ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಜಾರಿಗೆ ತೀರ್ಮಾನಿಸಿರುವ ರಾಜ್ಯ ಸರ್ಕಾರ ಈ ನೀತಿ ಅನುಷ್ಠಾನ ಮಾಡುವ ಸಂಬಂಧ ರಾಜ್ಯ ಪಠ್ಯ ಕ್ರಮ ಚೌಕಟ್ಟು ರಚನೆಗಾಗಿ ತಜ್ಞರ ಸಮಿತಿ ರಚಿಸಲು ನಿರ್ಧರಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ವಿಷಯ ತಿಳಿಸಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಬರುವ ಶೈಕ್ಷಣಿಕ ವರ್ಷದಿಂದ ರಾಜ್ಯಾದ್ಯಂತ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದರು.
ಇದಕ್ಕಾಗಿ ರಾಜ್ಯ ಪಠ್ಯಕ್ರಮ ಸಿದ್ಧ ಪಡಿಸಲು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 7-8 ಮಂದಿಯ ತಜ್ಞರ ಸಮಿತಿಯನ್ನು ರಚನೆ ಮಾಡುತ್ತೇವೆ ಎಂದರು.
ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನೊಳಗೊಂಡ ಸಮನ್ವಯ ಸಮಿತಿಯನ್ನು ರಚಿಸಲಾಗುವುದು. 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಯಾವ ರೀತಿ ಪಠ್ಯಕ್ರಮ ಇರಬೇಕು ಎಂಬುದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ 7ರಿಂದ 8 ವರ್ಷದ ಮಕ್ಕಳಿಗೆ ಪಠ್ಯ ಕ್ರಮವನ್ನು ಶಿಕ್ಷಣ ಇಲಾಖೆ ತೀರ್ಮಾನಿಸಲಿದೆ ಎಂದರು.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಂತೆ ನಮಗೆ ಯಾವ ರೀತಿ ಪಠ್ಯಪುಸ್ತಕಗಳು ಇರಬೇಕು ಎಂಬುದರ ಕುರಿತು ಕೇಂದ್ರ ಶಿಕ್ಷಣ ಇಲಾಖೆ ಅಭಿಪ್ರಾಯ ಕೇಳಿತ್ತು. ಈಗಾಗಲೇ ನಾವು ಇಲಾಖೆ ವೆಬ್‍ಸೈಟ್ ಮೂಲಕ ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ ಎಂದರು
ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2030ರೊಳಗೆ ಕಡ್ಡಾಯವಾಗಿ ಅನುಷ್ಠಾನವಾಗಬೇಕೆಂಬ ನಿಯಮವಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಅಧಿಕಾರಿ ವರ್ಗಕ್ಕೂ ನಾವು ತರಬೇತಿ ನೀಡುತ್ತಿದ್ದೇವೆ. ಈಗಾಗಲೇ ಕಲ್ಯಾಣ ಕರ್ನಾಟಕ ಸೇರಿದಂತೆ ವಿವಿಧ ಕಡೆ ಬೋಧನಾ ತರಬೇತಿಗಳು ಆರಂಭವಾಗಿವೆ. ಯಾವುದೇ ರೀತಿಯ ಸಮಸ್ಯೆಗಳ ಉದ್ಭವವಾಗದಂತೆ ಇಲಾಖೆ ಕೆಲ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ ಎಂದರು.
ಈ ಸಮಿತಿಯಗೆ ಡಿ.25ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ದೇಶನ ನೀಡಲಾಗುವುದು. ಈಗಿನ ಶಿಕ್ಷಣ ನೀತಿ ಪ್ರಕಾರ ಮೊದಲ ಮೂರು ವರ್ಷದೊಳಗೆ ಮಕ್ಕಳಿಗೆ ಯಾವುದೇ ಪಠ್ಯ ಪುಸ್ತಕಗಳನ್ನು ನೀಡದೆ ಕೇವಲ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡಬೇಕೆಂಬ ನಿರ್ದೇಶನವಿದೆ ಎಂದರು.
ಮಕ್ಕಳಿಗೆ ಬಲವಂತಾಗಿ ಇಲ್ಲವೇ ಒತ್ತಾಯ ಪೂರ್ವಕವಾಗಿ ಪಠ್ಯ ಪುಸ್ತಕದಿಂದಲೇ ಬೋಧನೆ ಮಾಡಿದರೆ ಪರಿಣಾಮಕಾರಿಯಾಗಿ ಕಲಿಕೆ ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಾಥಾಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಮಾತೃಭಾಷೆ ಮೂಲಕವೇ ನೀಡಲಾಗುವುದು ಎಂದರು.




