ಬೆಂಗಳೂರು: ವಿಧಾನಸಭೆಯಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಪ್ರಸಕ್ತ ಅಧಿವೇಶನದವರೆಗೆ ಬಿಜೆಪಿ ಶಾಸಕರ ಅಮಾನತು ಆದೇಶವನ್ನು ವಿರೋಧಿಸಿ ಪ್ರತಿಪಕ್ಷಗಳು ವಿಧಾನಮಂಡಲದ ಉಭಯ ಸದನಗಳ ಕಲಾಪವನ್ನು ಇಂದು ಬಹಿಷ್ಕರಿಸಿದವು. ಇದರಿಂದಾಗಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪ ಪ್ರತಿಪಕ್ಷ ಸದಸ್ಯರಿಲ್ಲದೆ ಖಾಲಿ ಹೊಡೆಯುತ್ತಿತ್ತು. ಜೆಡಿಎಸ್, ಬಿಜೆಪಿ ಶಾಸಕರು ಬುಧವಾರ ವಿಧಾನಸಭೆಯಲ್ಲಿ ಐಎಎಸ್ ಅಧಿಕಾರಿಗಳನ್ನು ಮಹಾಘಟ್‍ಬಂಧನ ಸಭೆಯಲ್ಲಿ ಭಾಗವಹಿಸಿದ್ದ ನಾಯಕರ ಶಿಷ್ಟಾಚಾರ ಪಾಲನೆಗೆ ನಿಯೋಜಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.
ಬಿಜೆಪಿ ಧರಣಿ: ಕಲಾಪ ಬಹಿಷ್ಕರಿಸಿದ ಬಿಜೆಪಿ ಸದಸ್ಯರು ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಕೆಲ ಕಾಲ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕರ್ನಾಟಕದ ಜನರ ಬದುಕು ದುಸ್ತರವಾಗಿದೆ. ಕೊಲೆ ಸುಲಿಗೆ ಹೆಚ್ಚಾಗಿದೆ. ಪೊಲೀಸ್ ಠಾಣೆಯಲ್ಲಿ ಮಾಮೂಲು ಕೇಳುವ ಕೆಲಸ ಶುರುವಾಗಿದೆ. ವಿದ್ಯಾರ್ಥಿಗಳು, ರೈತರು, ಸರ್ಕಾರಿ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಯುವ ಜನರ ಬದುಕು ಅಸ್ಥಿರಗೊಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.




