ಜಗದೀಶನ ಅರಸುತ ಹೊರಟ ಗಿರಿಜಕ್ಕ; ಊಹೆಗೂ ದಕ್ಕದು ಕಾಲನ ಲೆಕ್ಕ

2 years ago

ಆಘಾತದ ಮೇಲೆ ಆಘಾತ ಅಂದ್ರೆ ಇದೇನಾ? ಸರಿಸುಮಾರು ಒಂದು ತಿಂಗಳ ಹಿಂದೆ ರಂಗಮಿತ್ರ ಜಗದೀಶ್ ಕೆಂಗನಾಳ ತೀವ್ರ ಹೃದಯಸ್ಥಂಭನದಿಂದ ನಿಧನ ಹೊಂದಿದ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ರಂಗ ಚಟುವಟಿಕೆಗಳಿಗೆ ಚಾಲನೆ ಇತ್ತವನು ಜಗದೀಶ. ಹೊಸಕೋಟೆಯ ಲಿಂಬೇಕಾಯಿಪುರದಲ್ಲಿ ಜನಪದರು ಎನ್ನುವ ಸುಸಜ್ಜಿತ ರಂಗಮಂದಿರ ಅಸ್ತಿತ್ವಕ್ಕೆ ಬರಲು ಅಸ್ತಿಭಾರದ ಪ್ರೇರಣೆ ಹಾಕಿದವನೇ ಈ ಕೆಂಗನಾಳ. ಈ ರಂಗ ಸ್ಥಾವರ ನಿರ್ಮಿಸಲು ಸಹರಂಗಕರ್ಮಿಗಳನ್ನು ಪ್ರೇರೇಪಿಸಿ ತಾನು ಮಾತ್ರ ರಂಗಜಂಗಮನಂತಿದ್ದು ಜಗದ ಜಂಜಡಗಳಿಂದ ಮುಕ್ತನಾದ.

ಮಾರ್ಚ್ 9 ರ ಎರಡನೇ ಶನಿವಾರದಂದು ಜನಪದರು ರಂಗತಂಡದವರು ಇದೇ ರಂಗಮಂದಿರದಲ್ಲಿ ಜಗದೀಶ್ ಕೆಂಗನಾಳ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಗೆಳೆಯ ಜಗದೀಶ್ ಜೊತೆಯ ರಂಗಪಯಣದ ಕುರಿತು ಮಾತಾಡಲು ನನ್ನನ್ನೂ ಆಹ್ವಾನಿಸಿದ್ದರು. ಪತಿಯ ಅಗಲಿಕೆಯಿಂದ ತತ್ತರಿಸಿ ಹೋಗಿದ್ದ ಗಿರಿಜಕ್ಕನನ್ನು ನೋಡಿ ಕರಳು ಕತ್ತರಿಸಿದಂತಾಯ್ತು. ಜಗದೀಶನ ಕುರಿತು ವೇದಿಕೆ ಮೇಲೆ ಮಾತಾಡುತ್ತಿರುವಾಗಲೇ ಗಿರಿಜಕ್ಕನನ್ನು ನೋಡಿ ದುಃಖ ಒತ್ತರಿಸಿ ಬಂತು.

ಅದೇನಾಯ್ತೋ ಅವತ್ತು ಗಿರಿಜಕ್ಕನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ದೈರ್ಯ ಬರಲಿಲ್ಲ. ಜಗದೀಶ್ ತೀರಿಕೊಂಡ ಇಡೀ ದಿನ ನಾನೂ ಜೊತೆಯಾಗಿದ್ದೆನಾದರೂ ಅತೀವ ನೋವಿನಲ್ಲಿದ್ದ ಗಿರಿಜಕ್ಕನ ಬಳಿ ಹೋಗಿ ಸಾಂತ್ವನವನ್ನೂ ಹೇಳಲಾಗದ ಗಿಲ್ಟ್ ನನ್ನನ್ನು ಕಾಡುತ್ತಿತ್ತು. ಸ್ಮರಣೆ ಕಾರ್ಯಕ್ರಮದಂದು ಸುಮ್ಮನಿರಲಾಗಲಿಲ್ಲ. ಗಿರಜಕ್ಕನ ಹತ್ತಿರ ಹೋಗಿ “ಸಮಾಧಾನ ಮಾಡಿಕೊಳ್ಳಿ. ಒಂದೆರಡು ಜನ್ಮಕ್ಕಾಗುವಷ್ಟು ಕೆಲಸ ಮಾಡಿ ಜಗದೀಶ ನಿರ್ಗಮಿಸಿದ್ದಾನೆ. ಆತನ ಅಗಲಿಕೆಯ ವೇದನೆಯನ್ನು ಆತನ ಸಾಧನೆ ಮರೆಸುತ್ತದೆ” ಎಂದು ಹೇಳಿದ್ದೆ. ಗಿರಿಜಕ್ಕ ಏನೊಂದೂ ಮಾತಾಡಲಿಲ್ಲವಾದರೂ ಅವರ ಕಣ್ಣುಗಳಲ್ಲಿ ನೂರು ನೋವಿನ ಭಾವಗಳು ಅಲೆಗಳಂತೆ ಉಕ್ಕಿದವು. ಹೆಚ್ಚು ಹೊತ್ತು ಆ ಆತಂಕದ ಕಣ್ಣುಗಳನ್ನು ಎದುರಿಸಲಾಗದೇ ಎದ್ದು ಬಂದು ಕಣ್ಣೊರೆಸಿಗೊಂಡೆ. ನನ್ನ ಗೆಳೆಯ ಗಿರಿಜಕ್ಕನಿಗೆ ಮೋಸ ಮಾಡಿ ಹೋಗಿದ್ದ. ಬದುಕಿನಾದ್ಯಂತ ಜೊತೆಗೆ ಇರುವೆನೆಂದು ಮಾತು ಕೊಟ್ಟು ಮದುವೆಯಾಗಿ ಬಾಳ ಸಾಗರದ ನಟ್ಟ ನಡುವೆ ಸಂಗಾತಿಯನ್ನು ಬಿಟ್ಟು ಹೋಗಿದ್ದ.

ಯಾವತ್ತೋ ಬೇಟಿಯಾಗುತ್ತಿದ್ದ ನನಗೆ ಜಗದೀಶನ ಅಗಲಿಕೆ ಅಷ್ಟೊಂದು ನೋವನ್ನು ಕೊಟ್ಟಿರುವಾಗ ಅನುದಿನವೂ ಆತನ ಜೊತೆಗಿದ್ದು ಕಷ್ಟ ಸುಖದ ಸಹಭಾಗಿನಿಯಾಗಿದ್ದ ಗಿರಿಜಕ್ಕನ ಅಂತರಂಗದ ದುಃಖ ಅಳತೆಗೆ ಮೀರಿದ್ದು. ಅದೆಷ್ಟು ನೊಂದುಕೊಂಡಳೋ, ಅದೆಷ್ಟು ತನ್ನೆದೆಯ ಭಾವನೆಗಳ ಕೊಂದುಕೊಂಡಳೋ ಗೊತ್ತಿಲ್ಲ. ಆದರೆ ಜಗದೀಶನನ್ನು ಬಿಟ್ಟು ಬದುಕಲಾಗದ ಸ್ಥಿತಿಗೆ ಗಿರಿಜಕ್ಕ ಬಂದಿದ್ದಂತೂ ಸತ್ಯ.

ಜಗದೀಶ್ ಅಂದ್ರೆ ಈಶ್ವರನ ಹೆಸರು. ಗಿರಿಜಕ್ಕ ಅಂದರೆ ಪಾರ್ವತಿಯ ಹೆಸರು. ಶಿವ ಪಾರ್ವತಿಯರ ಹೆಸರಿನ ಈ ದಂಪತಿಗಳು ಎಂದೂ ಅಗಲಿ ಇದ್ದವರಲ್ಲ‌. ಬದುಕು ತಂದೊಡ್ಡಿದ ಎಲ್ಲ ಅಡೆತಡೆಗಳನ್ನು ಜೊತೆಯಾಗಿ ಎದುರಿಸಿದವರು. ಸ್ವಂತ ಮನೆಯೊಂದನ್ನು ಕಟ್ಟಿಕೊಳ್ಳಬೇಕು ಎಂಬುದು ಗಿರಿಜಕ್ಕಳ ಮಹದಾಸೆ. ಅದೆಲ್ಲಾ ನಮಗ್ಯಾಕೆ ಎಂಬುದು ಈ ಜಂಗಮನಂತಾ ಜಗದೀಶನ ತಗಾದೆ. ಅದೆಷ್ಟೋ ದಿನಗಳ ಕಾಲ ದಂಪತಿಗಳ ನಡುವೆ ಮನೆ ವಿಷಯಕ್ಕೆ ಜಗಳ ಆಗಿದ್ದಿದೆ.  “ಅಣ್ಣಾ ನೀವಾದರೂ ನಿಮ್ಮ ಗೆಳೆಯನಿಗೆ ಮನೆಯೊಂದನ್ನು ಕಟ್ಟಲು ಹೇಳಿ, ನಿಮ್ಮ ಮಾತನ್ನು ಅವರು ಮೀರುವುದಿಲ್ಲ” ಎಂದು ಅಂದೊಂದು ದಿನ ಗಿರಿಜಕ್ಕ ನನ್ನ ಮುಂದೆ ಕಣ್ಣೀರಾಗಿದ್ದರು. ಜಗದೀಶನಿಗೆ ಬೈದು ಬುದ್ದಿ ಹೇಳಿದೆ. ಕೈಲಾದಷ್ಟು ಸಹಾಯ ಮಾಡುವುದಾಗಿಯೂ ಭರವಸೆ ಕೊಟ್ಟೆ. ಕೊನೆಗೂ ಮನೆ ಕಟ್ಟಲು ಮನಸ್ಸು ಮಾಡಿದ. ನನ್ನ ಹಾಗೆಯೇ ಕೆಲವಾರು ಗೆಳೆಯರೂ ತಮಗಾದಷ್ಟು ಸಹಾಯ ಮಾಡಿದರು. ಬರುತ್ತಿದ್ದ ಸಂಬಳದ ಬಹುಪಾಲು ಮನೆಗಾಗಿ ಮಾಡಿದ ಸಾಲಕ್ಕೆ ಪ್ರತಿ ತಿಂಗಳೂ ಜಮೆಯಾಗುತ್ತಿತ್ತು. ಮನೆ ನಡೆಸುವುದು ಹೇಗೆ ಎನ್ನುವುದೇ ಪ್ರಶ್ನೆ ಆಗಿತ್ತು. ಆಗ ” ನಾನು ಕೆಲಸಕ್ಕೆ ಹೋಗುತ್ತೇನೆ” ಎಂದು ತಯಾರಾದ ಗಿರಿಜಕ್ಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ ಮನೆಯ ಖರ್ಚುಗಳನ್ನು ನೋಡಿಕೊಂಡಳು. ಜಗದೀಶನ ಬೆನ್ನ ಹಿಂದೆ ಬೆಂಬಲವಾಗಿ ನಿಂತಳು. ಕೊನೆಗೂ ಮನೆ ಅಂತಾ ಸಿದ್ದವಾಯ್ತು. ಗ್ರಹಪ್ರವೇಶಕ್ಕೆ ನಾವೆಲ್ಲಾ ಹೋದ ದಿನ ಗಿರಿಜಕ್ಕಳ ಸಂಭ್ರಮಕ್ಕೆ ಕೊನೆ ಮೊದಲಿಲ್ಲವಾಗಿತ್ತು. ಇದ್ದೊಬ್ಬ ಮಗನನ್ನು ಬೆಳೆಸಿ ಪೋಷಿಸಿ ಓದಿಸಿ ದೊಡ್ಡವನನ್ನಾಗಿಸುವಲ್ಲಿ ಜಗದೀಶನಿಗಿಂತಲೂ ಗಿರಿಜಕ್ಕನ ಪಾಲೇ ದೊಡ್ಡದಾಗಿತ್ತು. ಬೆಳಿಗ್ಗೆ ಹೋದರೆ ರಾತ್ರಿಗೆ ಮನೆಗೆ ಮರಳುತ್ತಿದ್ದ ಜಂಗಮನಂತಾ ಗಂಡನ ಜೊತೆಗೆ ಇಷ್ಟು ವರ್ಷಗಳ ಕಾಲ ಏಗುವುದು ಸುಲಭಸಾಧ್ಯದ ಮಾತಾಗಿರಲಿಲ್ಲ. ಅವತ್ತೊಂದು ದಿನ ಜಗದೀಶನ ಹೊಸ ಮನೆಯಲ್ಲಿ ಊಟ ಮಾಡುತ್ತಾ ” ಜಗ್ಗಿ ನಿನಗಿಂತಲೂ ಮೊದಲು ನಿನ್ನ ಹೆಂಡತಿಗೆ ಪ್ರಶಸ್ತಿ ಕೊಟ್ಟು ಸನ್ಮಾನಿಸಬೇಕು ಕಣೋ, ಯಾಕೆಂದರೆ ನಿನ್ನಂತಾ ಅಲೆಮಾರಿ ಗಂಡನ ಜೊತೆ ಸಹನೆಯಿಂದ ಬದುಕು ನಡೆಸಿದ್ದೇ ಒಂದು ಸಾಧನೆ ಅಲ್ಲವೇನೋ” ಎಂದು ಹೇಳಿದ್ದೆ. ಇಬ್ಬರೂ ನಕ್ಕಿದ್ದರು. ಜಗದೀಶನಿಗೇನೋ ನಾಟಕ ಅಕಾಡೆಮಿ ಪ್ರಶಸ್ತಿ ಕೊಡಿಸಿದ್ದೆ. ಆದರೆ ಆತನ ಸಾಧನೆಯ ಹಿಂದಿದ್ದ ಆ ಶಕ್ತಿ ದೇವತೆಯನ್ನು ಮರೆತೇ ಬಿಟ್ಟಿದ್ದೆ.

ಜಗದೀಶನ ಅಕಾಲಿಕ ಅಗಲಿಕೆಯಿಂದ ಆತನ ಮನೆ ಬೀಕೋ ಎನ್ನುತ್ತಿತ್ತು. ಅವತ್ತು ಹೊರಗೆ ಆತನ ಶವದ ಸುತ್ತ ಜನರು ಸುತ್ತಿ ನಮಸ್ಕರಿಸಿ ಅಂತಿಮ ವಿದಾಯ ಹೇಳುತ್ತಿದ್ದರು. ಆತನ ಪಾರ್ಥೀವ ಶರೀರದ ಪಕ್ಕದ ಖುರ್ಚಿಯಲ್ಲಿ ಕೂತಿದ್ದ ಗಿರಿಜಕ್ಕ ದಿವ್ಯ ಮೌನಕ್ಕೆ ಜಾರಿದ್ದರೂ ಮುಖದಲ್ಲಿ ನೋವು ನೂರ್ಮಡಿಸಿತ್ತು. ಜಗದೀಶ ದಂಪತಿಗಳು ಕಟ್ಟಿಸಿದ ಮನೆಯೊಳಗೆ ಹೋದರೆ ಮನೆಯ ತುಂಬಾ ಜಗದೀಶನಿಗೆ ದಕ್ಕಿದ ನೂರಾರು ಮೊಮೆಂಟೋ, ಸ್ಮರಣ ಫಲಕಗಳು, ಹಾರ ಪೇಟಗಳು. ನಿಜಕ್ಕೂ ದುಃಖ ಉಕ್ಕಿ ಬಂತು. ಜಗದೀಶ ತನ್ನ ಮನೆಯ ತುಂಬ ಸ್ಮರಣಿಕೆಗಳ ರೂಪದಲ್ಲಿ ತನ್ನ ನೆನಪುಗಳನ್ನು ಬಿಟ್ಟು ಹೋಗಿದ್ದು ಗಿರಿಜಕ್ಕ ಅವುಗಳ ಜೊತೆ ಹೇಗೆ ಬದುಕಬಹುದು ಎಂದು ಅಂದೇ ಆತಂಕಗೊಂಡಿದ್ದೆ.

ಪ್ರತಿ ಕ್ಷಣ ನೊಂದು, ಕಾಡುವ ನೆನಪುಗಳ ಕೊಂದುಕೊಳ್ಳಲಾಗದೇ ಬೆಂದ ಆ ಹೆಣ್ಣು ಜೀವಕ್ಕೆ ಬದುಕೇ ಬೇಡವಾಯ್ತು. ಸಾವನ್ನು ಆಹ್ವಾನಿಸಿಕೊಳ್ಳಲು ನಿರ್ಧರಿಸಿಯಾಗಿತ್ರು.  ಮಾನಸಿಕ ಕ್ಲೇಶ ಅತಿಯಾಗಿ ಆಹಾರವನ್ನೇ ತ್ಯಜಿಸಿದ್ದರಿಂದ ಗಿರಿಜಕ್ಕಳ ಆರೋಗ್ಯ ಕಳಕಳವಳಕಾರಿಯಾಗಿ ಬಿಗಡಾಯಿಸಿತು. ಅಗಲಿ ಹೋದ ಜಗದೀಶನಲ್ಲಿ ಹೋಗಿ ಸೇರಲು ಮನಸ್ಸು ಕಾತರಿಸಿರಬೇಕು. ಎಂಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಲಾಯ್ತು. ಜಗದೀಶ ಸತ್ತು ಸರಿಯಾಗಿ ಒಂದು ತಿಂಗಳಾಗಿತ್ತಷ್ಟೇ. ಕೊನೆಗೂ ಗಿರಿಜಕ್ಕಳ ಹೃದಯ ಬಡಿತವೂ ನಿಂತು ಹೋಯಿತು.  ಮಾರ್ಚ್ 21 ರಂದು ರಾತ್ರಿ ಆಕೆಯ ಜೀವವೂ ಜಗದೀಶನನ್ನು ಹುಡುಕಿ ಹೊರಟಿತು. ಗಿರಿಜಕ್ಕ ಇನ್ನೆಲ್ಲಿ. ಶಿವ ಪಾರ್ವತಿಯರಂತಿದ್ದ ಈ ದಂಪತಿಗಳು ಇನ್ನೂ ಕೇವಲ ಆತ್ಮೀಯರ ನೆನಪಲ್ಲಿ.

ದಾಂಪತ್ಯ ಅಂದ್ರೆ ಹೀಗೂ ಇರುತ್ತದಾ? ಬದುಕನ್ನು ಹಂಚಿಕೊಂಡವರು ಬೇಕಾದಷ್ಟು ಜೋಡಿಗಳಿವೆ. ಆದರೆ ಸಾವನ್ನೂ ಹಂಚಿಕೊಳ್ಳುವ ದಂಪತಿಗಳು ಅಪರೂಪದಲ್ಲೇ ಅಪರೂಪ. ಇದ್ದರೂ ಸತ್ತರೂ ಜೊತೆಯಲ್ಲೇ ಎನ್ನುವುದು ಇದಕ್ಕೇನಾ? ಇದೆಲ್ಲಾ ವಿಧಿಯ ವಿಲಾಸ ಎನ್ನಬೇಕೆಂದರೆ ವಿಧಿ ಎಂಬುದು ಇದೆಯೋ ಇಲ್ಲವೋ ಗೊತ್ತಿಲ್ಲ. ಆ ದೇವರು ಆಡುವ ಲೀಲೆ ಎಂದರೆ, ದೇವರ ಅಸ್ತಿತ್ವಕ್ಕೇ ಪುರಾವೆಗಳಿಲ್ಲ. ಈ ಜೋಡಿ ಸಾವುಗಳಿಗೆ ಯಾರನ್ನು ಹೊಣೆಗಾರರನ್ನಾಗಿಸುವುದು, ಗೊತ್ತಿಲ್ಲ.  ಕೊನೆಗೂ ಜಗದೀಶ್ ಹಾಗೂ ಗಿರಿಜೆ ಇಬ್ಬರೂ ಸಾವಲ್ಲೂ ಒಂದಾದರು. ಈ ಸಾವು ನ್ಯಾಯವೇ? ಪ್ರಶ್ನೆಗೆ ಉತ್ತರವಿಲ್ಲ. ಜಗದೀಶನ ಜೊತೆಗೆ ಗಿರಿಜಕ್ಕನ ಅಗಲಿಕೆಯ ನೋವು ಮತ್ತು ನೆನಪುಗಳು ಬಹುದಿನಗಳ ಕಾಲ ಕಾಡದೇ ಬಿಡುವುದಿಲ್ಲ.

“ನನ್ನ ತನುವಿನೊಳಗನುದಿನ ಇದ್ದು
ಎನ್ನ ಮನಕೊಂದು ಮಾತು
ಹೇಳದೇ ಹೋದೆಯಾ ಹಂಸಾ.. ಹಂಸಾ”

ಈ ಹಾಡು ಮನದಲ್ಲಿ ಮಾರ್ಧನಿಸುತ್ತಿದೆ.

– ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ

Leave a Reply