಗೇಡಿಗೆ, ಗೂಗಲ್ ಪೇ, ಫೋನ್ ಪೇಯಲ್ಲಿ ಭಿಕ್ಷೆ ಬೇಡುವವನಿಗೆ, ಇದೆಯೆಂದರೆ ಕರಾವಳಿ, ತುಳುನಾಡಿನ ಹಿಂದು ಸಂಘಟನೆಗಳ ಹುಡುಗರು ಯೋಚನೆ ಮಾಡಬೇಕು.
– ಪ್ರದೀಪ್ ಬೇಳಾಡಿ ಕಾರ್ಕಳ




