ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹಾರಕ್ಕೆ ತಾತ್ಕಾಲಿಕ ಪರಿಹಾರ: ಪಟ್ಟು ಬಿಡದ ಹೋರಾಟಗಾರರು

2 years ago

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಖಾಯಂಮಾತಿ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ರಾಜ್ಯ ಸರ್ಕಾರ ತುಸು ಸಮಾಧಾನಕರ ನಿರ್ಧಾರ ಕೈಗೊಂಡಿದೆ.

ಇಂದು ವಿಕಾಸಸೌಧದಲ್ಲಿ ಅತಿಥಿ ಉಪನ್ಯಾಸಕರೊಂದಿಗೆ ಸಭೆ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕಾನೂನಿನ ತೊಡಕಿರುವ ಕಾರಣ ಇವರ ಸೇವೆ ಖಾಯಂಗೊಳಿಸಲು ಸಾಧ್ಯವಿಲ್ಲ ಎಂದರು.

ಅಲ್ಲದೇ, ಅತಿಥಿ ಉಪನ್ಯಾಸಕರ ಗೌರವಧನವನ್ನು ಐದು ಸಾವಿರ ರೂ. ಹೆಚ್ಚಳ ಮಾಡಲಾಗುವುದು. ಇವರಿಗೆ 60 ವರ್ಷ ತುಂಬಿದವರಿಗೆ ಇಡುಗಂಟು ನೀಡಲು ಹಾಗೂ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು.

ಅತಿಥಿ ಉಪನ್ಯಾಸಕರ ನಡುವೆ ಬಣ ತಿಕ್ಕಾಟ ನಡೆಯಿತು

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಗೌರವಧನವನ್ನು ಗರಿಷ್ಠ 32 ಸಾವಿರ ರೂ.ನಿಂದ ಗರಿಷ್ಠ 5 ಸಾವಿರ ರೂ. ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಮ್ಮತಿ ಸೂಚಿಸಿದ್ದಾರೆ. ಇದಕ್ಕೆ 55 ಕೋಟಿ ರೂ. ವರ್ಷಕ್ಕೆ ಹೊರೆಯಾಗಲಿದೆ ಎಂದು ಮಾಹಿತಿ ನೀಡಿದರು.

ವೇತನ ಹೆಚ್ಚಳದ ಪ್ರಮಾಣ

  1. 32000+5000 -15 ಗಂಟೆ ವರ್ಕ್ ಲೋಡ್ + 5 ವರ್ಷ ಮೇಲ್ಪಟ್ಟ ಅನುಭವ + ಎಲಿಜಿಬಿಲಿಟಿ
  2. 30000+5000 – 15 ಗಂಟೆ ವರ್ಕ್ ಲೋಡ್ + 5 ವರ್ಷಕ್ಕಿಂತ ಕಡಿಮೆ ಅನುಭವ + ಎಲಿಜಿಬಿಲಿಟಿ
  3. 28000+5000 – 15 ಗಂಟೆ ವರ್ಕ್ ಲೋಡ್ + 5 ವರ್ಷ ಮೇಲ್ಪಟ್ಟ ಅನುಭವ + ನಾನ್ ಎಲಿಜಿಬಿಲಿಟಿ
  4. 26000+5000 – 15 ಗಂಟೆ ವರ್ಕ್ ಲೋಡ್ + 5 ವರ್ಷಕ್ಕಿಂತ ಕಡಿಮೆ ಅನುಭವ + ನಾನ್ ಎಲಿಜಿಬಿಲಿಟಿ
  5. 60 ವರ್ಷ ನಂತರ 5,00000 ಇಡುಗಂಟು
  6. Full work load ಗೆ ತಿಂಗಳಿಗೆ ಒಂದು ರಜೆ
  7. ಆರೋಗ್ಯ ವಿಮೆ ಅತಿಥಿ ಉಪನ್ಯಾಸಕರಿಂದ 400+400 ಸರ್ಕಾರದಿಂದ ರೂ.), ವರ್ಷಕ್ಕೆ 5.00.000 ವರೆಗೆ ಚಿಕಿತ್ಸಾ ವೆಚ್ಚದ ಆರೋಗ್ಯ ವಿಮೆ
  8. ನೇಮಕಾತಿಯಲ್ಲಿ ಶೇ5% ಕೃಪಾಂಕ

ವರ್ಷಕ್ಕೆ 50 ಸಾವಿರ ರೂ.ನಂತೆ 10 ವರ್ಷಕ್ಕೆ ಗರಿಷ್ಠ 5 ಲಕ್ಷ ರೂ. ಕೊಡೋಕೆ ತೀರ್ಮಾನ ಮಾಡಿದ್ದೇವೆ. 60 ವರ್ಷ ಪೂರೈಸಿದವರಿಗೆ ಮಾತ್ರ ನಾವು ಇಡುಗಂಟು ಕೊಡೋದು, ಮಧ್ಯದಲ್ಲಿ ಕೆಲಸ ಬಿಟ್ಟವರಿಗೆ ಯೋಜನೆಯ ಲಾಭ ಸಿಗುವುದಿಲ್ಲ. ಆರೋಗ್ಯ ವಿಮೆ ಮಾಡಿದ್ದೇವೆ. ಸೇವಾ ಭದ್ರತೆ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದರು.

ವಾರಕ್ಕೆ 15 ಗಂಟೆ ಕೆಲಸ ಮಾಡುವವರಿಗೆ ತಿಂಗಳಿಗೆ ಒಂದು ರಜೆ ಕೊಡಲು ತೀರ್ಮಾನ ಮಾಡಲಾಗಿದೆ. 2,800 ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಉಪನ್ಯಾಸಕರಿಗೂ ಇದು ಅನ್ವಯಿಸುತ್ತದೆ. ಅತಿಥಿ ಉಪನ್ಯಾಸಕರಿಗೆ ಗೌರವ ಕೊಡುತ್ತಿಲ್ಲ ಎಂಬುದನ್ನು ಗಂಭೀರವಾಗಿ ತೆಗೆದುಕೊಂಡು ಪ್ರಾಂಶುಪಾಲರಿಗೆ ಹೇಳಿದ್ದೇವೆ. ಅವರಿಗೆ ಗೌರವ ಕೊಡಬೇಕು, ನ್ಯಾಯಯುತವಾಗಿ ನೋಡಿಕೊಳ್ಳಬೇಕು ಎಂಬ ನಿರ್ದೇಶನ ನೀಡಲಾಗಿದೆ ಎಂದರು.

ಪ್ರತಿ ವರ್ಷ ಕೌನ್ಸಿಲಿಂಗ್ ಮೂಲಕ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಲಾಗುವುದು. ಸೇವೆಯ ಮತ್ತು ಅಂಕಗಳ ಆಧಾರದಲ್ಲಿ 16 ವರ್ಷ ಸೇವೆ ಮಾಡಿದವರಿಗೆ ಡಾಕ್ಯುಮೆಂಟ್ ಡೇಟಾ ಮಾಡಿಕೊಂಡು ದಾಖಲಾತಿ ಮಾಡಿಕೊಳ್ಳಲು ಸರಳ ಪ್ರಕ್ರಿಯೆ ಮಾಡುತ್ತೇವೆ. ಹೊಸ ನೇಮಕಾತಿ ಸಂದರ್ಭದಲ್ಲಿ ಕೃಪಾಂಕದ ಆಧಾರದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಮಾಡಿರುವವರಿಗೆ ವರ್ಷಕ್ಕೆ ಒಂದು ಪರ್ಸೆಂಟ್ನಂತೆ ಕೃಪಾಂಕ ಕೊಡುತ್ತೇವೆ. ಒಟ್ಟು 15 ಅಂಕಗಳು ಸಿಗುತ್ತವೆ. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಮಾತ್ರ ಕೃಪಾಂಕ ಸಿಗಲಿದೆ ಎಂದು ಅವರು ಸರ್ಕಾರದ ನಿರ್ಧಾರಗಳ ಮಾಹಿತಿ ನೀಡಿದರು.

ಇನ್ನು ವಿಮೆಗೆ 5 ಕೋಟಿ ರೂ. ಹೊರೆಯಾಗಲಿದೆ. ಇಡುಗಂಟಿಗೆ 72 ಕೋಟಿ ಹೊರೆ ಆಗುವುದು. ಅವರ ಸೇವೆ ಪರಿಗಣಿಸಿ ನಮ್ಮ ಎಲ್ಲಾ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ನಾವು ಕ್ರಮ ವಹಿಸಿದ್ದೇವೆ. ಒಂದು ತಿಂಗಳು ಸಮಯ ಹಾಳಾಗಿದೆ ಜನವರಿ ಒಂದರಿಂದ ಕೆಲಸಕ್ಕೆ ಹಾಜರಾಗಲು ಹೇಳಿದ್ದೇವೆ. ಅವರು ಸಹಕರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇವೆ ಎಂದು ಹೇಳಿದರು.

ಆದರೆ, ಸರ್ಕಾರದ ಈ ಪ್ರಸ್ತಾವನೆಗಳನ್ನು ತಿರಸ್ಕರಿಸಿರುವ ಕರ್ನಾಟಕ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತ ಗೌಡ ಕಲ್ಮನಿ, ಜನವರಿ 1ರಿಂದ ತಮೂಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ಮುಂದುವರೆಸುವುದಾಗಿ ಘೋಷಿಸಿದ್ದು, ನರಗುಂದದ ರೈತ ಹೋರಾಟದ ಮಾದರಿಯಲ್ಲಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.

Leave a Reply