“ಕೃಷ್ಣೇಗೌಡರ ಆನೆ” ಯು ಪೂರ್ಣಚಂದ್ರ ತೇಜಸ್ವಿಯವರ ಸಾರ್ವಕಾಲಿಕ ಕಥಾನಕ. ಎಲ್ಲಿಯವರೆಗೂ ಮನುಷ್ಯನಲ್ಲಿ ಸ್ವಾರ್ಥ ಸಣ್ಣತನಗಳು ಇರುತ್ತವೆಯೋ ಅಲ್ಲಿಯವರೆಗೂ ಈ ಕತೆ ಜೀವಂತವಾಗಿರುತ್ತದೆ. ಈ ಕತೆ ಈಗ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪಠ್ಯವಾಗಿಯೂ ಇರುವುದರಿಂದ “ಕೃಷ್ಣೇಗೌಡರ ಆನೆ” ಗೆ ಭಾರೀ ಬೇಡಿಕೆಯೂ ಇದೆ. ಈ ಕತೆಯನ್ನು ಮೊಟ್ಟ ಮೊದಲ ಬಾರಿಗೆ ರಂಗಪಠ್ಯವಾಗಿಸಿ ಮೈಸೂರು ರಂಗಾಯಣಕ್ಕೆ ನಾಟಕವಾಗಿ ನಿರ್ದೇಶಿಸಿದ್ದು ನನ್ನ ರಂಗಗುರುಗಳಾದ ಆರ್.ನಾಗೇಶರವರು. ಈ ನಾಟಕದ ಪ್ರಮುಖ ಪಾತ್ರವಾದ ಆನೆಯನ್ನು ರಂಗದ ಮೇಲೆ ಹೇಗೆ ತಂದಿರಬಹುದು ಎನ್ನುವ ಕುತೂಹಲಕ್ಕೆ ಪ್ರತಿಯಾಗಿ ಆನೆಗೆ ಅಚ್ಚರಿಯ ರೂಪಕವನ್ನು ಕಟ್ಟಿ ಕೊಟ್ಟವರು ಆರ್.ನಾಗೇಶರವರು. ಕೇವಲ ಒಂದು ಕರಿ ಬಣ್ಣದ ಛತ್ರಿಯನ್ನೇ ಆನೆಯೆಂದು ನಂಬಿಸಿ, ತುತ್ತೂರಿಯನ್ನೇ ಸೊಂಡಿಲು ಎಂದು ಬಿಂಬಿಸಿದ್ದರು. ಇದು ಆಗಿನ ಕಾಲಕ್ಕೆ ಅದ್ಭುತ ಮೆಟಾಫರ್ ಆಗಿ ನಮಗೆಲ್ಲಾ ಬೆರಗನ್ನು ಹುಟ್ಟಿಸಿತ್ತು.
ಅದ್ಯಾಕೋ ಈ ಕೃಷ್ಣೇಗೌಡರ ಆನೆ ನನ್ನ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟು ಟಿಸಿಲೊಡೆದು ಹೊರಗೆ ಬರಲು ಹಾತೊರೆಯುತ್ತಿತ್ತು. ಕಥೆಯನ್ನು ಕಥಾನಕದ ರೀತಿಯಲ್ಲೇ ನಾಗೇಶರವರು ದೃಶ್ಯಗಳನ್ನು ನರೇಟಿವ್ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದರು. ನಿರೂಪಣಾ ರೀತಿಯನ್ನು ಬಿಟ್ಟು ದೃಶ್ಯಗಳ ಮೂಲಕವೇ ಈ ನಾಟಕವನ್ನು ಕಟ್ಟಿದರೆ ಹೇಗೆ ಎನ್ನುವ ಕುತೂಹಲ ನನ್ನದು. ಹೌದು.. ನಾಟಕವನ್ನು ವಿಭಿನ್ನ ರೀತಿಯಲ್ಲಿ ಕಟ್ಟಬಹುದಾದರೂ ಅದಕ್ಕೆ ಕಥೆಗಾರರ ಅನುಮತಿ ಪಡೆಯಬೇಕಿತ್ತು. ಹೇಗೆಂದು ತಿಳಿಯಲಿಲ್ಲ. ಯಾಕೆಂದರೆ ಪೂಚಂತೇಯವರು ದಿವಂಗತರಾಗಿದ್ದರು. ಏನಾದರಾಗಲಿ ಒಂದು ಕಲ್ಲು ಎಸೆಯೋಣ ಹಣ್ಣೋ ಕಾಯೋ ಯಾವುದೋ ಒಂದು ದಕ್ಕೀತು ಎಂದುಕೊಂಡು ಅದೊಂದು ದಿನ ಪೂಜಂತೆಯವರ ಶ್ರೀಮತಿಯವರಾದ ರಾಜೇಶ್ವರಿಯವರಿಗೆ ಪತ್ರವೊಂದನ್ನು ಬರೆದು “ಹೀಗೀಗೆ.. ಕೃಷ್ಣೇಗೌಡರ ಆನೆಯನ್ನು ರಂಗಪಠ್ಯವಾಗಿಸಲು, ಪ್ರದರ್ಶನಗೊಳಿಸಲು ಹಾಗೂ ಪುಸ್ತಕವಾಗಿ ಪ್ರಕಟಿಸಲು ದಯವಿಟ್ಟು ಅನುಮತಿ ಕೊಡಿ..” ಎಂದು ಮನವಿ ಮಾಡಿದೆ. ಹಾಗೂ ಯಾವುದಕ್ಕೂ ಇರಲಿ ಎಂದು ಗೌರವಧನವಾಗಿ 5000 ರೂ.ಗಳ ಚೆಕ್ಕೊಂದನ್ನು ಕವರಲ್ಲಿಟ್ಟು ಮೂಡಿಗೆರೆಯ ನಿರುತ್ತರಕ್ಕೆ ಪೋಸ್ಟ್ ಮಾಡಿ ಉತ್ತರಕ್ಕೆ ಕಾಯತೊಡಗಿದೆ.
ಹತ್ತಾರು ದಿನ ಕಳೆದಿರಬಹುದು, ಅದೊಂದು ದಿನ ನಿರುತ್ತರದಿಂದ ಉತ್ತರ ಬಂತು. ತೆರೆದು ನೋಡಿದರೆ ಸುಂದರ ಕೈಬರಹದ ಅನುಮತಿ ಪತ್ರದ ಜೊತೆಗೆ ಶುಭಹಾರೈಕೆಗಳು. ಆನಂದದಿಂದಲೇ ರಂಗರೂಪ ಮಾಡಲು ಆರಂಭಿಸಿದೆ. ನಾಲ್ಕಾರು ಸಲ ತಿದ್ದಿದೆ ತೀಡಿದೆ, ಪ್ರತಿಪಾತ್ರಗಳ ಸಂಭಾಷಣೆಗಳನ್ನು ನನ್ನಷ್ಟಕ್ಕೆ ನಾನೇ ಹೇಳಿಕೊಂಡು ಅಕ್ಷರಕ್ಕಿಳಿಸಿದೆ. ಸ್ವಲ್ಪ ಪ್ರಯತ್ನಪಟ್ಟರೆ ಹೀಗೆ ಬರವಣಿಗೆಯಲ್ಲಿ ನಾಟಕವಾಗಿಸುವುದೇನೋ ಸುಲಭ, ಆದರೆ ರಂಗದ ಮೇಲೆ ಪ್ರದರ್ಶನವಾಗಬೇಕಾದರೆ ಆನೆಯನ್ನು ತರುವುದೇ ಕಷ್ಟ. ಅದಕ್ಕೆ ಇಡೀ ರೂಪಾಂತರದಲ್ಲಿ ಆನೆಯನ್ನು ಪ್ರತ್ಯಕ್ಷವಾಗಿ ತೋರಿಸದೇ ಆನೆ ಇದೆ ಎಂಬ ಪರೋಕ್ಷ ಫೀಲಿಂಗನ್ನು ತರುವ ಪ್ರಯತ್ನವನ್ನು ಪ್ರಜ್ಞಾಪೂರ್ವಕವಾಗಿ ಮಾಡಿದೆ.
ನಾನು ರೂಪಾಂತರಿಸಿದ ಈ ಕೃಷ್ಣೇಗೌಡರ ಆನೆ ನಾಟಕವನ್ನು ವೈ.ಡಿ.ಬದಾಮಿಯವರು ನಿರ್ದೇಶಿಸುತ್ತೇನೆ ಎಂದಿದ್ದರು. ಆದರೆ ಅದೇನಾಯ್ತೋ ಸುಮ್ಮನಾದರು. ನನ್ನ ಅಭಿನಯ ಶಾಲೆಯ ವಿದ್ಯಾರ್ಥಿಗಳಿಗೆ ಈ ನಾಟಕ ನಿರ್ದೇಶಿಸಲು ಪ್ರಯತ್ನಿಸಿದೆನಾದರೂ ಸಮರ್ಥ ನಟರು ಸಿಗದೇ ಇರುವುದರಿಂದ ಪ್ರಯತ್ನ ವ್ಯರ್ಥವಾಯ್ತು. ರೇಣುಕಾ ರೆಡ್ಡಿಯವರು ಇದನ್ನು ನಿರ್ದೇಶಿಸಿ ಒಂದೆರಡು ಪ್ರದರ್ಶನಗಳನ್ನು ಮಾಡಿ ನಿಲ್ಲಿಸಿದರು. ಕಲಬುರಗಿಯ ರಂಗಕರ್ಮಿ ಮಿತ್ರ ವಿಶ್ವರಾಜ್ ರವರು ನಿರ್ದೇಶಿಸಿ ಕೆಲವು ಪ್ರದರ್ಶನಗಳನ್ನು ಮಾಡಿದ್ದೇನೆಂದು ಹೇಳಿದರಾದರೂ ಆ ಪ್ರದರ್ಶನಕ್ಕೆ ಅವರು ಕರೆಯಲೂ ಇಲ್ಲಾ, ನೋಡುವ ಭಾಗ್ಯ ನನಗೆ ಸಿಗಲೂ ಇಲ್ಲ.
ಒಂದೂವರೆ ತಿಂಗಳ ಹಿಂದೆ ಮೈಸೂರಿನಿಂದ ರಂಗಕರ್ಮಿ ಮಂಡ್ಯ ರಮೇಶರವರು ಕರೆ ಮಾಡಿ “ಕೃಷ್ಣೇಗೌಡರ ಆನೆ” ನಾಟಕವನ್ನು ನಟನಾ ರಂಗಶಾಲೆಯ ವಿದ್ಯಾರ್ಥಿಗಳಿಗೆ ನಿರ್ದೇಶಿಸಲು ಅನುಮತಿ ಕೊಡು ಗೆಳೆಯಾ” ಎಂದು ಕೇಳಿದಾಗ ತುಂಬಾ ಸಂತೋಷವಾಗಿದ್ದು ನಿಜ. ಜುಲೈ 14 ರಂದು ಕಲಾವಿದ ಮಂಡ್ಯ ರಮೇಶರವರ ಜನುಮ ದಿನದಂದು ನಾನು ರಂಗರೂಪ ಮಾಡಿದ “ಕೃಷ್ಣೇಗೌಡರ ಆನೆ” ನಾಟಕ ಮೈಸೂರಿನ ನಟನಾ ರಂಗಮಂದಿರದಲ್ಲಿ ಪ್ರದರ್ಶನಗೊಂಡಿತು. ಮರುದಿನದ ಪ್ರದರ್ಶನಕ್ಕೆ ನಾನೂ ಸಾಕ್ಷಿಯಾದೆ. ಆರಂಭದಿಂದ ಶುರುವಾಗಿ ಕೊನೆಯವರೆಗೂ ನೋಡುಗರನ್ನು ನಕ್ಕು ನಗೆಸಿದ ಈ ನಾಟಕ ಅತ್ಯಂತ ಯಶಸ್ವಿಯಾಯಿತು. ಎರಡೂ ದಿನಗಳ ಕಾಲ ಹೌಸ್ ಫುಲ್ ಶೋ. ಟಿಕೇಟ್ ಸಿಗದೇ ನೂರಾರು ಜನ ನಿರಾಸೆಯಿಂದ ವಾಪಸ್ ಹೋದರು. ಮತ್ತೆ ಮತ್ತೆ ಈ ನಾಟಕದ ಪ್ರದರ್ಶನಕ್ಕೆ ಬೇರೆ ಬೇರೆ ಕಡೆಯಿಂದ ಆಹ್ವಾನಗಳು ಬರುತ್ತಿವೆಯಂತೆ. ಬೇಕಾದಷ್ಟು ಪ್ರದರ್ಶನ ಮಾಡಬಹುದಾದರೂ ಒಂದೇ ಸಮಸ್ಯೆ ಏನೆಂದರೆ ಬೃಹದಾಕಾರ ಆನೆಯ ಆಕೃತಿಯನ್ನು ಸಾಗಿಸುವುದು ಹಾಗೂ ಅದು ಓಡಾಡಲು ಬೇಕಾದಷ್ಟು ವಿಶಾಲವಾದ ವೇದಿಕೆ ದೊರೆಯುವುದು.
ಪೂರ್ಣಚಂದ್ರ ತೇಜಸ್ವಿಯವರ ಕಥೆಯ ತಾಕತ್ತು, ಮಂಡ್ಯ ರಮೇಶರವರ ನಿರ್ದೇಶನದ ಕೌಶಲ್ಯಗಳು, ಯುವ ನಟರುಗಳ ಎನರ್ಜಿ. ಈ ನಾಟಕದ ಯಶಸ್ಸಿಗೆ ಮುಖ್ಯ ಕಾರಣಗಳಾಗಿದ್ದು ರೂಪಾಂತರಕಾರನಾದ ನಾನಿಲ್ಲಿ ನೆಪಮಾತ್ರ.
ಒಂದು ವಿಷಯವನ್ನಿಲ್ಲಿ ನೆನಪಿಸಿಕೊಳ್ಳಲೇಬೇಕು. ಅದೇ ಗೌರವಧನವಾಗಿ ಚೆಕ್ಕೊಂದನ್ನು ಕಳಿಸಿದ್ದೆನಲ್ಲಾ. ನನ್ನ ಅಕೌಂಟಿನಿಂದ ಹಣ ಕಡಿತವಾಗಲಿಲ್ಲ. ಯಾಕೆಂದರೆ ಚೆಕ್ಕನ್ನು ರಾಜೇಶ್ವರಿ ಮೇಡಂನವರು ತಮ್ಮ ಬ್ಯಾಂಕಿಗೆ ಹಾಕಲೇ ಇಲ್ಲ. ಮುಂದೊಮ್ಮೆ ಮೂಡಿಗೆರೆಯ ಅವರ ನಿರುತ್ತರ ತೋಟಕ್ಕೆ ಹೋಗಿದ್ದಾಗ ಹೀಗೇಕೆಂದು ಕೇಳಿದೆ “ಅಯ್ಯೋ ನಾಟಕದವರಿಗೆ ನೂರೆಂಟು ತಾಪತ್ರಯಗಳಿರುತ್ತವೆ, ಅದೇ ಹಣ ನಿಮಗೆ ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತದೆ ಬಿಡಿ” ಎಂದು ಹೇಳಿ ಮಾತು ಬದಲಾಯಿಸಿದರು. ಎಷ್ಟೇ ಆಗಲಿ ಪೂಚಂತೇಯವರ ಜೀವನ ಸಂಗಾತಿಯಲ್ಲವೇ, ಕುವೆಂಪುರವರ ಸೊಸೆಯಲ್ಲವೇ, ತೂಕದ ಮಾತನ್ನೇ ಆಡಿದ್ದರು, ರಂಗಭೂಮಿಯವರ ಮೇಲಿದ್ದ ಅವರ ಪ್ರೀತಿಗೆ, ಅವರು ತೋರಿದ ರೀತಿಗೆ ನಾನು ಮೌನಿಯಾಗಿದ್ದೆ.
– ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ




