ಎಸ್.ಎಂ.ಕೃಷ್ಣ ಜನಪರ, ರೈತಪರ ಮುತ್ಸದ್ದಿ: ಬಸವರಾಜ ಬೊಮ್ಮಾಯಿ

3 years ago

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ, ಯಶಸ್ವಿನಿ ಯೋಜನೆ ಸೇರಿದಂತೆ ಜನಪರ ಮತ್ತು ರೈತಪರ ಆಡಳಿತ ನೀಡಿದ ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರು ಯುವ ಪೀಳಿಗೆಗೆ ಆದರ್ಶ ರಾಜಕಾರಣಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದರು.
ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದ ನಂತರ ಮಾಧ್ಯಮದವರೊಮದಿಗೆ ಮಾತನಾಡಿದ ಅವರು, ನಾಡು ಕಂಡ ಸೃಜನಶೀಲ, ಸರಳ ಸಜ್ಜನಿಕೆಯ, ಸುರಾಜ್ಯ ನೀಡಿದ ರಾಜಕಾರಣಿ ಎಂದರು.
ಉತ್ತಮ ಆಡಳಿತ ವ್ಯವಸ್ಥೆಗೆ ಹೆಸರಾದಂಥ ಹಲವಾರು ಜನಪರ ಯೋಜನೆಗಳನ್ನು ನೀಡಿರುವ ಎಸ್.ಎಂ.ಕೃಷ್ಣ ಅವರಿಗೆ ರಾಷ್ಟ್ರಪತಿಗಳು ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದು ನಮಗೆಲ್ಲಾ, ಸಂತೋಷ, ಆನಂದ, ಅಭಿಮಾನ ಮತ್ತು ಹೆಮ್ಮೆ ತಂದಿದೆ. ಕನ್ನಡ ನಾಡಿನ ಸಾರ್ವಜನಿಕ ವಲಯದಲ್ಲಿ ಉತ್ತಮ ಹಾಗೂ ಗುಣಾತ್ಮಕ ಆಡಳಿತ ನೀಡಿರುವ ವಿಚಾರದಲ್ಲಿ ಅವರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಯೋಗ್ಯವಾಗಿದೆ ಎಂದರು.
ಜನಪರ, ರೈತಪರ ಆಡಳಿತ ನಡೆಸುವುದರ ಜೊತೆಗೆ ಐಟಿಬಿಟಿ ಕ್ಷೇತ್ರದಲ್ಲಿ ಬೆಂಗಳೂರನ್ನು ವಿಶ್ವವೇ ಕಣ್ಣೆತ್ತಿ ನೋಡುವಂತೆ ಮಾಡಿದ ಓರ್ವ ಮುತ್ಸದ್ದಿ ರಾಜಕಾರಣಿ. ಅವರು ಹಾಕಿದ ಅಡಿಗಲ್ಲಿನಿಂದಲೇ ಇಂದು ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಸಾಧನೆ ಮಾಡಲು ಸಾಧ್ಯವಾಯಿತು. ಅವರ ಆಡಳಿತ ವೈಖರಿ ನಮ್ಮಂತವರಿಗೆ ಪ್ರೇರಣೆಯಾಗಿದೆ ಎಂದರು.
ಕಾವೇರಿ ನದಿನೀರು ಹಂಚಿಕೆ ಸೇರಿದಂತೆ ಅನೇಕ ಜಟಿಲ ವಿಷಯಗಳನ್ನು ತಮ್ಮ ರಾಜಕೀಯ ಮುತ್ಸದ್ದಿತನದಿಂದಲೇ ಅತ್ಯಂತ ಸೂಕ್ಷ್ಮವಾಗಿ ಪರಿಹರಿಸಿದ ಚಾಣಾಕ್ಷ ರಾಜಕಾರಣಿ. ಅವರ ಆಡಳಿತ ಶೈಲಿಯಿಂದ ಕರ್ನಾಟಕಕ್ಕೆ ದೇಶದಲ್ಲೇ ಉತ್ತ ಹೆಸರು ಬಂದಿತ್ತು. ಯಾವುದೇ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಕಷ್ಟು ಮುಂದಾಲಚನೆಮಾಡುತ್ತಿದ್ದರು. ಅವರ ಸಾರ್ವಜನಿಕ ಜೀವನ ತೆರೆದ ಪುಸ್ತಕದಂತಿದೆ ಎಂದರು.
ಇದೇ ವೇಳೆ ಮಾತಾಡಿದ ಎಸ್.ಎಂ.ಕೃಷ್ಣ, ದೇಶದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಬಂದಿರುವುದು ನಿಜಕ್ಕೂ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಇದು ಬಯಸದೆ ಬಂದ ಭಾಗ್ಯ. ನನ್ನ ಕನಸು ಮನಸ್ಸಿನಲ್ಲೂ ಕೂಡ ಪ್ರಶಸ್ತಿ ನಿರೀಕ್ಷೆ ಮಾಡಿರಲಿಲ್ಲ ಎಂದರು.
ರಾಜಕೀಯ ಕ್ಷೇತ್ರದಲ್ಲಿ ನಾನು ಮಾಡಿರುವ ಅಲ್ಪ ಸೇವೆಯನ್ನು ಗುರುತಿಸಿ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತಿತರರು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿರುತ್ತೇನೆ ಎಂದರು.
ಮಧ್ಯಾಹ್ನದ ಬಿಸಿಯೂಟ ಮತ್ತು ಯಶಸ್ವಿನಿ ಯೋಜನೆ ನನ್ನ ಹೃದಯಕ್ಕೆ ಹತ್ತಿರವಾದ ಯೋಜನೆಗಳು. ರಾಜ್ಯ ಸರ್ಕಾರ ನನ್ನನ್ನು ತುಂಬ ಗೌರವದಿಂದ ನಡೆಸಿಕೊಂಡಿದೆ. ನಾಡಪ್ರಭು ಕೆಂಪೇಗೌಡ , ಪದ್ಮವಿಭೂಷಣ ಪ್ರಶಸ್ತಿ ಸಂದಿವೆ. ಸಚಿವರು ಮತ್ತು ಎಲ್ಲ ಪಕ್ಷಗಳ ಮುಖಂಡರಿಗೂ ನಾನು ಆಬಾರಿಯಾಗಿದ್ದಾನೆ ಎಂದರು.
ಈ ವೇಳೆ ಸಚಿವರಾದ ಆರ್.ಅಶೋಕ್, ಗೋಪಾಲಯ್ಯ, ಡಾ.ಕೆ.ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply