ಬೆಂಗಳೂರಿನ ಹೆಮ್ಮೆ ದೊಡ್ಡ ಗಣಪತಿ ದೇವಾಲಯ

2 years ago

ವಿಶ್ವದ ಅತಿ ಎತ್ತರದ ಏಕಶಿಲಾ ಗಣಪತಿ ಮೂರ್ತಿಗಳಲ್ಲಿ ಬೆಂಗಳೂರಿನ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿಯು ಒಂದಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಆಗಿದೆ. ದೊಡ್ಡ ಗಣಪತಿ ಬೆಂಗಳೂರು ನಗರದ ಹೆಮ್ಮೆಯ ಪ್ರತೀಕವಾಗಿದೆ. ಇಲ್ಲಿಗೆ ದೇಶವಿದೇಶಗಳಿಂದ ಗಣೇಶನನ್ನು ನೋಡಲು ಬರುತ್ತಾರೆ. ವಿದೇಶಗಳಲ್ಲೂ ಸಹ ದೊಡ್ಡ ಗಣಪತಿಯ ಭಕ್ತಾದಿಗಳು ಆಧುನಿಕ ತಂತ್ರಜ್ಞಾನದ ಮೂಲಕ ಇಲ್ಲಿನ ಪೂಜೆ ಆಚರಣೆಗಳನ್ನು ಅಲ್ಲಿಂದಲೇ ವೀಕ್ಷಿಸುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಅನೇಕ ರಾಜಕಾರಣಿಗಳು, ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸುವಂತಹ ಸಂಪ್ರದಾಯವನ್ನು ಹೊಂದಿದ್ದಾರೆ. ದೊಡ್ಡ ಗಣಪತಿ ನಮ್ಮನ್ನು ಕಾಪಾಡುತ್ತಾನೆ ಎನ್ನುವ ನಂಬಿಕೆ ಬಹಳಷ್ಟು ಮಂದಿಯಲ್ಲಿದೆ. ಬಹಳಷ್ಟು ಜನರಿಗೆ ಗಣಪತಿ ನಿಜ ಮಾಡಿದ್ದಾನೆ.

ಕನ್ನಡದ ಚಲನಚಿತ್ರಗಳ ಚಿತ್ರೀಕರಣದ ಪೂಜೆಯಂತೂ ಈ ದೇವಾಲಯದಲ್ಲಿ ವಾರದಲ್ಲಿ ಹಲವಾರು ಬಾರಿ ನಡೆಯುತ್ತಲೇ ಇರುತ್ತದೆ. ದೊಡ್ಡ ಗಣಪತಿಯ ಆಶೀರ್ವಾದವಿದ್ದರೆ ನಮ್ಮ ಚಿತ್ರ ಚೆನ್ನಾಗಿ ಮೂಡಿಬರುತ್ತದೆ, ಯಶಸ್ವಿಯಾಗುತ್ತದೆ ಎನ್ನುವ ನಿರ್ಮಾಪಕರ ನಂಬಿಕೆಯನ್ನು ಗಣೇಶ ಬಹಳಷ್ಟು ಸಂದರ್ಭದಲ್ಲಿ ಅವರ ನಂಬಿಕೆಗಳಿಗೆ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಅವರನ್ನು ಆಶೀರ್ವದಿಸಿದ್ದಾನೆ.

18 ಅಡಿ ಎತ್ತರದ 16 ಅಡಿ ಅಗಲದ ದೊಡ್ಡ ಗಣಪತಿ ಬೆಂಗಳೂರು ನಗರದ ಪ್ರವಾಸಿಗರಿಗೆ ಪ್ರಮುಖವಾದಂತಹ ಕೇಂದ್ರವಾಗಿದೆ. 500 ವರ್ಷಗಳ ಕಾಲದ ಇತಿಹಾಸವಿರುವ ಗಣಪನ ದೇವಸ್ಥಾನ ಕೆಂಪೇಗೌಡರ ಕಾಲದಲ್ಲಿ ಸ್ಥಾಪನೆಯಾಗಿದೆ ಎನ್ನುವ ಇತಿಹಾಸವಿದೆ.

ದೊಡ್ಡ ಬಸವಣ್ಣನ ದೇವಾಲಯದ ಸಮೀಪದಲ್ಲಿಯೇ ದೊಡ್ಡ ಗಣಪತಿಯು ಇದ್ದು, ಪ್ರತಿ ವರ್ಷ ನಡೆಯುವಂತಹ ಕಡಲೆಕಾಯಿ ಪರಿಷೆ ಜಾತ್ರೆಯ ಸಂದರ್ಭದಲ್ಲಿ ಗಣಪತಿಯನ್ನ ಮತ್ತು ಬಸವಣ್ಣನನ್ನು ನೋಡಲು ಲಕ್ಷಾಂತರ ಮಂದಿ ಬೇರೆಬೇರೆ ಭಾಗದಿಂದ ಆಗಮಿಸುತ್ತಾರೆ. ದೊಡ್ಡ ಬಸವಣ್ಣನಿಗೂ ಸಹ ಐತಿಹಾಸಿಕವಾದ ಅನೇಕ ಹಿನ್ನೆಲೆ ಇದೆ.

ಗಣೇಶ ಚತುರ್ಥಿಯ ದಿನ, ದೊಡ್ಡ ಗಣಪತಿಯ ದೇವರ ದರ್ಶನವನ್ನು ಮಾಡಲು ಸಹಸ್ರಾರು ಮಂದಿ ಸಾಲಿನಲ್ಲಿ ನಿಂತು ತಮ್ಮ ಭಕ್ತಿಯನ್ನು ಅರ್ಪಿಸುತ್ತಿದ್ದಾರೆ. ಪ್ರತಿ ವರ್ಷವೂ ಸಹ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಇರುತ್ತದೆ. ಹಬ್ಬದ ಮಾರನೆಯ ದಿನವು ಸಹ ಅದೇ ಪ್ರಮಾಣದಲ್ಲಿ ಭಕ್ತರ ಸಂಖ್ಯೆ ತುಂಬಿರುತ್ತದೆ. ಈ ಸಂದರ್ಭದಲ್ಲಿ ದೇವಾಲಯಕ್ಕೆ ಹೂವಿನ ಅಲಂಕಾರವನ್ನು ಮಾಡಿ ಮತ್ತಷ್ಟು ಅಂದವನ್ನು ಹೆಚ್ಚಿಸಿರುತ್ತಾರೆ.

ವರನಟ ಡಾ.ರಾಜಕುಮಾರ್ ಅವರ ಕುಟುಂಬದವರು ತಪ್ಪದೆ ಗಣಪತಿಯ ದೇವಾಲಯಕ್ಕೆ ವರ್ಷದಲ್ಲಿ ಅನೇಕ ಬಾರಿ ಬರುತ್ತಾರೆ. ಡಾ. ರಾಜಕುಮಾರ್ ಅವರು ಸಹ ದೊಡ್ಡ ಗಣಪತಿಯ ದೇವಾಲಯಕ್ಕೆ ಭಕ್ತರಾಗಿದ್ದರು. ದೇಶದ ಮತ್ತೊಬ್ಬ ಮಹಾನ್ ನಟ ಅಮಿತಾಬ್ ಬಚ್ಚನ್ ಅವರಿಗೆ ಚಿತ್ರೀಕರಣದ ವೇಳೆಯಲ್ಲಿ ಆದಂತಹ ಅಪಾಯಕ್ಕೆ ರಕ್ಷಣೆ ಕೋರಿ ದೊಡ್ಡ ಗಣಪತಿಗೆ ವಿಶೇಷ ಪೂಜೆ ಏರ್ಪಡಿಸಿದ್ದರು .

ಮುಜರಾಯಿ ಇಲಾಖೆಯ ಸಚಿವರಾಗಿರುವ ರಾಮಲಿಂಗಾರೆಡ್ಡಿಯವರು ಇತ್ತೀಚಿನ ದಿನಗಳಲ್ಲಿ ದೇವಾಲಯದಲ್ಲಿ ಸಾಕಷ್ಟು ಅನುಕೂಲತೆಗಳನ್ನ ಭಕ್ತರಿಗೆ ಕಲ್ಪಿಸಿಕೊಟ್ಟಿದ್ದಾರೆ. ತಾಯಂದಿರು ಮಕ್ಕಳಿಗೆ ಹಾಲು ಕುಡಿಸಲು ಪ್ರತ್ಯೇಕವಾದಂತಹ ಒಂದು ಕೊಠಡಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ. ಅದೇ ರೀತಿಯಲ್ಲಿ ಹಿರಿಯ ನಾಗರಿಕರಿಗೆ ಶೀಘ್ರವಾದ ದರ್ಶನಕ್ಕೆ ಆದೇಶವನ್ನು ಮಾಡಿದ್ದಾರೆ. ಹಲವು ಅಭಿವೃದ್ಧಿ ಕಾಮಗಾರಿಗಳ ನೀಲಿ ನಕ್ಷೆ ಸಿದ್ಧವಾಗುತ್ತಿದೆ.

ಬಸವನಗುಡಿ ಭಾಗದ ಜನರಿಗೆ ತಾವು ದೊಡ್ಡ ಗಣಪತಿ ದೇವಾಲಯದ ಭಾಗದವರು ಎಂದು ಹೇಳಲು ತುಂಬಾ ಹರ್ಷವಾಗುತ್ತದೆ. ಏಕೆಂದರೆ ದೊಡ್ಡ ಗಣಪತಿ ದೇವಾಲಯದ ಪರಿಚಯವಿಲ್ಲದ ಜನರೇ ಇರುವುದಿಲ್ಲ. ಸಂಕಷ್ಟ ಹರ ಚತುರ್ಥಿ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಜಾತ್ರೆಯ ರೀತಿಯಲ್ಲಿ ಗಣಪತಿಯ ದರ್ಶನವನ್ನ ಪಡೆಯುತ್ತಾರೆ.

ಅದೇ ರೀತಿಯಲ್ಲಿ ಜನವರಿ ಒಂದರಂದು ಮತ್ತು ಯುಗಾದಿ ಹಬ್ಬದ ದಿನದಂದು ವಿಘ್ನ ವಿನಾಯಕನ ದರ್ಶನವನ್ನ ಪಡೆದು ಆಶೀರ್ವಾದವನ್ನು ಪಡೆದರೆ ತಮ್ಮ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆಂಬ ಭರವಸೆಯಿಂದ ಸಹಸ್ರಾರು ಭಕ್ತರು ಶ್ರದ್ಧೆಯಿಂದ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುತ್ತಾರೆ.

ಇಲ್ಲಿನ ಗಣೇಶ ಮೂರ್ತಿ ಉದ್ಭವವಾಗಿರುವ ವಿಗ್ರಹವೆಂಬ ನಂಬಿಕೆಯೂ ಇದೆ. ಈ ನಂಬಿಕೆ ಕೂಡ ದೇವಾಲಯದ ಮಹತ್ವವನ್ನು ಹೆಚ್ಚಿಸಿದೆ. ದೊಡ್ಡ ಗಣಪತಿಗೆ ಬೆಣ್ಣೆ ಅಲಂಕಾರ, ಪ್ರಮುಖವಾದ ಆಕರ್ಷಣೆಯಾಗಿರುತ್ತದೆ.

– ಕೆಎಸ್ ನಾಗರಾಜ್, ಬೆಂಗಳೂರು

Leave a Reply