ಅವ್ಯವಹಾರದಿಂದ ತಾತ್ಕಾಲಿಕವಾಗಿ ಕೊಬ್ಬರಿ ಖರೀದಿ ಸ್ಥಗಿತ: ಶಿವಾನಂದ ಪಾಟೀಲ್

2 years ago

ಬೆಂಗಳೂರು: ಕೊಬ್ಬರಿ ಖರೀದಿಗೆ ರೈತರ ನೋಂದಣಿಯಲ್ಲಿ ಅವ್ಯವಹಾರಗಳಾಗಿರುವುದರಿಂದ ತಾತ್ಕಾಲಿಕವಾಗಿ ಒಂದು ವಾರ ಕಾಲ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.

ವಿಧಾನಸಭೆಯಲ್ಲಿ ಜೆಡಿಎಸ್ನ ಎಚ್.ಡಿ.ರೇವಣ್ಣ ಸೇರಿದಂತೆ ಪಕ್ಷಾತೀತವಾಗಿ ಬಹುತೇಕ ಶಾಸಕರು ಪ್ರಸ್ತಾಪಿಸಿದ ಸಾರ್ವಜನಿಕ ಮಹತ್ವದ ವಿಚಾರ ಕುರಿತು ಉತ್ತರ ನೀಡಿದ ಶಿವಾನಂದ ಪಾಟೀಲ್, ರೈತರ ನೋಂದಣಿ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಲೋಪಗಳು ಕಂಡುಬರುತ್ತಿವೆ ಎಂದರು.

ಇಲಾಖೆಯಿಂದ ಖರೀದಿಸಲಾಗಿದ್ದ ಕಂಪ್ಯೂಟರ್ ಬದಲಿಗೆ ಅಧಿಕಾರಿಗಳು ಮತ್ತು ಹೊರಗುತ್ತಿಗೆ ಸಿಬ್ಬಂದಿ ತಾವೇ ಬೇರೆ ಕಂಪ್ಯೂಟರ್ ಖರೀದಿಸಿ ಅದನ್ನು ರೈತರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ನೋಂದಣಿ ಮಾಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇದು ವ್ಯಾಪಕವಾಗಿ ಕಂಡುಬರುತ್ತಿದೆ. ಬೇರೆ ಜಿಲ್ಲೆಯಿಂದ 3500 ರೈತರನ್ನು ಹಾಸನದಲ್ಲಿ ನೋಂದಣಿ ಮಾಡಲಾಗಿದೆ. ಹೀಗಾಗಿ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ 9 ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಿಸಲಾಗುತ್ತಿದೆ. ನೋಂದಣಿ ಪ್ರಕ್ರಿಯೆ ಪರಿಷ್ಕರಣೆಗೊಳಪಡಿಸಲಾಗುತ್ತಿದ್ದು, ಆವರೆಗೆ ತಾತ್ಕಾಲಿಕವಾಗಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗುತ್ತಿದೆ ಎಂದರು.

ಈ ಮೊದಲು ಕೇಂದ್ರ ಸರ್ಕಾರ 7 ತಿಂಗಳ ಅವಧಿವರೆಗೂ ಕೊಬ್ಬರಿ ಖರೀದಿಗೆ ಅವಕಾಶ ನೀಡಿತ್ತು. ಪ್ರಸ್ತುತ 3 ತಿಂಗಳಿನಂತೆ ಎರಡು ಅವಧಿಗೆ ಖರೀದಿಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿ ಖರೀದಿಯಲ್ಲಿ ನಫೆಡ್ 200 ಕೋಟಿ ರೂ. ನಷ್ಟ ಅನುಭವಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಉಂಡೆ ಕೊಬ್ಬರಿಯನ್ನು ಶೇ.25ರಷ್ಟು ಖರೀದಿಸಲು ಅವಕಾಶವಿದೆ. ಆ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಹಾಗೆಯೇ ಹೋಳಾಗಿರುವ ವಿಲ್ಲಿಂಗ್ ಕೊಬ್ಬರಿಯನ್ನು ಖರೀದಿಸಲು ಅನುಮತಿ ನೀಡುವಂತೆಯೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Leave a Reply