ಮತ್ತೆ ರಂಗಕ್ಕಿಳಿದ ಪಿಶಾಚಿಗಳು
ಕಳೆದ ವರ್ಷ ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ಹಾಗೂ ಮೈಸೂರು ರಂಗಾಯಣದ ಮೂಲಕ ದಶಾವತಾರದ ಪ್ರದರ್ಶನ ನೀಡಿದ ವಕ್ರತೀರ್ಥ ಮತ್ತು ಕೊಡಗಿನ ಕೋಡಂಗಿ ಎಂಬ ಕನ್ನಡ ಸಾಂಸ್ಕೃತಿಕ ಲೋಕದ ಪಿಶಾಚಿಗಳು ಇದೀಗ ಈರಾದಿ ಈರ ಎಂಬ ಕೃತಿಯ ಮೂಲಕ ಮತ್ತೆ ರಂಗಕ್ಕಿಳಿದ್ದಿದ್ದಾರೆ.
ಕರಿನೀರ ವೀರ ಎಂಬ ಸಾವರ್ಕರ್ ಕಥನ ಕುರಿತ ಕೃತಿ ನಿನ್ನೆ ಮೈಸೂರಿನಲ್ಲಿ ಬಿಡುಗಡೆಯಾಗಿದೆ. ಪಠ್ಯಪುಸ್ತಕಗಳನ್ನು ತಿರುಚಿದ ಕಾರಣಕ್ಕಾಗಿ ಸರ್ಕಾರಕ್ಕೆ ಐದು ಕೋಟಿ ರೂಪಾಯಿನಷ್ಟು ನಷ್ಟ ಮಾಡಿದ ಗಟಾರದ ತೀರ್ಥ ಮತ್ತು ರಂಗಾಯಣದ ಮೂಲಕ ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ ಟಿಪ್ಪುವಿನ ಇತಿಹಾಸವನ್ನು ತಿರುಚಿ ಸುಮಾರು ಎಂಬತ್ತು ಲಕ್ಷ ಖರ್ಚನ್ನು ತೋರಿಸಿದ ಕೊಡಗಿನ ಎಡಬಿಡಂಗಿ ಕಾರಿಯಪ್ಪ ಮತ್ತೆ ಇತಿಹಾಸ ತಿದ್ದಲು ಸಿದ್ಧವಾಗುತ್ತಿದ್ದಾರೆ. ಕಳೆದ ವರ್ಷ ಮೈಸೂರಿನ ರಂಗಾಯಣದ ಬಹುರೂಪಿ ಉತ್ಸವಕ್ಕೆ ಜನವರಿ ಮತ್ತು ಡಿಸೆಂಬರ್ ತಿಂಗಳಲ್ಲಿ ಎರಡು ಬಾರಿ ಲಕ್ಷಾಂತರ ಹಣ ವಿನಿಯೋಗಿಸಲಾಯಿತು.
ಸಾವರ್ಕರ್ ಕುರಿತು ಇವರು ನೀಡಿರುವ ಹೇಳಿಕೆ ನೋಡಿದರೆ, ಕನ್ನಡಿಗರು ನಮ್ಮಂತೆ ಮುಠ್ಠಾಳರು ಎಂದು ಭಾವಿಸಿದ್ದಾರೆ. ಸಾವರ್ಕರ್ ಗೆ ಕನ್ನಡ ಭಾಷೆ ಬರುತ್ತಿತ್ತು. ಅವರು ಆಲೂರು ವೆಂಟರಾಯರ ನಾಟಕಗಳಲ್ಲಿ ಅಭಿನಯಿಸಿದ್ದರು ಎಂಬ ಹೊಸ ಸುಳ್ಳಿನ ಇತಿಹಾಸವನ್ನು ಇವರು ಸೃಷ್ಟಿಸಿದ್ದಾರೆ. ವಾಸ್ತವವಾಗಿ ಅಂದಿನ ಬಾಂಬೆ ಪ್ರೆಸಿಡೆನ್ಸಿಗೆ ಸೇರಿದ ಬಿಜಾಪುರದಲ್ಲಿ1880 ರಲ್ಲಿ ಜನಿಸಿದ ಆಲೂರು ವೆಂಕಟರಾಯರು ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ 1905 ರಿಂದ1908 ರವರೆಗೆ ಕಾನೂನು ಪದವಿ ಓದುತ್ತಿದ್ದಾಗ ಸಾವರ್ಕರ್ ವೆಂಕಟರಾಯರ ಸಹಪಾಠಿಯಾಗಿದ್ದು ನಿಜ. ಕಾಲೇಜಿನ ಮನರಂಜನಾ ಕಾರ್ಯಕ್ರಮದ ಅಂಗವಾಗಿ ಒಂದು ನಾಟಕದಲ್ಲಿ ಅಭಿನಯಿಸಿರುವ ಸಾಧ್ಯತೆಯೂ ಇರಬಹುದು. ಮರಾಠಿಯ ದಟ್ಟ ಪ್ರಭಾವ ಇರುವ ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಕನ್ನಡ ನಾಟಕ ಪ್ರದರ್ಶನ ಆ ಕಾಲದಲ್ಲಿ ಸಾಧ್ಯವೆ?
ಕಾನೂನು ಪದವಿ ಮುಗಿಸಿ ಧಾರವಾಡಕ್ಕೆ ಬಂದ ಆಲೂರು ವೆಂಕಟರಾಯರು ಶಾಶ್ವತವಾಗಿ ಅಲ್ಲಿಯೇ ನೆಲೆನಿಂತರು. ಮರಾಠಿ ಪ್ರಭಾವದಿಂದ ಬಸವಳಿಯುತ್ತಿದ್ದ ಕನ್ನಡದ ನೆಲದಲ್ಲಿ ಕನ್ನಡ ಭಾಷೆಯನ್ನು ಮುನ್ನೆಲೆಗೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. 1912ರಲ್ಲಿ ಆರಂಭವಾದ ಧಾರವಾಡದ ವಿದ್ಯಾವರ್ಧಕ ಸಂಘವನ್ನು ತಮ್ಮ ನಾಯಕತ್ವದಲ್ಲಿ ಮುನ್ನಡೆಸಿದರು. ಜೊತೆಗೆ ಅದೇ ವರ್ಷ ಗತವೈಭವ ಎಂಬ ಕರ್ನಾಟಕ ಚರಿತ್ರೆ ಕುರಿತ ಕೃತಿಯನ್ನು ಪ್ರಕಟಿಸಿದರು.
1922 ರಲ್ಲಿ ಮೈಸೂರಿನಲ್ಲಿ ಪ್ರಕಟವಾಗುತ್ತಿದ್ದ ಪ್ರಬುದ್ಧ ಕರ್ನಾಟಕ ಎಂಬ ಸಾಹಿತ್ಯ ಪತ್ರಿಕೆಗೆ ಪರ್ಯಾಯವಾಗಿ ಬೇಂದ್ರೆ ಹಾಗೂ ಇತರೆ ಮಿತ್ರರ ಜೊತೆಗೂಡಿ ಉತ್ತರ ಕರ್ನಾಟಕದಲ್ಲಿ ಜಯ ಕರ್ನಾಟಕ ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. ಅನೇಕ ಕೃತಿಗಳನ್ನು ರಚಿಸಿರುವ ಅವರು ಕನ್ನಡಿಗರ ಭ್ರಮನಿರಸನ ಎಂಬ ಏಕೈಕ ನಾಟಕ ರಚಿಸಿದ್ದಾರೆ. ಈ ನಾಟಕದಲ್ಲಿ ಸಾವರ್ಕರ್ ಪಾತ್ರವಹಿಸಲು ಸಾಧ್ಯವೆ? ಏಕೆಂದರೆ, ಆ ವೇಳೆಗಾಗಲೇ ಆ ಮಹಾಶಯ ಅಂಡಮಾನಿನ ಜೈಲು ಪಾಲಾಗಿದ್ದ.
ರತ್ನಗಿರಿ ಜಿಲ್ಲೆಯ ಚಿತ್ಪಾವನ ಬ್ರಾಹ್ಮಣ ಸಮುದಾಯದ ಸಾವರ್ಕರ್ ( ಗೋಡ್ಸೆ ಇದೇ ಸಮುದಾಯದ ಬ್ರಾಹ್ಮಣ) ಪುಣೆಯಲ್ಲಿ ಕಾನೂನು ಪದವಿ ಮುಗಿಸಿ 1908ರ ನಂತರ ಬ್ಯಾರಿಸ್ಟರ್ ಪದವಿಯ ಅಧ್ಯಯನಕ್ಕೆ ಲಂಡನ್ ನಗರಕ್ಕೆ ಹೋದಾಗ ಉಗ್ರ ಹಿಂದೂ ಸಂಘಟನೆಯಾದ ‘ಇಂಡಿಯಾ ಹೌಸ್ ಅಂಡ್ ಫ್ರೀ ಇಂಡಿಯಾ’ ಎಂಬ ಸಂಸ್ಥೆಯ ಕಾರ್ಯಕರ್ತನಾಗಿ ಗುರುತಿಸಿಕೊಂಡ ದಾಖಲೆಗಳಿವೆ. ಮದನ್ ಲಾಲ್ ಡಿಂಗ್ರಾ ಎಂಬ ವ್ಯಕ್ತಿಯು ಭಾರತದ ವೈಸ್ ರಾಯ್ ಆಗಿದ್ದ ಲಾರ್ಡ್ ಕರ್ಜನ್ ಅನ್ನು ಹತ್ಯೆಗೈಯಲು ಲಂಡನ್ ನಗರಕ್ಕೆ ಹೋದಾಗ, ಡಿಂಗ್ರಾ, ಕರ್ಜನ್ ವಿಲ್ಲಿಸ್ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಹತ್ಯೆಗೈದು ಮರಣ ದಂಡನೆಗೆ ಗುರಿಯಾದನು. ಮದನ್ ಲಾಲ್ ಡಿಂಗ್ರಾಗೆ ಆಶ್ರಯ ನೀಡುವುದರ ಜೊತೆಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಒದಗಿಸಿದ ಕಾರಣಕ್ಕಾಗಿ ಸಾವರ್ಕರ್ ನನ್ನು ಬಂಧಿಸಿ ಹಡಗಿನಲ್ಲಿ 1910 ರ ಡಿಸೆಂಬರ್ ತಿಂಗಳಿನಲ್ಲಿ ಭಾರತಕ್ಕೆ ಕರೆತರಲಾಗುತ್ತಿತ್ತು.
ಹಡಗು ಫ್ರಾನ್ಸ್ ದೇಶದ ಮಾರ್ಸಲ್ ಎಂಬ ಬಂದರಿನಲ್ಲಿ ಲಂಗರು ಹಾಕಿದ್ದಾಗ ಹಡಗಿನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ ಸಾವರ್ಕರ್ ನನ್ನು ಫ್ರಾನ್ಸ್ ಪೊಲೀಸರು ಬಂಧಿಸಿ ಜೈಲಿಗಟ್ಟಿದರು. ಅಂತಾರಾಷ್ಟ್ರೀಯ ಕಾನೂನು ಮೀರಿದ ಅಪವಾದ ಸಾವರ್ಕರ್ ಹೆಗಲೇರಿತು. ಅಂತಿಮವಾಗಿ 1911 ರ ಏಪ್ರಿಲ್ ತಿಂಗಳಲ್ಲಿ ಬ್ರಿಟೀಷರಿಗೆ ಅವರನ್ನು ಒಪ್ಪಿಸಲಾಯಿತು. ಅಂತಿಮವಾಗಿ ಬ್ರಿಟೀಷರು ಸಾವರ್ಕರ್ ಗೆ ಐವತ್ತು ವರ್ಷಗಳ ಶಿಕ್ಷೆ ವಿಧಿಸಿ ಅಂಡಮಾನ್ ಸೆರೆಮನೆಗೆ ನೂಕಿದರು. ಅಂಡಮಾನಿನ ಸೆಲ್ಯೂಲರ್ ಸೆರೆಮನೆಯಲ್ಲಿ ಕುಳಿತು ಸತತವಾಗಿ ಕ್ಷಮಾರ್ಪಣಾ ಪತ್ರವನ್ನು ಬರೆಯುವುದರ ಮೂಲಕ ಜೀವನ ಪೂರ್ತಿ ನಿಮಗೆ ನಿಷ್ಠೆಯಿಂದ ಇರುತ್ತೀನಿ ಎಂದು ಪತ್ರ ಬರೆದುಕೊಟ್ಟ ಕಾರಣ 1924 ರಲ್ಲಿ ಈ ವ್ಯಕ್ತಿಯನ್ನು ಸೆರೆಮನೆಯಿಂದ ಬಿಡುಗಡೆ ಮಾಡಿ ರತ್ನಗಿರಿಯಲ್ಲಿ 1936ರ ವರೆಗೆ ಗೃಹಬಂಧನದಲ್ಲಿ ಇಡಲಾಗಿತ್ತು.
1936 ರ ನಂತರವಷ್ಟೇ ಸಾವರ್ಕರ್ ಸ್ವತಂತ್ರವಾಗಿ ಓಡಾಡಲು ಸ್ವಾತಂತ್ರ್ಯ ದೊರೆಯಿತು. ನಂತರ ಹಿಂದೂ ಮಹಾಸಭಾ ಮುಂತಾದ ಸಂಘ ಪರಿವಾರದ ಸಂಸ್ಥೆಗಳ ಉಗಮಕ್ಕೆ ಈ ಮಹಾಶಯ ಕಾರಣನಾದನು. ಜೊತೆಗೆ ತನ್ನದೇ ಸಾಹಸಮಯ ಸುಳ್ಳಿನ ಜೀವನ ಚರಿತ್ರೆಯನ್ನ ಅನಾಮಿಕನ ಹೆಸರಿನಲ್ಲಿ ಬರೆದು ತನ್ನ ಹೆಸರಿನ ಜೊತೆಗೆ ವೀರ ಎಂದು ಸೇರಿಸಿಕೊಂಡ ಭಾರತದ ಮಹಾನ್ ಈರಾದಿ ಈರನಿಗೆ ಕನ್ನಡನಾಡಿನ ನಾಡಿನ ಜೊತೆ ಯಾವ ಸಂಬಂಧ ಇತ್ತು? ಯಾವ ದಿನಾಂಕದಲ್ಲಿ ಇತ್ತು? ಅಧಿಕೃತ ದಾಖಲೆಗಳು ಇವೆಯಾ? ಆಲೂರು ವೆಂಕಟರಾಯ ಸಹಪಾಠಿ ಎಂಬುದನ್ನು ಹೊರತುಪಡಿಸಿ ಉಳಿದ ಯಾವ ಮಾಹಿತಿಯೂ ಇತಿಹಾಸದಲ್ಲಿ ಇಲ್ಲ.
ಇಂತಹವನ ಬಗ್ಗೆ ಕೊಡಗಿನ ಕೋಡಂಗಿ ಅಥವಾ ಎಡಬಿಡಂಗಿ ನಾಟಕ ಬರೆದರೆ, ಗಟಾರದ ತೀರ್ಥ ಅದರ ಪ್ರಟಕಣೆಗೆ ಮುಂದಾಗಿದ್ದಾನೆ. ಟಿಪ್ಪು ನಿಜ ಕನಸುಗಳು ಕೃತಿಯ ಜೊತೆಗೆ ಕರಿನೀರಿನ ವೀರ ಎಂಬ ಈ ಕೃತಿಯು ಇದೀಗ ಹೊರ ಬಂದಿದ್ದು ಮುಠ್ಠಾಳರಿಂದ ಮುಠ್ಠಾಳರಿಗೆ ಎಂಬ ಮಾಲಿಕೆಯಲ್ಲಿ ಕನ್ನಡಿಗರಿಗೆ ಲಭ್ಯವಾಗಿದೆ. ಆಸಕ್ತ ಮುಠ್ಠಾಳರು ಇದನ್ನು ಓದಿ ಆನಂದಿಸಬಹುದು.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




