ಇದನ್ನು ಸುದ್ದಿಮನೆಗಳು ಉಪದೇಶ ಅಂದ್ಕೊಳ್ಳಿ, ಅಧಿಕ ಪ್ರಸಂಗ ಅಂದ್ಕೊಳ್ಳಿ ಅಥವಾ ಏನಾರೂ ಅಂದ್ಕೊಳ್ಳಿ. ಹೇಳಬೇಕಿದೆ. ಹೇಳ್ತೇನೆ. ಸಾವಿಗೆ ಒಂದು ಗೌರವ ಇದೆ. ಒಬ್ಬ ವ್ಯಕ್ತಿ ತೀರಿಕೊಂಡಾಗ ಅವರ ಕುಟುಂಬಕ್ಕೆ ಮುಜುಗರ ಆಗದಂತೆ, ವ್ಯಕ್ತಿಯ ದೇಹಕ್ಕೆ ಅಪಚಾರ ಆಗದಂತೆ ವ್ಯವಹರಿಸಬೇಕಾದುದು ಮನುಷ್ಯರಾದವರ ಕರ್ತವ್ಯ. ನಾವು ಮೊದಲು ಮನುಷ್ಯರು; ಆ ಮೇಲೆ ಪತ್ರಕರ್ತರು. ಜೀವಕ್ಕೆ ಅಕಸ್ಮಾತ್ ಸಿಗದ ಗೌರವವನ್ನು ಕೂಡ ಸಾವಿಗೆ ಕೊಡುವುದನ್ನು “ಸಂಸ್ಕೃತಿ” ಮಾಡಿಕೊಂಡಿರುವ ನಾಗರಿಕತೆ ನಮ್ಮದು. ಸಂಬಂಧಿತ ವ್ಯಕ್ತಿ ಜನಪ್ರಿಯರಾಗಿದ್ದಾಗ ಈ ಜವಾಬ್ದಾರಿ ಇನ್ನಷ್ಟು ಹೆಚ್ಚು.
ಐರೋಪ್ಯ ದೇಶಗಳಲ್ಲಿ ಲೇಖಕರು, ಸಿನಿಮಾ ತಾರೆಯರು ಅಥವಾ ಯಾವುದೇ ಸೆಲೆಬ್ರಿಟಿಗಳು ತೀರಿಕೊಂಡಾಗ ಸುದ್ದಿ ಗೊತ್ತಿದ್ದರೂ, ಕುಟುಂಬ ಅಥವಾ ಆ ಸೆಲೆಬ್ರಿಟಿಯ ಅಧಿಕೃತ ಪ್ರತಿನಿಧಿಗಳು ಅಧಿಕೃತವಾಗಿ ಪ್ರಕಟಿಸುವ ತನಕ ಆ ಸುದ್ದಿಗೆ ಕಾಯುವುದು ಮತ್ತು ಆ ಬಳಿಕವೇ ಪ್ರಕಟಿಸುವುದು ಸಂಪ್ರದಾಯ. ಆ ವ್ಯಕ್ತಿಯ ಅಂತ್ಯಕ್ರಿಯೆಯ ತನಕವೂ ಒಂದು ಡೆಕೋರಂ ಇರುತ್ತದೆ, ಎಲ್ಲವೂ ಗೌರವಯುತವಾಗಿ ಮುಗಿದು, ವ್ಯಕ್ತಿಯ ಬಗ್ಗೆ ಕಡೆಯ ನೆನಪೊಂದು ಒಳ್ಳೆಯ ನೆನಪಾಗಿಯೇ ಉಳಿದಿರುತ್ತದೆ.
ಅದಕ್ಕೆ ವ್ಯತಿರಿಕ್ತವಾಗಿ ನಮ್ಮಲ್ಲಿ ಆರೋಗ್ಯ ಕೆಟ್ಟು ಆಸ್ಪತ್ರೆಗೆ ಸೇರಿದರೆಂದ ಕೂಡಲೇ ವದಂತಿಗಳು, ಆಸ್ಪತ್ರೆಗಳಲ್ಲಿ ಬುಲೆಟಿನ್‌ಗಳು, ತೀರಿಕೊಂಡವರ ಶವ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಏರುವ ಮೊದಲೇ ಶವದ ಮುಖ ತೋರಿಸುವ ಆತುರ, ಕಡೆಗೆ ಅಂತ್ಯಕ್ರಿಯೆಯ ವೇಳೆಯಲ್ಲೂ ತೀರಿಕೊಂಡವರ, ಅವರ ಕುಟುಂಬಿಕರ ಖಾಸಗಿ ಕ್ಷಣಗಳನ್ನು “ಲೈವ್” ಆಗಿ ಜಗತ್ತಿಗೆ ಬಿತ್ತರಿಸುವ ಕಾತರ! ಕಡೆಗೆ ಆ ತೀರಿಕೊಂಡ ವ್ಯಕ್ತಿಯ ಬಗ್ಗೆ ನೆನಪಿನಲ್ಲಿ ಉಳಿಯುವುದು ಇಂತಹ ಅಪದ್ಧಗಳೇ.
ವ್ಯಕ್ತಿ ತೀರಿಕೊಂಡಾಗ, ಆ ಸುದ್ದಿಗೆ ಆತುರ ಯಾಕೆ? ವ್ಯಕ್ತಿಯ/ಅವರ ಕುಟುಂಬದ ಖಾಸಗಿ, ದುಃಖದ ಕ್ಷಣಗಳು ಸಾರ್ವಜನಿಕರಿಗೆ ಯಾಕೆ? ಇಂತಹ ವರದಿಗಳನ್ನು ಮಾಡುವಾಗ ಥಂಬ್ ರೂಲ್ ಏನೆಂದರೆ, ಸ್ವತಃ ನಾನು ಅಲ್ಲಿ ಶವವಾಗಿ ಮಲಗಿದ್ದರೆ, ನನ್ನ ಕುಟುಂಬಿಕರ ದುಃಖದ ಕ್ಷಣಗಳು ಜಗಜ್ಜಾಹೀರಾಗುವುದನ್ನು ನಾನು ಬಯಸುತ್ತೇನೆಯೆ? ಇಲ್ಲ ಎಂದಾದರೆ, ಎದುರಿರುವ ವ್ಯಕ್ತಿಯ ದೇಹಕ್ಕೂ, ಅವರ ಕುಟಂಬಕ್ಕೂ ಅಂತಹ ಅಪಚಾರ ಮಾಡುವ ಹಕ್ಕು ನಮಗಿಲ್ಲ.
ಇದೇ ಹಿರಿಯಕ್ಕನ ಚಾಳಿ ಮಂದುವರಿಸಿರುವ ಸಾರ್ವಜನಿಕರಿಗೆ ವ್ಯಕ್ತಿ ತೀರಿಕೊಂಡಿರುವುದು ಖಚಿತವಾಗುವ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ RIP ಹೊಡೆಯುವ ಆತುರ ಯಾಕೆ?
ಒಬ್ಬ ವ್ಯಕ್ತಿಯ ಸಾವು ಮತ್ತು ಅದರ ಆಸುಪಾಸಿನ “ಖಾಸಗಿ” ಘಟನೆಗಳು ನಮ್ಮ ತೀಟೆ ತೀರಿಸಿಕೊಳ್ಳುವ, TRP ಗಳಿಸುವ ಸಂಗತಿಗಳಾಗದಿರಲಿ. ಸಾವನ್ನು ಗೌರವಿಸುವ ಮತ್ತು ತೀರಿಕೊಂಡವರನ್ನು ಘನತೆಯಿಂದ ಬೀಳ್ಕೊಡುವ ಒಳ್ಳೆಯ ಮನಸ್ಸು ಎಲ್ಲರಿಗೂ ಬರಲಿ.
ಕಡೆಯದಾಗಿ ನಿಮಗೆ ನೀವೇ ಕೇಳಿಕೊಳ್ಳಿ. 89 ವರ್ಷ ಪ್ರಾಯದ ಅಮರ್ತ್ಯಸೆನ್ ಅವರಿಗೆ ಅವರು ತೀರಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವುದು ತಿಳಿದರೆ ಏನನ್ನಿಸಬಹುದು? ಆ ಸ್ಥಾನದಲ್ಲಿ ನೀವೇ ಇದ್ದರೆ ನಿಮಗೆ ಎಷ್ಟು ಆಘಾತ ಆಗಬಹುದು, ಅವರ/ನಿಮ್ಮ ಕುಟುಂಬಿಕರಿಗೆ ಅದು ಎಂತಹ ಆಘಾತ ತರಬಹುದು… ಬೇಕಾ ಇದೆಲ್ಲ?!!
ಸುದ್ದಿ ಡೆಸ್ಕಿನಲ್ಲಿ ಬೇಸಿಕ್ ರೀಸರ್ಚ್ ಮಾಡಿದ್ದರೆ ತಪ್ಪಿಸಬಹುದಾಗಿದ್ದ ಸರಳ ಸಂಗತಿ ಇಂದಿನ ಘಟನೆ. ಸುದ್ದಿ ಮೂಲಗಳೇ ಕಲುಷಿತ ಆಗಿರುವಾಗ ಸುದ್ದಿ ಡೆಸ್ಕ್ ಜವಾಬ್ದಾರಿ ದೊಡ್ಡದು. ಕನಿಷ್ಠ ಅಷ್ಟು ಅರ್ಥ ಆಗುವವರನ್ನು ಅಂತಹ ಖುರ್ಚಿಗಳಲ್ಲಿ ಕೂರಿಸಿ.
– ರಾಜಾರಾಮ್ ತಲ್ಲೂರ್




