ಕಾಬುಲ್: ಆಫ್ಘಾನಿಸ್ತಾನದ ಹೆರಾತ್ ನಲ್ಲಿ ತಾಲಿಬಾನಿ ಉಗ್ರರು ಸರ್ಕಾರಿ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಹೆರಾತ್ ಪ್ರಾಂತ್ಯದ ಸರ್ಕಾರಿ ಅಧಿಕಾರಿಗಳು, ರಾಜ್ಯಪಾಲರು, ಪೊಲೀಸ್ ಮುಖ್ಯಸ್ಥರು, ಮಾಜಿ ಮುಜಾಹಿದ್ದೀನ್ ನಾಯಕ ಮೊಹಮ್ಮದ್ ಇಸ್ಮಾಯಿಲ್ ಖಾನ್, ಆಂತರಿಕ ಭದ್ರತೆಯ ಉಪ ಮಂತ್ರಿ ಮತ್ತು ಜಾಫರ್ ಕಾರ್ಪ್ಸ್ ಕಮಾಂಡರ್ ಗಳು ಉಗ್ರರಿಗೆ ಶರಣಾಗತರಾಗಿದ್ದಾರೆ.
ನಿನ್ನೆ ತಾಲಿಬಾನಿ ಉಗ್ರರು ಆಫ್ಘಾನಿಸ್ತಾನದ ಕಂದಹಾರ್ ಹಾಗೂ ಲಷ್ಕರ್ ಗಹ್ ನಗರಗಳನ್ನು ವಶಪಡಿಸಿಕೊಂಡಿದ್ದರು. ಆಫ್ಘಾನಿಸ್ತಾನದ 34 ಪ್ರಾಂತೀಯ ರಾಜಧಾನಿಗಳ ಪೈಕಿ 11 ರಾಜಧಾನಿಗಳನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ.
ಅಮೆರಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡ ನಂತರ ತಾಲಿಬಾನಿಗಳು ಅಟ್ಟಹಾಸ ಶುರುಮಾಡಿದ್ದಾರೆ. ಹದಿನೈದೇ ದಿನಗಳ ಅಂತರದಲ್ಲಿ ಅಮೆರಿಕ ಸೇನೆಯಿಂದ ಹಿಡಿತ ಕಳೆದುಕೊಂಡಿದ್ದ ಪ್ರದೇಶಗಳಲ್ಲಿ ಶೇ.50ಕ್ಕೂ ಹೆಚ್ಚು ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ.



