ವಿಜಯನಗರ: ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿರುವ ಲೇಔಟ್ ಕೃಷ್ಣಪ್ಪ ಎಂಬ ಖ್ಯಾತಿಯ ಕಾಂಗ್ರೆಸ್ಸಿನ ಎಂ ಕೃಷ್ಣಪ್ಪ ಅವರನ್ನು ಸೋಲಿಸಲು ಬಿಜೆಪಿ ಸಾಕಷ್ಟು ಬೆವರು ಹರಿಸುತ್ತಿದೆ.
ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಒಕ್ಕಲಿಗ ಮತಗಳ ಜೊತೆಗೆ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯುವ ಉದ್ದೇಶದೊಂದಿಗೆ ಎಂ ರವೀಂದ್ರ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಇವರು ಎಂ ಕೃಷ್ಣಪ್ಪ ಅವರಿಗೆ ಬಾರಿ ಪೈಪೋಟಿ ನೀಡಿದ್ದರು. ಅದೇ ಆಧಾರದಲ್ಲಿ ಇವರಿಗೆ ಮತ್ತೆ ಟಿಕೆಟ್ ನೀಡಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ.
ಆದರೆ ಕೋವಿಡ್ ಸಮಯ ಸೇರಿದಂತೆ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಜನರ ಪಾಲಿಗೆ ಆಸರೆಯಾದ ಶಾಸಕ ಎಂ ಕೃಷ್ಣಪ್ಪ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಶಕ್ತಿಯುತರಾಗಿರುವಂತೆ ಕಾಣುತ್ತಿದ್ದಾರೆ. ಜೆಡಿಎಸ್ ಇಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಆರ್ಪಿಐ ನ ಅಭ್ಯರ್ಥಿಗೆ ಬೆಂಬಲ ಘೋಷಿಸಿದೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದರೂ ಕಾಂಗ್ರೆಸ್ ಗೆಲುವಿನ ಸಾಧ್ಯತೆಗಳು ಹೆಚ್ಚಿವೆ.



