ಶಮಿ ಬೆಂಬಲಿಸಿದ ಸಚಿನ್ ತೆಂಡೂಲ್ಕರ್
ಭಾನುವಾರ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ಕ್ರಿಕಿಟ್ ತಂಡ ಪಾಕ್ ವಿರುದ್ಧ ಸೋಲುಂಡಿತು. ಅನಂತರ ಸಾಮಾಜಿಕ ಜಾಲತಾಣಗಳಲ್ಲಿ ಬೌಲರ್ ಮೊಹಮದ್ ಶಮಿ ವಿರುದ್ಧ ಅವಹೇಳನಕಾರಿ ಹಾಗೂ ದ್ವೇಷಮಯ ಕಾಮೆಂಟ್ಗಳನ್ನು ಮಾಡಲಾಗುತ್ತಿದೆ. ಸೀಮರ್ ವೇಗಿ ಶಮಿ ಅವರನ್ನು ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಹಾಗೂ ಯುಜ್ವೇಂದ್ರ ಚಾಹಲ್ ಬೆಂಬಲಿಸಿದ್ದಾರೆ.
‘ನಾನು ಶಮಿ ಹಾಗೂ ಟೀಮ್ ಇಂಡಿಯಾದ ಹಿಂದೆ ನಿಂತಿದ್ದೇನೆ’ ಎಂದು ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ. ಶಮಿ ಅವರನ್ನು ಬೆಂಬಲಿಸುವಂತೆ ಅಭಿಮಾನಿಗಳನ್ನು ವಿವಿಎಸ್ ಲಕ್ಷ್ಮಣ್ ಒತ್ತಾಯಿಸಿದ್ದು, “ಕೇವಲ ಒಂದು ಪ್ರದರ್ಶನದಿಂದ ವ್ಯಾಖ್ಯಾನಿಸಲು ಸಾಧ್ಯವಿಲ್ಲ” ಎಂದಿದ್ದಾರೆ. “ಶಮಿಯವರನ್ನು ಟ್ರೋಲ್ ಮಾಡುವವರು ಕ್ರಿಕೆಟ್ ನೋಡುವುದನ್ನು ನಿಲ್ಲಿಸಬೇಕು” ಎಂದು ಕ್ರಿಕೆಟ್ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, “ನಾನು ಕೂಡ ಭಾರತ-ಪಾಕ್ ನಡುವಿನ ಪಂದ್ಯದಲ್ಲಿ ಭಾಗವಹಿಸಿದ್ದೆ. ಅಲ್ಲಿ ನಾವು ಸೋತಾಗ ನನ್ನನ್ನು ಪಾಕ್ ಗೆ ಹೋಗಬೇಕು ಎಂದು ಯಾರೂ ಎಂದಿಗೂ ಹೇಳಲಿಲ್ಲ!” ಎಂದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ಗಳನ್ನು ‘ಆನ್ಲೈನ್ ಗುಂಪುದಾಳಿ’ ಎಂದು ಕರೆದಿರುವ ವೀರೇಂದ್ರ ಸೆಹ್ವಾಗ್, “ಮುಹಮ್ಮದ್ ಶಮಿ ಮೇಲಿನ ಆನ್ಲೈನ್ ದಾಳಿ ಆಘಾತಕಾರಿ. ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಅವರು ಚಾಂಪಿಯನ್ ಆಗಿದ್ದಾರೆ ಹಾಗೂ ಆನ್ಲೈನ್ ಗುಂಪಿಗಿಂತ ಹೆಚ್ಚಾಗಿ ಭಾರತದ ಕ್ಯಾಪ್ ಧರಿಸುವ ಯಾರದ್ದೇ ಹೃದಯದಲ್ಲಾದರೂ ಭಾರತ ತುಂಬಿರುತ್ತದೆ. ನಿಮ್ಮೊಂದಿಗಿದ್ದೇವೆ ಶಮಿ. ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಎಂದು ಬೆನ್ನು ತಟ್ಟಿದ್ದಾರೆ. ಜೊತೆಗೆ, ರಾಹುಲ್ ಗಾಂಧಿ ಸೇರಿದಂತೆ ಕೆಲವು ರಾಜಕೀಯ ನಾಯಕರು ಕೂಡ ಶಮಿ ಬೆಂಬಲಿಸಿದ್ದಾರೆ.




