ದೇವಸ್ಥಾನಗಳ ಭೂಮಿ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ: ಶಶಿಕಲಾ ಜೊಲ್ಲೆ

4 years ago

ಬೆಂಗಳೂರು: ರಾಜ್ಯದ ಮುಜರಾಯಿ ಇಲಾಖೆಯ ಅಡಿಯಲ್ಲಿರುವ ದೇವಸ್ಥಾನಗಳ ಭೂಮಿ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ  ಮುಜರಾಯಿ ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಎನ್‌.ರವಿಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ನಗರ ತಿಗಳರ ಪೇಟೆಯಲ್ಲಿರುವ ಶ್ರೀ ಧರ್ಮರಾಯ ಸ್ವಾಮಿ ದೇವಾಲಯವು ಪ್ರವರ್ಗ “ಬಿ” ವರ್ಗದ ಧಾರ್ಮಿಕ ಸಂಸ್ಥೆಯಾಗಿರುತ್ತದೆ. ಪ್ರಸ್ತಾವಿತ ದೇವಾಲಯ ಬೆಂಗಳೂರು ನಗರ ನೀಲಸಂದ್ರ ಗ್ರಾಮದ ಸರ್ವೇ ನಂ 79 ರಲ್ಲಿ 15 ಎಕರೆ 12 ಗುಂಟೆ ವಿಸ್ತೀರ್ಣ, ಹೊಂಗಸಂದ್ರ ಗ್ರಾಮದ ಸರ್ವೇ ನಂ. 33 ರಲ್ಲಿ 16 ಎಕರೆ 25 ಗುಂಟೆ ಜಮೀನು ಕಂದಾಯ ದಾಖಲಾತಿಯಂತೆ ದೇವಸ್ಥಾನದ ಹೆಸರಿನಲ್ಲಿದೆ ಎಂದರು.
ಈ ಜಮೀನಿನಲ್ಲಿ ಅತಿಕ್ರಮವಾಗಿ 229 ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡಿವೆ. ಇದಕ್ಕೆ ಸಂಬಂಧಪಟ್ಟಂತೆ 13 ಜನರ ವಿರುದ್ದ ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.  ಅತಿಕ್ರಮಣಕಾರರ ಪರ ಸಲ್ಲಿಸಲಾಗಿದ್ದ ಬೆಂಗಳೂರಿನ 8ನೇ ಹೆಚ್ಚುವರಿ ಸಿಟಿ ಸಿವಿಲ್‌ ಜಡ್ಜ್‌ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣ ವಜಾಗೊಂಡಿದ್ದು, ಅರ್ಜಿದಾರರು ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇಲಾಖೆಯ ವತಿಯಿಂದ ಸೂಕ್ತ ವಾದ ಮಂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನೀಲಸಂದ್ರ ಗ್ರಾಮದಲ್ಲಿನ ಅನಧಿಕೃತ ಅತಿಕ್ರಮಣಗಾರರನ್ನು ತೆರವುಗೊಳಿಸಿ 9 ಎಕರೆ ಜಮೀನಿಗೆ ಕಾಂಪೌಂಡ್‌ ನಿರ್ಮಿಸಲು ಈಗಾಗಲೇ 80 ಲಕ್ಷ ರೂ.ಗಳನ್ನು  ಜಿಲ್ಲಾಧಿಕಾರಿಗಳಿಗೆ ಮಂಜೂರು ಮಾಡಲಾಗಿದೆ. ಆದರೆ, ಈ ಕಾಮಗಾರಿ ಕೈಗೊಳ್ಳಲು ಕೆಲವು ತಾಂತ್ರಿಕ ಅಡಚಣೆಗಳಿದ್ದು, ಕಂದಾಯ ಸಚಿವರ ಗಮನಕ್ಕೆ ಈ ವಿಷಯ ತಂದಿದ್ದು ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದೇವಸ್ಥಾನಗಳ ಆಸ್ತಿಗಳು ದೇವಸ್ಥಾತಾನಗಳ ಹೆಸರಿನಲ್ಲೇ ಇರಬೇಕು. ದೇವಸ್ಥಾನಗಳ ಆಸ್ತಿಗಳನ್ನು ಸರ್ವೇ ಕಾರ್ಯ ಭರದಿಂದ ಸಾಗಿದೆ. ಸರ್ವೇ ವರದಿ ಆಧಾರದ ಮೇಲೆ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Reply