ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸುವ ಅಶಿಸ್ತಿಗೆ ಕಾರಣವಾಗುವ ಅಧಿಕಾರಿ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಅಲೋಕ್ ಮೋಹನ್ ತಿಳಿಸಿದರು.
ರಾಜ್ಯ ಮೀಸಲು ಪಡೆ(ಕೆಎಸ್ಆರ್ ಪಿ)ನಗರದ ಕೋರಮಂಗಲದ ಮೈದಾನದಲ್ಲಿ ಆಯೋಜಿಸಿದ್ದ ಸೇವಾ ಕವಾಯಿತುನಲ್ಲಿ ಪೊಲೀಸ್ ಪಡೆಗಳ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿಯೇ ಕರ್ನಾಟಕ ರಾಜ್ಯ ಪೊಲೀಸ್ ಒಂದು ಉತ್ತಮ ಪೊಲೀಸ್ ಪಡೆಯಾಗಿದ್ದು, ಅದನ್ನು ಅತ್ಯುತ್ತಮಗೊಳಿಸುವುದು ನಮ್ಮೆಲ್ಲರ ಗುರಿಯಾಗಿದೆ ಎಂದರು.
ಪೊಲೀಸ್ ಇಲಾಖೆಯು ಒಗ್ಗಟ್ಟು, ಶಿಸ್ತು, ಸಂಮಯ, ಉತ್ತಮ ತಂಡವಾಗಿ ಕೆಲಸ ಮಾಡುವಲ್ಲಿ ಮೂಲ ಬುನಾದಿಯಾಗಿದೆ. ಹಲವು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಕ್ಲಿಷ್ಟಕರವಾದ ಸಮಸ್ಯೆಗಳನ್ನು ನಿಭಾಯಿಸಿದ ಹೆಗ್ಗಳಿಕೆ ನಮ್ಮದಾಗಿದೆ ಎಂದರು.
ಯಾವುದೇ ವಯಕ್ತಿಕ ಅಥವಾ ವೃತ್ತಿಪರ ಕೆಲಸ ನಿರ್ವಹಿಸಲು ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗಿರುವುದು ಅವಶ್ಯಕವಾಗಿರುವುದರಿಂದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ವಹಿಸಬೇಕೆಂದು ಎಂದು ಸಲಹೆ ನೀಡಿದರು.
ಕಾನೂನು ಸುವ್ಯವಸ್ಥೆ ನಿರ್ವಹಣೆ ಮತ್ತು ಅಪರಾಧ ನಿಯಂತ್ರಣವು ನಮ್ಮ ಇಲಾಖೆಯ ಮುಖ್ಯ ಕರ್ತವ್ಯ. ಹಾಗಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ನಿಯಂತ್ರಣದ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು, ಮಾದಕ ದ್ರವ್ಯ, ರೌಡಿಸಂ ಸೇರಿ ಇತರೆ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಜನರ ಸೇವೆಗಾಗಿ ಇರುವ ಪೊಲೀಸ್ ಇಲಾಖೆಯ ಮುಖ್ಯ ಗುರಿ ಜನ ಸ್ನೇಹಿಯಾಗುವುದು. ಇದನ್ನು ನಾವು ಮರೆಯಬಾರದು, ನಾವೆಲ್ಲರೂ ಸಮಯ ಪ್ರಜ್ಞೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಡಿಜಿಪಿಗಳಾದ ರವೀಂದ್ರನಾಥ, ಕಮಲ್ ಪಂತ್, ಎಂಎ ಸಲೀಂ, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಕೆಎಸ್ ಆರ್ ಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಿಮಾಂತ್ ಕುಮಾರ್ ಸಿಂಗ್, ಐಜಿಪಿ ಸಂದೀಪ್ ಪಾಟೀಲ್ ಅವರಿದ್ದರು.




