ವಿಶ್ವ ಮಹಿಳಾ ದಿನದ ವಿಶೇಷ ಲೇಖನ
ಪ್ರತಿ ವರ್ಷ ನಾವು ಮಾರ್ಚ್ 8 ರಂದು ವಿಶ್ವ ಮಹಿಳಾ ದಿನ ಆಚರಿಸುತ್ತಾ ಬರುತ್ತಿದ್ದೇವೆ. ವಿಶ್ವಮಹಿಳಾ ದಿನದಲ್ಲಿ ಮಹಿಳೆಯರ ಕುರಿತ ಒಂದು ಲೇಖನ ಇಲ್ಲಿದೆ.
ಸೃಷ್ಟಿಯಲ್ಲಿ ಗಂಡು ಜಾತಿ ಹೆಣ್ಣು ಜಾತಿಗಿಂತ ಅಧಿಕವಾಗಿದೆ. ಈ ಹೆಣ್ಣನ್ನು ಕೇವಲ ಪುನರ್ ಉತ್ಪತ್ತಿ ಮಾಡುವ ಯಂತ್ರವಾಗಿ ಭಾವಿಸುವವರು ಹೆಚ್ಚು. ಪ್ರಾಚೀನ ಕಾಲದಿಂದ ಇಲ್ಲಿಯವರೆಗೆ ಸಾಮಾಜಿಕ ಅಭಿವೃದ್ಧಿಯಲ್ಲಿ ಸ್ತ್ರೀಯರ ಪಾತ್ರ ಪುರುಷನನ್ನೇ ಮೀರಿಸುವಂತಹದ್ದಾಗಿದೆ. ಹಾಗಿದ್ದರೂ “ಸಕಲ ಪಾಪಗಳಿಗೆ “ಸ್ತ್ರೀ” ಮೂಲ“ ಎಂದಿದ್ದಾರೆ ಸಾಕ್ರಟೀಸ್. ಇದನ್ನೇ ಇಂದಿನವರು ಪಾಲಿಸುತ್ತಿರುವುದು ದುರಂತ.
ಸ್ತ್ರೀಯರು ಶಾರೀರಿಕವಾಗಿ, ಮಾನಸಿಕವಾಗಿ ಪುರುಷರಿಗಿಂತಲೂ ಕಡಿಮೆ ಶಕ್ತಿಯುಳ್ಳವರು ಎನ್ನುವ ಭಾವ ತಪ್ಪು. ಸ್ತ್ರೀಯರು ಅಬಲೆಯರಲ್ಲ ಅದು ತಪ್ಪು ಕಲ್ಪನೆ. ಮನೆಯಲ್ಲಿ ಹಾಗೂ ಉದ್ಯೋಗದಲ್ಲಿ ಒಟ್ಟಿಗೆ ಏಕಕಾಲದಲ್ಲಿ ದುಡಿಯುವ ಶಕ್ತಿ ಸಾಮರ್ಥ್ಯ “ಸ್ತ್ರೀ”ಗಲ್ಲದೆ ಪುರುಷನಿಗೆ ಬರಲು ಸಾಧ್ಯವಿಲ್ಲ.
ಇಸ್ಲಾಂನ ಖುರಾನ್ನಲ್ಲಿ (5-4-6) “ಸ್ತ್ರೀ”ಗಿಂತಲೂ ಪುರುಷರಿಗೆ ದೈವ ಉತ್ತಮ ಗುಣಗಳನ್ನು ಕೊಟ್ಟಿದ್ದಾನೆ ಎಂದು ಹೇಳಲ್ಪಟಿದೆ. ಬೈಬಲ್ನಲ್ಲಿ “ಸ್ತ್ರೀ” ಪುರುಷನಿಗಾಗಿಯೇ ಸೃಷ್ಟಿಯಾಗಿದ್ದಾಳೆ. ಸ್ತ್ರೀಯರ ಕುರಿತು ಹಿಂದೂ ಮನು ಧರ್ಮದಲ್ಲೂ ಸ್ತ್ರೀಯರನ್ನೂ ಬಾಯಲ್ಲಿ ಹೊಗಳಿ ದೈಹಿಕವಾಗಿ ಛೇಢಿಸುವ ವೈಖರಿ ದಾಖಲಾಗಿವೆ. ಆದರೆ ಸಂತಾನವನ್ನೂ ಸಂರಕ್ಷಿಸುವ “ಸ್ತ್ರೀ”ಯು ಪುರುಷನ ಹಾಗೆ ಶ್ರಮದ ಕೆಲಸಗಳಲ್ಲಿ, ಬೇಟೆ, ವ್ಯವಸಾಯದಲ್ಲಿ ಹಿಂದಿನ ಕಾಲದಲ್ಲಿ ಸ್ವಲ್ಪ ಹಿಂದೆ ಸರಿದಿರಬಹುದು.ಇದಕ್ಕೆ ಕಾರಣ ಮನುಷ್ಯನ ‘ಮಗು’ ಬೆಳೆಯಲು ಹೆಚ್ಚಿನ ಅವಧಿ ಬೇಕಾಗಿರುವುದು ಸಹ ಕಾರಣ ಇರಬಹುದು.
ಆದಿವಾಸಿ, ಬುಡಕಟ್ಟುಗಳಲ್ಲಿ ವಿಶೇಷವಾಗಿ ಬಂಜಾರ ಹಾಗೂ ಇತರೆ ಸ್ತ್ರೀಯರು ಯದ್ಧಗಳಲ್ಲೂ ಪಾಲ್ಗೊಳ್ಳುತ್ತಿದ್ದರು. ಇವರು ಪುರುಷ ಸಮಾನವಾಗಿ ಧೈರ್ಯ ಹಾಗೂ ಶೌರ್ಯ ತೋರುತ್ತಿದ್ದರು. ಅಫಘಾನಿಸ್ಥಾನದ ಬುಡಕಟ್ಟುಗಳಲ್ಲಿ ಪುರುಷ ಮನೆಯಲ್ಲಿ ಕೆಲಸ ಮಾಡಿದರೆ ಸ್ತ್ರೀಯರು ಯುದ್ಧಗಳಲ್ಲಿ ಪಾಲ್ಗೊಂಡ ಉದಾಹರಣೆ ಇದೆ.
ಪಶ್ಚಿಮ ಆಫ್ರಿಕಾದ ‘ಅಕ್ಷಾಂತ’ ಹಾಗೂ ಮಧ್ಯ ಆಫ್ರಿಕಾದ ‘ದಹೋಮ’ ಬುಡಕಟ್ಟು ನಾಯಕರು ತಮ್ಮ ಅಂಗರಕ್ಷಕರಾಗಿ ಸ್ತ್ರೀಯರನ್ನು ನೇಮಿಸಿಕೊಂಡಿದ್ದರು. ಬುಡಕಟ್ಟುಗಳ ಗಿರಿಜನ ಹಿಂದಿನ ಕಾಲದಲ್ಲಿ ವಲಸೆ ಹೋಗುವಾಗ ಸ್ತ್ರೀಯರೆ ಗುಡಾರಗಳನ್ನು, ಭಾರವನ್ನು ಹೊತ್ತುಕೊಂಡು ಹೋಗಿ ಗುಡಾರ ಕಟ್ಟುತ್ತಿದ್ದರು. ಅವು ಒರಟಾಗಿ, ಗಟ್ಟಿಯಾಗಿ ಇರುತ್ತಿದ್ದವು. ಬುಡಕಟ್ಟು ಹೆಂಗಸರು ಅತ್ಯಂತ ಕೌಶಲ್ಯದಿಂದ ಕಸೂತಿ, ನೆಯ್ಗೆ, ಬುಟ್ಟಿ ಹೆಣೆಯುವ ಅತ್ಯಂತ ಪರಿಶ್ರಮದ ಕೆಲಸ ನಿರ್ವಹಿಸುತ್ತಿದ್ದರು.ಇಂದಿಗೂ ನಿರ್ವಹಿಸುತ್ತಾರೆ. ಬಂಜಾರ ಹೆಣ್ಣು ಮಕ್ಕಳು ಯುದ್ದದಲ್ಲಿ ಸೋತ ರಾಜರ ಆಸ್ತಿಯನ್ನು ಗೆದ್ದ ರಾಜರಿಗೆ ಎತ್ತುಗಳ ಮೇಲೆ ಹೇರಿಕೊಂಡು ತಲುಪಿಸುವ ಕೆಲಸ ನಿರ್ವಹಿಸುತ್ತಿದ್ದ ಉದಾಹರಣೆಗಳು ಇವೆ.
ಯದ್ಧ ಕಾಲದಲ್ಲಿ ಅಮೆಮಾರಿ ಬುಡಕಟ್ಟು ಮಹಿಳೆಯರು ಯೋಧರಿಗೆ ರಾತ್ರಿ ಹಗಲು ಆಹಾರ, ಪಾನಿಯ ಒದಗಿಸುತ್ತಿದ್ದರು.ಅಂತಹ ಬುಡಕಟ್ಟುಗಳಲ್ಲಿ ಪ್ರಮುಖವಾಗಿ ಮಹೀಪುರದ ಚೌಂಗ್, ಸಿಮದ್, ಬ್ರೆಜಿಲ್ನ ಬುಷಿನ್, ಭಾರತದ ಬಂಜಾರ ಇತರೆ ಬುಡಕಟ್ಟುಗಳನ್ನು ಗಮನಿಸಬಹುದು.
ಒಟ್ಟಾರೆ ಸ್ತ್ರೀಯರೆ ಮೊಟ್ಟ ಮೊದಲು ವ್ಯವಸಾಯಕರು, ಉಡುಪುಗಳ ತಯಾರಕರು, ಕಂಬಾರಿಕೆ, ಕಸೂತಿಯಂತೆ ಕೌಶಲ್ಯ ಭರಿತ ಕೆಲಸಗಳನ್ನು ಮಾಡಿದವರು. ಪ್ರಾಚೀನ ಸಮಯದಲ್ಲಿ ಸ್ತ್ರೀಯರೆ ಹೆಚ್ಚು ಬೆವರಿನ ಶ್ರಮಿಕರಾಗಿದ್ದರು. ಅಂದರೆ ಬೆಳಗಿನಿಂದ ಸಂಜೆಯವರೆಗೂ ಸ್ತ್ರೀಯರು ಯಾವುದೇ ಒಂದು ಕೆಲಸಗಳಲ್ಲಿ ಮಗ್ನರಾಗಿಯಾಗಿರುತ್ತಾರೆ. ಎಸ್ಕಿಮೊ ಸ್ತ್ರೀಯರು ಹಾಗೂ ದಕ್ಷಿಣ ನಮೀಬಿಯಾದ ಸ್ತ್ರೀಯರು ಅತ್ಯಂತ ಶಕ್ತಿಶಾಲಿಗಳಾಗಿದ್ದಾರೆ. ಆದರೂ ಇಂದಿನ ಪ್ರಪಂಚದಲ್ಲಿ ಎಲ್ಲಿಯೂ‘ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ’ ಸೃಷ್ಟಿಯಾಗಿರುವುದು ಕಾಣಿಸುತ್ತಿಲ್ಲ. ಆದರೆ ‘ಮಾತೃ ಪರಂಪರೆ ಸಮಾಜ ಮಾತ್ರ’ ಇದೆ. ಆದರೆ ಅಮೇರಿಕಾದ ನವಹೋಜುಲು ಹಾಗೂ ಆಫ್ರಿಕಾದಲ್ಲಿ, ಕೇರಳದ ನಾಯರ್ಗಳಲ್ಲಿ, ಅಸ್ಸಾಂನ ಕಾಸಿ, ಗಾರೋ ಹಾಗೂ ಬಂಜಾರ ಬುಡಕಟ್ಟುಗಳಲ್ಲಿ ಇಂದಿಗೂ ‘ಮಾತೃ ಪ್ರಧಾನ ಕುಟುಂಬ’ ವ್ಯವಸ್ಥೆ ಕಾಣಬಹುದು. ಪಿತೃ ಪ್ರಧಾನ ಕುಟುಂಬ ಇಂದಿಗೂ ಹೆಣ್ಣಿನ ವಿಷಯದಲ್ಲಿ ಕಪಟತನ, ಅಹಂಕಾರ, ಸ್ವಾರ್ಥದಿಂದ ಮಹಿಳೆಯನ್ನು ಕಾಣಲಾಗುತ್ತದೆ.
ಕ್ರಿ.ಪೂ. 563ರಲ್ಲಿಯೂ ಮಹಿಳೆಯರನ್ನೂ ಸಮಾನವಾಗಿ ಕಂಡ ಮಹಾಮಾನವತಾವಾದಿಗಳು ಇದ್ದರು.ಅವರನ್ನೂ ಈ ಸಮಾಜ ನಾಶ ಮಾಡಿತು. ಇದು ವಿಪರ್ಯಾಸ. ಗ್ರೀಕ್ ಪುರಾಣದಂತೆ ಬೀಜ ಬಿತ್ತನೆ ಬಿತ್ತುವುದನ್ನೂ ಕಲಿಸಿದ್ದು ‘ಡೆಮಿಟರ್’ ಎನ್ನುವ ಸ್ತ್ರೀ ದೇವತೆ, ಪಿಸಿನ್, ಸರಿಸ್, ಡೆಮಿಟರ್ ದೇವರುಗಳು ಭೂಮಿಯ ಸಾರವನ್ನು ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಸ್ತ್ರೀಯರೇ ವ್ಯವಸಾಯವನ್ನು ಆರಂಭಿಸಿದವರು ಎಂದು ಇದು ರುಜುವಾತು ಪಡಿಸುತ್ತದೆ. ನಮ್ಮ ದೇಶದ ಬೆಳೆಗಳನ್ನು ಕೊಯ್ಯುವ ಸಮಯದ ‘ಸೀತಾಯಜ್ಞ’ ಸಹ ಸ್ತ್ರೀಯರಿಗೆ ಸಂಬಂಧಿಸಿದ ಆಚರಣೆಯಾಗಿದೆ.
ಇತಿಹಾಸದಲ್ಲಿ ದಾಖಲಾಗಿರುವಂತೆ ರೈತ – ಕಾರ್ಮಿಕರ ಸರಕಾರ ಸ್ಥಾಪನೆಗಾಗಿ ಸಾವಿರಾರು ಮಹಿಳೆಯರು ಪ್ಯಾರಿಸ್ ಕಮ್ಯೂನ್ನಲ್ಲಿ ತೀವ್ರತರ ಹೋರಾಟ ಮಾಡಿ, ಸುಮಾರು 7000 ಮಹಿಳೆಯರು ಒಂದೇ ದಿನ ಆಹಾರಕ್ಕಾಗಿ ನಡೆಸಿದ ಹೋರಾಟ ಅವಿಸ್ಮರಣೀಯವಾಗಿದೆ.ಅನುಭವ ಮಂಟಪದಲ್ಲಿ ಮೊದಲು ಸ್ತ್ರೀ ಸ್ವಾತಂತ್ರ್ಯಕ್ಕಾಗಿ ಸಮಾನತೆಗಾಗಿ ಅಲ್ಲಮ ಪ್ರಭು-ಗಳೊಂದಿಗೆ ಹೋರಾಡಿದ ಮಹಿಳೆ ಅಕ್ಕಮಹಾದೇವಿ.
ನಮ್ಮ ರಾಜ್ಯದಲ್ಲಿ ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕರಂತೆ ಪ್ರಚಲಿತವಾಗಿದ್ದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು ಸಾಕಷ್ಟು ಜನ ಇದ್ದಾರೆ. ಅವರ ಹೆಸರನ್ನೇ ನಾವು ಕೇಳಿಲ್ಲ. ನಾವು ಅದರಲ್ಲಿ ಪ್ರಮಖರು ಎಂದರೆ, ಪಣಜಿಕರ ಕೃಷ್ಣಬಾಯರು, ಸಾಂಬ್ರಾಣಿ ಎಲ್ಲಮ್ಮನವರು, ಪಾಟೀಲ ನಾಗಮ್ಮನವರು, ಕುಂದಾಪುರ ಉಮಾಬಾಯರಂತಹ ಅನೇಕರಿದ್ದಾರೆ. ಇವರ ಬಗ್ಗೆ ಸಂಶೋಧನೆಗಳು ಅಗತ್ಯ.
ಮಹಿಳೆಯರಇತಿಹಾಸ ಗಮನಿಸಿದರೆ, ಸ್ವಾತಂತ್ರ್ಯ ಹೋರಾಟ, ಸೇರಿದಂತೆ ಎಲ್ಲೆಡೆ ಇದ್ದಾರೆ. ಚೈನಾ ಪ್ರಧಾನಿಯಾಗಿದ್ದ ಚೌಎಲ್ತ್ರಿ ಹೆಂಡತಿ ಟೆಂಗ್ ಇಂಗ್ ಚಾವೋ 1927-32 ರವರೆಗೂ ಭೂಗತ ಜೀವನ ಕಂಡು ಹೊರ ಬಂದು ವಿಮೋಚನಾ ಸೈನ್ಯ –(ಕೆಂಪು ಸೈನ್ಯ)ವನ್ನೇ ಮುನ್ನಡೆಸಿದ್ದರು.ತೆಲಂಗಾಣದ “ಮಲ್ಲುಂ”ಗೋರಿಲ್ಲಾ ತಂತ್ರಗಳ ದಳದ ನಾಯಕತ್ವ ವಹಿಸಿ, ನಿಜಾಮರ ವಿರುದ್ದ ಹೋರಾಡಿದಳು. 1917ರಲ್ಲಿ ಮಹಿಳೆಯರ ಹೋರಾಟದಿಂದ 1919ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಬಂತು. ನಮ್ಮ ದೇಶದ ಚಂಬಲ್ ರಾಣಿಯಂತಹ ನೂರಾರು ಜನ. 1919-1985ರಲ್ಲಿ ಆಂಧ್ರದ ಕ್ರಾಂತಿಕಾರಿ ಮಹಿಳೆ ಚಾಕಲಿ ಐಲಮ್ಮ (ಆಗಸರ ಐಲಮ್ಮ) ಜಮೀನುದಾರರನ್ನು ಎದುರಿಸಿ ಹೊರಡಿ ತೆಲಂಗಾಣ ಹೋರಾಟಕ್ಕೆ ಸ್ಫೂರ್ತಿ ಸೆಲೆಯಾದರು.ಇಂದಿಗೂ ವ್ಯಕ್ತಿಗತ ಉತ್ಪತ್ತಿ, ಸಾಮೂಹಿಕ ಉತ್ಪತ್ತಿ ಕಾರ್ಯದಲ್ಲಿ ಗ್ರಾಮ ಪಂಚಾಯತಿಗಳಲ್ಲಿ ನಮ್ಮ ಗ್ರಾಮೀಣ ಮಹಿಳೆಯರು ಮುಂದಿದ್ದಾರೆ.ನಮ್ಮ ದೇಶದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ, ಕಲ್ಪನಾ ಚಾವ್ಲಾ, ಪಿ.ಟಿ. ಉಷಾ, ಮದರ್ ತೆರೆಸ, ಸಾಲು ಮರದ ತಿಮ್ಮಕ್ಕ, ನಾಟ್ಯ ಸರಸ್ಪತಿ ವೆಂಕಟಲಕ್ಷ್ಮಮ್ಮ, ದರೋಜಿ ಈರಮ್ಮರಂತಹ ಸಾವಿರಾರು ಜನರ ಪಟ್ಟಿ ಬೆಳೆಯುತ್ತದೆ.
ಆದರೆ ಮಹಿಳೆಯರು ಸಮಾನ ಕೆಲಸಕ್ಕೆ ಪುರುಷರಷ್ಟೇ ಸಮಾನ ವೇತನ ಪಡೆಯುವಂತಾಗಬೇಕು.ಅವರ ನೈಪುಣ್ಯತೆ, ಕರ್ತವ್ಯ, ಜವಾಬ್ದಾರಿ, ಆಧರಿಸಿ ಪುರುಷನಿಗೆ ಮೀರಿದ ವೇತನವೂ ಸಿಗಬೇಕು. ಆದರೆ ಇಂದಿಗೂ ಹೆಣ್ಣು ಭ್ರೂಣಗಳ ಹತ್ಯೆ, ಹೆಣ್ಣು ಶಿಶುಗಳ ಮಾರಾಟ, ‘ಸ್ತ್ರೀ’ ಮಾರಾಟ, ಸ್ತ್ರೀಯರನ್ನು ಭೋಗದ ವಸ್ತುವಾಗಿಸುವುದು, ಸ್ವಾತಂತ್ರ್ಯದಿಂದ ವಂಚಿಸುವುದು ನಡೆಯುತ್ತಲೇ ಇದೆ. ಅದು ಮಹಿಳೆಯರ ಬೆಳವಣಿಗೆಗೆ ಮಾರಕ. ಹೆಣ್ಣು ಶಿಶುಗಳು ಬೆಂಗಳೂರು ಒಂದರಲ್ಲೇ ಪ್ರತಿವರ್ಷ ಸಾವಿರಾರು ಜನ ಕಾಣೆಯಾಗುತ್ತಿವೆ.
* ಮಹಿಳೆಯೇ ಇಲ್ಲದ ಜಗತ್ತು ಊಹಿಸಿಕೊಳ್ಳಿ. ಸಾಧ್ಯವೇ ಇಲ್ಲ. ಮಹಿಳೆ ಎಲ್ಲರ ಬದುಕಿಗೊಂದು ಶಕ್ತಿ, ಧೈರ್ಯ, ಚೈತನ್ಯ, ಬಲ, ಸ್ಪೂರ್ತಿ ಚಿಲುಮೆಯಾಗಿದ್ದಾಳೆ.
* ಸುಸ್ಥಿತ ನಾಳೆಗಾಗಿ ಇಂದೇ ಲಿಂಗ ಸಮಾನತೆ ಸಂಪೂರ್ಣ ಜಾರಿಗೆ ತರಬೇಕು.
* ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ದೇವತೆ ಮಹಿಳೆ.
ಮಹತ್ವವಾದ ಮಾನವನ ಕಲ್ಯಾಣಕ್ಕೆ ಮಹಿಳೆಯರು ಕಾರಣವಾಗಿರುವುದರಿಂದ ಪುರುಷರು ಸಹ ಸ್ತ್ರೀ ಮನಸ್ಥಿತಿಯವರಾಗಬೇಕಾಗಿದೆ.ಅವರ ನೋವು ಅರಿಯಬೇಕು.ಈ ಹಿಂದೆ ಶೋಷಣೆಗೆ ಒಳಗಾಗಿದ್ದ ಮಹಿಳೆಯರಿಗೆ ಶಿಕ್ಷಣವು ಮರಿಚಿಕೆಯಾಗಿತ್ತು. ಸಂವಿಧಾನಾತ್ಮಕ ಸ್ವಾತಂತ್ರ್ಯದಿಂದ ಅದು ಸಾಧ್ಯವಾಯಿತು. “ಮಹಿಳಾ ಮೀಸಲೂ ಮಸೂದೆ”ಯು ಪೂರ್ಣಜಾರಿಯಾಗಿಲ್ಲ. ಈ ವಿಶ್ವ ಮಹಿಳಾ ದಿನದಲ್ಲಾದರೂ ಜಾರಿಯಾಗಬೇಕಾಗಿದೆ. ಮಹಿಳೆ ಮಸೀದಿಗೂ, ಮಸಣಕ್ಕೂ, ಪಾರ್ಲಿಮೆಂಟಿಗೂ ಹೋಗಿ ಬರುವಂತಾಗಬೇಕು. ದೇವದಾಸಿಯರು, ಮಂಗಳ ಮುಖಿಯರ ಬರ್ಬರ ಬದುಕು ಹಸನಾಗಬೇಕಾಗಿದೆ. ‘ಸತಿ’ಹೋದವರನ್ನೂ ಪೂಜಿಸುವುದು ನಿಲ್ಲಬೇಕು. ಮಹಿಳೆಯರ ಮೇಲಿನ ಅತ್ಯಾಚಾರಗಳು, ಹಿಂಸೆಗಳು, ಮೌಢ್ಯಗಳು ಎಲ್ಲಾ ಕಡೆಗಳಲ್ಲಿ ನಿಲ್ಲಬೇಕು. ಇದಕ್ಕಾಗಿ ಇನ್ನಷ್ಟು ವಿಶೇಷ ಕಾನೂನುಗಳು ರಚನೆಯಾಗಬೇಕು. ಜಾಗೃತಿ ಅರಿವು ಅಗತ್ಯ.
2012ರ ಡಿಸೆಂಬರ್ ದೆಹಲಿಯಲ್ಲಿ ನಡೆದ ನಿರ್ಭಯ ಅತ್ಯಾಚಾರ, ಇತ್ತೀಚೆಗೆ ಪರಿಹಾರ ಕಾಣುತ್ತಿರುವುದು, ಮುಂಬೈನ ಧನರಾಜ್ ಎನ್ನುವ 57 ವರ್ಷದವನು ಪಕ್ಕದ ಮನೆಯ ಅಪ್ರಾಪ್ತ ಬಾಲಕಿ ಮೇಲೆ ನಡೆಸಿದ ಅತ್ಯಾಚಾರಕ್ಕೆ 3 ವರ್ಷಗಳ ನಂತರ 14 ವರ್ಷಗಳ ಶಿಕ್ಷೆ ಸಹ ಆಗಿದೆ, ಇದು ನಮ್ಮ ಸಮಾಜ ಮಹಿಳೆ ಪರ ಚಲಿಸುತ್ತಿರುವ ಆಶಾಕಿರಣವಾಗಿದೆ.
ಇತ್ತೀಚೆಗೆ ರಾಮನಗರ ಜಿಲ್ಲೆಯ ಅಮ್ಮನಪುರ ತಾಂಡಾದಲ್ಲಿ ಸಾರ್ವಜನಿಕರೇ ಹಿಡಿದ ಸಾಮೂಹಿಕ ಅತ್ಯಾಚಾರಿಗಳು 57 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲ್ಲಲು ಯತ್ನಿಸಿದವರನ್ನು ಊರಿನವರೆ ಹಿಡಿದು ಜೈಲಿಗೆ ಅಟ್ಟಿರುವ ಇಬ್ಬರು ಅತ್ಯಾಚರಿಗಳು ಈಗ ಸಾಕ್ಷಿಗಳಿಗೆ ಲಂಚ ನೀಡಿ ಜಾಮೀನು ಪಡೆಯುತ್ತಿರುವುದು ವಿಪರ್ಯಾಸ. ನ್ಯಾಯಾಲಯಗಳಿಗೆ ಸಾಕ್ಷಿಯೇ ಮುಖ್ಯ. ಸಾರ್ವಜನಿಕರ ಹೇಳಿಕೆ ಬೇಡವೆ? ಹಾಗಿದ್ದರೆ ಹಣಬಲ, ಸುಳ್ಳು ಸಾಕ್ಷಿಗೆ ನ್ಯಾಯ ಸಿಗುವುದಾದರೆ ನ್ಯಾಯಾಲಯಗಳ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡುತ್ತಿದೆ. ಇಂತಹ ಪ್ರಕರಣಗಳು ಸಾವಿರಾರು ನಮ್ಮ ಮುಂದೆ ಇವೆ ಎಂಬುದು ಚಿಂತಿಸಬೇಕಾದ ಸಂಗತಿ.
ಮೈಲಿಗೆ, ಸೂತಕಗಳು ದ್ರಾವಿಡರಲ್ಲಿ ಪವಿತ್ರವೆಂದು ಭಾವಿಸಲಾಗುತ್ತದೆ. ಆದರೆ ಇತ್ತೀಚೆಗೆ ದೊಡ್ಡ ಸ್ವಾಮೀಜಿ ಎಂದು ಬಿಂಬಿಸಿಕೊಂಡಿರುವ ಗುಜರಾತಿನ ಒಬ್ಬರು “ಮುಟ್ಟಾದ ಮಹಿಳೆ ಮಾಡಿದ ಆಹಾರ ತಿಂದರೆ ಪಶುಜನ್ಮ ಪ್ರಾಪ್ತಿ” ಯಾಗುತ್ತದೆ. ಎಂಬ ಮೌಡ್ಯ ಬಿತ್ತುತ್ತಿದ್ದಾರೆ.ಇವರಿಗೆ ಕೈವಾರ ತಾತಯ್ಯ ಹೇಳಿದ ಉಚ್ಚೆ ಗುಂಡಿಯಿಂದ ಹುಟ್ಟಿಬಂದರು ಇವರು ತಾವೇ ಶ್ರೇಷ್ಠ ಎನ್ನುವುದು ಪ್ರಶ್ನಾತೀತ.
‘ಗೆಜ್ಜೆ ಪೂಜೆ’ ಹೆಣ್ಣಿನ ಜೊತೆ ಪ್ರಸ್ತಕ್ಕಾಗಿ ಆಯ್ಕೆಯಾಗುವ ವ್ಯಕ್ತಿ ಯಾವುದೇ ಜಾತಿಗಾದರೂ ಸೇರಬಹುದು. ಮೇಲ್ವರ್ಗ, ಹಣವಂತರು ಮಾತ್ರ ಗೆಜ್ಜೆ ಪೂಜೆಗೆ ಅರ್ಹರು ಎಂಬ ನಂಬಿಕೆ ಇತ್ತು. ಇದು ಅಂದಿನ ಕರಾಳತೆ ಸಂಕೇತ. ಇಂದು ಇತರೆ ರೂಪದಲ್ಲಿ ಇವೆಲ್ಲವೂ ಇಂದಿಗೂ ಪರೋಕ್ಷವಾಗಿ ಚಾಲನೆಯಲ್ಲಿದೆ. ಅದೂ ಸಹ ನಿಲ್ಲಬೇಕು. ಆಗ ನಿಜ ಅರ್ಥದಲ್ಲಿ “ವಿಶ್ವಮಹಿಳಾ ದಿನಾಚರಣೆ”ಗೆ ಅರ್ಥ ಬರಲಿದೆ.
ಭಾರತದಲ್ಲಿ ಮಹಿಳೆಯರಿಗಾಗಿ ಸಾಂವಿಧಾನಿಕ ಹಕ್ಕುಗಳಿವೆ. (ಕಾನೂನು ಸಹಾಯ):
- ಸೆಕ್ಸನ್ 100 ಆತ್ಮರಕ್ಷಣೆಗಾಗಿ ಮಹಿಳೆ ಪುರುಷನ ಮೇಲೆ ಹಲ್ಲೆ ಮಾಡುವುದು ತಪ್ಪಲ್ಲ
• ಸೆಕ್ಷನ್ 228 ‘ಎ’ ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಶೋಷಣೆ ನೇರ ಪ್ರಕಟ ಇಲ್ಲ.
• ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ದೌರ್ಜನ್ಯಗಳು, ಅನ್ಯಾಯಗಳ ಬಗ್ಗೆ ಯಾರು ಧ್ವನಿ ಎತ್ತುವುದಿಲ್ಲ.
• ಕಚೇರಿಗಳಲ್ಲಿ ಮಹಿಳಾ ದೌರ್ಜನ್ಯ ಸಹ ಕಡಿಮೆ ದಾಖಲಾಗುತ್ತವೆ. ವರದಕ್ಷಿಣೆ ನಿಷೇಧ ಕಾಯ್ದೆ 1961 ವರದಕ್ಷಿಣೆ ಕೊಡುವುದು ಪಡೆಯುವುದು ತಪ್ಪು ಎನ್ನುತ್ತದೆ.
• ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಅನೇಕ ಶಾಸಕರು, ಮಾಜಿ ಶಾಸಕರು, (ಬಜೇಶ್ ಠಾಕೂರ್ ಪ್ರಕರಣದಲ್ಲಿ)ರಂತಹ ಅನೇಕರಿಗೆ ಅಪರಾಧಿಕ ತೀರ್ಪುಗಳು ಬಂದಿವೆ.
• ಕಾನೂನಿನ ಮುಂದೆ ಸಮಾನತೆಯ ಮೂಲಭೂತ ಹಕ್ಕು ವಿಧಿ-14
• ತಾರತಮ್ಯವನ್ನು ನಿಷೇಧಿಸುವ ಹಕ್ಕು ವಿಧಿ-15(3)
• ಸಾರ್ವಜನಿಕ ಉದ್ಯೋಗದ ವಿಷಯದಲ್ಲಿ ಅವಕಾಶದ ಸಮಾನತೆ ಮತ್ತು ಲೈಂಗಿಕತೆಯ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವುದು ವಿಧಿ-16
• ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಯಾವುದೇ ಉದ್ಯೋಗ, ವ್ಯಾಪಾರ ನಡೆಸುವ ಸ್ವಾತಂತ್ರ್ಯ ವಿಧಿ-19
• ಭಾರತೀಯ ದಂಡ ಸಂಹಿತೆ ಕಲಂ 354 ಅಡಿ ದೌರ್ಜನ್ಯವಾದರೆ ರಕ್ಷಣೆ ಇದೆ.
• ಕಲಂ-494 ಅಡಿ ಮಹಿಳೆಯರಿಗೆ ಗಂಡ ಹೇಂಡತಿ ಮತ್ತೆ ಮದುವೆಯಾದರೆ ಕಾನೂನಾತ್ಮಕ ರಕ್ಷಣೆ ಇದೆ. - ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ 1987 ರ ಸೆಕ್ಷನ್ 12(ಸಿ) ಅಡಿಯಲ್ಲಿ ಮಹಿಳೆಯು ತನ್ನ ಆದಾಯವನ್ನು ಲೆಕ್ಕಿಸದೇ ರಾಜ್ಯದಲ್ಲಿ ಉಚಿತ ಕಾನೂನು ನೆರವು ಪಡೆಯಲು ಅರ್ಹಳಾಗಿರುತ್ತಾಳೆ. ವಯಕ್ತಿಕ ಅಥವಾ ಜಂಟಿ ಹಣಕಾಸು ಸಂಪನ್ಮೂಲಗಳ ಪ್ರವೇಶ ಮತ್ತು ಮಾಲೀಕತ್ವದಲ್ಲಿ ಎಲ್ಲಾ ಸಮಯದಲ್ಲೂ ನ್ಯಾಯದ ಪ್ರವೆಶದ ಹಕ್ಕು ಇರತ್ತದೆ.
ಹೆಣ್ಣು, ಭ್ರೂಣ ಹತ್ಯೆ ಮತ್ತು ಮಕ್ಕಳ ಮಾರಾಟ ಲಾಭದ ದಂಧೆ
ಹೆಣ್ಣು ಭ್ರೂಣ ಹತ್ಯೆ, ಇದೊಂದು ಸಾಮೂಹಿಕ ಕೊಲೆ:-
ಕಳೆದ 10-15 ವರ್ಷಗಳಲ್ಲಿ ಆದ ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳ ಭೀಕರ ಅನಾಹುತಗಳಲ್ಲಿ ಹೆಣ್ಣುಭ್ರೂಣ ಹತ್ಯೆಯೂ ಒಂದಾಗಿದೆ. ಇದು ಪ್ರಜ್ಞಾವಂತರಲ್ಲಿ ಹೆಚ್ಚು ಇರುವುದೇ ಆಘಾತಕಾರಿ ಸಂಗತಿ. ಲಿಂಗಪತ್ತೆ, ಭ್ರೂಣಹತ್ಯೆ ನಿತ್ಯದ ಹಣ ಸಂಪಾದನೆ ಮಾರ್ಗ ವೈದ್ಯರುಗಳಿಗೆ.
ರಾಜ್ಯದಲ್ಲಿ ಇತ್ತೀಚೆಗೆ ನೂರಾರು ಭ್ರೂಣ ಹತ್ಯೆ ಮಾಡಿ ಕಸದ ರಾಶಿಗೆ ಎಸೆದ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೂ ಕ್ರಮ ಜರೂಗಿಸಿಲ್ಲ, ರಾಜ್ಯದಲ್ಲಿ ಹೀಗೆ ನೂರಾರು ಪ್ರಕರಣ ಕಾಣಸಿಗುತ್ತವೆ. ಈ ಕೃತ್ಯ ತಡೆಗಟ್ಟಲು ಕಾನೂನು ಕಾಯ್ದೆಗಳಿವೆ. ಆದರೂ ನಿಂತಿಲ್ಲ.ಇಂತಹ ನೂರಾರು ಪ್ರಕರಣಗಳು ನ್ಯಾಯಾಲಯದ ಹಂತದಲ್ಲೂ ಇವೆ. ಇತ್ತೀಚೆಗೆ ಒಂದು ಸಮುದಾಯದ 20,000 ಯುವಕರಿಗೆ ಕೇವಲ 200 ಮಹಿಳೆಯರು ವಧುವರರ ಸಮಾವೇಶಕ್ಕೆ ಬಂದ ಉದಾಹರಣೆಯೇ ಇದಕ್ಕೆ ಸಾಕ್ಷಿ ಎನಿಸುತ್ತದೆ.
ಹುಟ್ಟುವ ಮಕ್ಕಳು ಪ್ರಕೃತಿದತ್ತವಾಗಿ ಹೆಣ್ಣು, ಗಂಡಾಗಿ ಹುಟ್ಟುತ್ತವೆ ಮತ್ತು ನೈಸರ್ಗಿಕ ಸಮತೋಲನ ಕಾಯ್ದಕೊಳ್ಳುವುದು. ಅದರೆ ಹುಟ್ಟುವ ಹೆಣ್ಣುಮಗುವಿಗೆ ಅನೇಕ ಸಂದರ್ಭಗಳಲ್ಲಿ ತಾಯಿಯೇ ಅಂದರೆ ಮತ್ತೊಬ್ಬ ಹೆಣ್ಣೆ ಶತೃವಾಗಿ ಬಿಡುವ ಸಂದರ್ಭ ಖೇದಕರ. ಹೆಚ್ಚು ಪ್ರಕರಣಗಳು ಬೆಂಗಳೂರು, ಬೆಳಗಾಂ, ಮಂಡ್ಯ, ರಾಮನಗರ, ಗುಲ್ಬರ್ಗಾ ಮುಂತಾದ ಜಿಲ್ಲೆಗಳಲ್ಲಿ ದಾಖಲಾಗಿವೆ. 1961 ರಲ್ಲಿ ಗಂಡು – ಹೆಣ್ಣುಗಳ ಅನುಪಾತ 1000-976 ಇದೇ, ಈಗ ಇದು ತೀರ್ವತರವಾಗಿ ಕುಸಿದಿದೆ. ಭ್ರೂಣಹತ್ಯೆಗೆ ಪ್ರಮುಖ ಕಾರಣಗಳೆಂದರೆ ಬಾಲ್ಯ ವಿವಾಹ, ಧಾರ್ಮಿಕ ನಂಬಿಕೆಗಳು, ಆರ್ಥಿಕ ದು:ಸ್ಥಿತಿ, ಮೂಢನಂಬಿಕೆ, ಯಜಮಾನಿಕೆ ಗುಣ, ಗಂಡೆ ಶ್ರೇಷ್ಠ, ರಕ್ಷಕ, ಕಡೆಗಾಲದಲ್ಲಿ ಆಗುತ್ತಾನೆ, ವೈದ್ಯಕೀಯ ಕಾರಣಗಳು, ವಾರಸುದಾರನೆಂಬ ನಂಬಿಕೆ, ಜೊತೆಗೆ ವರದಕ್ಷಿಣೆ, ಮದುವೆ ಖರ್ಚು ಹೀಗೆ ನಾನಾ ಕಾರಣಗಳಿವೆ.
ಹೆಣ್ಣು ಮಾತೆ, ಜಗನ್ಮಾತೆ, ಲಕ್ಷ್ಮಿ, ಸರಸ್ವತಿ, ಭೂದೇವಿ, ಸೃಷ್ಠಿಕರ್ತೆ, ಜನನಿ ಎಂದೆಲ್ಲಾ ಬಿಂಬಿಸುವ ಧರ್ಮಗಳು ಇವುಗಳನ್ನು ತಡೆಯುವ ಯತ್ನ ಮಾಡುತ್ತಿಲ್ಲ. ಕಳೆದ 3 ದಶಕಗಳಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚಿನ ಹೆಣ್ಣು ಭ್ರೂಣಗಳನ್ನು ಗರ್ಭಪಾತದ ಮೂಲಕ ನಾಶಮಾಡಲಾಗಿದೆ. ಹೆಣ್ಣು ಮಕ್ಕಳ ದಂಧೆ ಅವಾಹಿತವಾಗಿದೆ. ಎಳೆ ಮಕ್ಕಳನ್ನು ಸರ್ಕಸ್ಗಳಿಗೆ, ವೇಶ್ಯಾವಾಟಿಕೆಗಳಿಗೆ, ಅಂಗಾಂಗ ಕೃಷಿಗೆ, ಸಮುದ್ರ ನಡುವೆ ನಡೆಯುವ ಸಂಶೋಧನೆಗಳಿಗೆ, ಹೀಗೆ ಅನೇಕ ಕಾರಣಕ್ಕೆ ನಡೆಯುತ್ತಿವೆ. ಇದನ್ನು ತಡೆಗಟ್ಟಬೇಕು.
ಭ್ರೂಣ ಹತ್ಯೆಯ ಪ್ರಭಾವ / ಸಮಸ್ಯೆ:- ಒಟ್ಟಾರೆ ಮಹಿಳೆ ಮತ್ತು ಪುರುಷ ಅನುಪಾತದಲ್ಲಿ ಅಸಮತೋಲವುಂಟಾಗುತ್ತಿದೆ. ಮಹಿಳೆ ಮೇಲಿನ ಅತ್ಯಾಚಾರ ಹೆಚ್ಚುತ್ತಿದೆ. ವಿವಾಹ ವಿಚ್ಛೇದನ ಹೆಚ್ಚು, ಕುಟುಂಬ ವ್ಯವಸ್ಥೆ ಹದಗೆಟ್ಟು, ದೇಶದ ಅಭಿವೃದ್ದಿ ಕುಂಠಿತವಾಗುತ್ತ್ತಿದೆ. ಗಂಡು ಮಕ್ಕಳಿಗೆ ವಧುಗಳ ಕೊರತೆ ಉಂಟಾಗಿ, ಧಾರ್ಮಿಕ ಸಂಘರ್ಷಕ್ಕೆ ಮುಖ್ಯ ಕಾರಣವಾಗುತ್ತಿದೆ.
ತುರ್ತುಕ್ರಮಗಳು:- ಕಾಯ್ದೆಗಳ ಕಟ್ಟುನಿಟ್ಟಿನ ಜಾರಿ ಮತ್ತು ಕಠಿಣ ಶಿಕ್ಷೆ. ವರದಕ್ಷಿಣೆ ವಿರೋಧಿ ಕಾಯ್ದೆಗಳ ಕಟ್ಟುನಿಟ್ಟಿನ ಜಾರಿ, ಅಂತರ ಜಾತಿ ವಿವಾಹಕ್ಕೆ ಉತ್ತೇಜನ ಅಗತ್ಯ. ಜೊತೆಗೆ ಸರಳ ವಿವಾಹ, ಮಂತ್ರ ಮಾಂಗಲ್ಯವಾಗುವುದು ಇವುಗಳ ತಡೆಗೆ ಉತ್ತರವಾಗಬಹುದು. ಸಮಸ್ಯೆಗಳು ಸರ್ಕಾರವನ್ನು ಎಚ್ಚರಿಸಿ, ಸ್ವತ: ಕಾರ್ಯಚರಣೆ ನಡೆಸಬೇಕು.
– ಡಾ. ಎ.ಆರ್.ಗೋವಿಂದಸ್ವಾಮಿ, ಕಲಾವಿದರು ಹಾಗೂ ಪ್ರಗತಿಪರ ಚಿಂತಕರು
ಮೊ: 9113243344




