ಪರಿಸರ ಸ್ನೇಹಿ ಬಣ್ಣರಹಿತ ಮಣ್ಣಿನ ಗಣಪ ಮತ್ತು ಗೌರಿಯ ಮೂರ್ತಿಗಳ ಮಾರಾಟಕ್ಕೆ ಉತ್ತೇಜನ: ಈಶ್ವರ  ಖಂಡ್ರೆ

9 months ago

ಬೆಂಗಳೂರು: ಗಣಪತಿ ಹಬ್ಬ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯದಲ್ಲಿ ಪಿ ಓ ಪಿ ಇಂದ ಮಾಡಿದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಪರಿಸರಕ್ಕೆ ಮತ್ತು ಜಲ ಮೂಲಗಳಿಗೆ ಮಾರಕವಾದ ರಾಸಾಯನಿಕ ಬಣ್ಣ ಲೇಪಿತ ಪಿಓಪಿ ಮೂರ್ತಿಗಳ ಬದಲಿಗೆ ಪರಿಸರ ಸ್ನೇಹಿ ಬಣ್ಣರಹಿತ ಮಣ್ಣಿನ ಗಣಪ ಮತ್ತು ಗೌರಿಯ ಮೂರ್ತಿಗಳ ದಾಸ್ತಾನು, ಸಾಗಾಟ ಮತ್ತು ಮಾರಾಟಕ್ಕೆ ಉತ್ತೇಜನ ನೀಡಲು ಕ್ರಮ ವಹಿಸುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.

ಬೆಂಗಳೂರಿನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಓಪಿ ಗಣೇಶ ವಿಗ್ರಹಗಳನ್ನು ಕ್ಯಾಲ್ಷಿಯಂ, ಸಲ್ಫೇಟ್, ಹೆಮಿಹೈಡ್ರೇಟ್ ಯುಕ್ತ ಪುಡಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನೀಷಿಯಂ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿರುತ್ತವೆ. ಇಂತಹ ಮೂರ್ತಿಗಳಿಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸಲಾಗುತ್ತದೆ ಇವುಗಳು ಪರಿಸರಕ್ಕೆ ಹಾನಿಕಾರಕ ಎಂದರು.

ಇದನ್ನು ಕೆರೆ, ಬಾವಿ, ನದಿಯಲ್ಲಿ ವಿಸರ್ಜಿಸಿದಾಗ ಭಾರ ಲೋಹ ಕರಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಲಚರಗಳ ಸಾವಿಗೆ ಕಾರಣವಾಗುತ್ತದೆ. ಹೀಗಾಗಿ ಜನ ಜಾಗೃತಿ ಮೂಡಿಸಲು ಪರಿಸರ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಈ ಹಿಂದೆ ಪಿಓಪಿ ಗಣಪತಿ ಮೂರ್ತಿಗಳ ತಯಾರಿಕೆ, ದಾಸ್ತಾನು, ಮಾರಾಟ ಮಾಡದಂತೆ ಸುತ್ತೋಲೆ ಹೊರಡಿಸಲಾಗುತ್ತಿತ್ತು. ತಾವು ಸಚಿವರಾದ ಬಳಿಕ 2023ರಲ್ಲಿ ಪಿಓಪಿ  ಮೂರ್ತಿ ತಯಾರಿಕೆ, ಮಾರಾಟ ನಿಷೇಧಿಸಿ ಸರ್ಕಾರಿ ಆದೇಶವನ್ನೇ ಹೊರಡಿಸಲಾಗಿದೆ. ಇದನ್ನು ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದರು.

ಗೌರಿ, ಗಣೇಶ ಹಬ್ಬಕ್ಕೆ ಇನ್ನೂ ಒಂದು ತಿಂಗಳಿದ್ದು, ಈಗಿನಿಂದಲೇ ಪಿಓಪಿ ಗೌರಿ, ಗಣಪತಿ ಮೂರ್ತಿಗಳ ಸಾಗಾಟ, ದಾಸ್ತಾನು ಮಾಡದಂತೆ ನಿಯಂತ್ರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಬಹುಮಹಡಿ ಕಟ್ಟಡ, ವಸತಿ ಸಮುಚ್ಚಯಗಳು ಮತ್ತು ವಿವಿಧ ಬಡಾವಣೆಯಲ್ಲಿರುವ ಕ್ಷೇಮಾಭಿವೃದ್ಧಿ ಸಂಘಗಳನ್ನು ಸಂಪರ್ಕಿಸಿ, ಪಿಓಪಿ ಗಣಪತಿ ಮೂರ್ತಿಗಳ ಬದಲು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಮಾತ್ರ ಪೂಜಿಸುವಂತೆ ತಮ್ಮ ಸದಸ್ಯರಿಗೆ ತಿಳಿಸುವಂತೆ ಮನವಿ ಮಾಡಲೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Leave a Reply