ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಆಫ್ಘನ್ ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯ ಪ್ರವೇಶಕ್ಕೆ ನಿಷೇಧ ಹೇರಿದೆ. ಅಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯದೊಳಗೆ ಮಹಿಳಾ ಉದ್ಯೋಗಿಗಳು ಪ್ರವೇಶಿಸದಂತೆ ತಾಲಿಬಾನ್ ನಿರ್ಬಂಧ ವಿಧಿಸಿದೆ. ಸಚಿವಾಲಯದಲ್ಲಿ ಪುರುಷ ಉದ್ಯೋಗಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ಕಲ್ಪಿಸಿಕೊಟ್ಟಿದೆ.
ಈ ಕುರಿತು ರಷ್ಯಾ ಮೂಲದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದ್ದು, 4 ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯದೊಳಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ತಾಲಿಬಾನ್ ನಿರ್ಧಾರದ ವಿರುದ್ಧ ಮಹಿಳೆಯರು ಸಚಿವಾಲಯದ ಸನಿಹದಲ್ಲೆ ಪ್ರತಿಭಟನೆ ನಡೆಸಿದ್ದಾರೆ ಎಂದು ಕೂಡ ಸುದ್ದಿ ಸಂಸ್ಥೆ ವರದಿ ಮಾಡಿದೆ.
ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಇಸ್ಲಾಂ ತತ್ವಗಳ ಆಧಾರದಡಿ ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ನೀಡಲು ಬದ್ಧರಾಗಿರುವುದಾಗಿ ಅಧಿಕಾರ ವಶಪಡಿಸಿಕೊಂಡ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಮಹಿಳೆಯರಿಗೆ ಆರೋಗ್ಯ ಮತ್ತು ಇತರೆ ಕ್ಷೇತ್ರಗಳಲ್ಲಿ ಅವಕಾಶ ನೀಡಲಾಗುವುದು ಮತ್ತು ಅವರ ವಿರುದ್ಧ ಯಾವುದೇ ತಾರತಮ್ಯ ಮಾಡುವುವುದಿಲ್ಲ ಎಂದಿದ್ದರು. ಇದೀಗ ಸಚಿವಾಲಯದಲ್ಲೇ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.




