ಬೆಂಗಳೂರು: ಅತ್ಯಂತ ವಿಶ್ವಾಸಾರ್ಹ ಹಾಗೂ ಶಿಸ್ತಿನ ಸೇವೆಗೆ ಹೆಸರಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರ ಪರಿಣಾಮವಾಗಿ ನಿಗಮದ ನೌಕರರ ಭವಿಷ್ಯ ನಿಧಿ ಕೂಡಾ ಪಾವತಿಸಿಲ್ಲ.
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
- ಕಳ್ಳಾಟ ಇಲ್ಲದಿದ್ದರೆ ಮುಚ್ಚಿಡುವುದಕ್ಕೇನಿದೆ?
- ಮೊದಲ ಸಿನಿಮಾ ಚಿತ್ರ ಬಿಡುಗಡೆ ನೆನಪು ಮಾಡಿಕೊಂಡ ಅನಿರುದ್ಧ
ಕಳೆದ ಕೆಲವು ತಿಂಗಳಿಂದ ನೌಕರರ ಭವಿಷ್ಯ ನಿಧಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್ಥಿಕ ನೆರವು ನೀಡುವಂತೆ ಕೋರಿ ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಭವಿಷ್ಯ ನಿಧಿ ಕಾಯ್ದೆ ಪ್ರಕಾರ ಪ್ರತಿ ತಿಂಗಳು ನೌಕರರ ವೇತನದಲ್ಲಿ ಭವಿಷ್ಯ ನಿಧಿ ಮೊತ್ತ ಕಡಿತಗೊಳಿಸಬೇಕು ಹಾಗೂ ಉದ್ಯೋಗದಾತರು ಅದಕ್ಕೆ ಸಮಾನವಾದ ಮೊತ್ತವನ್ನು ಸೇರಿಸಿ ನೌಕರರ ಭವಿಷ್ಯ ನಿಧಿ ಖಾತೆಗೆ ಹಣ ಪಾವತಿಸಬೇಕು.
ಆದರೆ, ನೌಕರರ ವೇತನದಿಂದ ಕಡಿತಗೊಳಿಸಿದ ಮತ್ತು ತಮ್ಮ ಪಾಲನ್ನು ಭವಿಷ್ಯ ನಿಧಿ ನ್ಯಾಸಕ್ಕೆ ಪಾವತಿಸುವಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ವಿಫಲವಾಗಿವೆ. ಇದರಿಂದಾಗಿ ನಾಲ್ಕೂ ನಿಗಮಗಳು ಭವಿಷ್ಯ ನಿಧಿ ನ್ಯಾಸಕ್ಕೆ ಭವಿಷ್ಯ ನಿಧಿ ಬಾಕಿ ಹಾಗೂ ವಿಳಂಬ ಬಡ್ಡಿ ಸೇರಿದಂತೆ 2024ರ ಅಕ್ಟೋಬರ್ವರೆಗೆ 2,792.61 ಕೋಟಿ ರೂ ಪಾವತಿಸುವುದು ಬಾಕಿ ಉಳಿದಿದೆ. ಈ ಮೊತ್ತ ಪಾವತಿಸಲು ತಮಗೇ ಸಾಧ್ಯವೇ ಇಲ್ಲ ಎಂದು ಹೇಳಿರುವ ನಿಗಮಗಳು, ಅದಕ್ಕಾಗಿ ಸರ್ಕಾರದಿಂದ ಆರ್ಥಿಕ ನೆರವು ನೀಡುವಂತೆ ಪತ್ರದ ಮೂಲಕ ಕೋರಿಕೆ ಸಲ್ಲಿಸಿವೆ.
ರಾಜ್ಯ ರಸ್ತೆ ಸಾರಿಗೆ ನಿಗಮಗಳ ಲೆಕ್ಕದಂತೆ ಒಟ್ಟು 2,269.09 ಕೋಟಿ ರೂ. ಭವಿಷ್ಯ ನಿಧಿ ಬಾಕಿ ಉಳಿಸಿಕೊಂಡಿವೆ. ಅಲ್ಲದೆ, ಹೀಗೆ ನಿಗದಿತ ಸಮಯದಲ್ಲಿ ಭವಿಷ್ಯ ನಿಧಿ ಪಾವತಿಸದೆ ವಿಳಂಬ ಮಾಡಿದ್ದಕ್ಕಾಗಿ 523.52 ಕೋಟಿ ರು. ಹೆಚ್ಚುವರಿ ಬಡ್ಡಿ ರೂಪದಲ್ಲಿ ಪಾವತಿಸಬೇಕಾಗಿದೆ.
ಅದರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು 2021ರ ಸೆಪ್ಟೆಂಬರ್ನಿಂದ 2024ರ ಅಕ್ಟೋಬರ್ ವರೆಗೆ ಸತತ 3 ವರ್ಷಗಳ ಕಾಲ ಭವಿಷ್ಯ ನಿಧಿ ಮೊತ್ತ ಪಾವತಿಸಿಲ್ಲ. ಹೀಗಾಗಿ 821.48 ಕೋಟಿ ರು. ಭವಿಷ್ಯ ನಿಧಿ ಬಾಕಿಗೆ 232.9 ಕೋಟಿ ರು. ವಿಳಂಬ ಬಡ್ಡಿ ಪಾವತಿಸಬೇಕಾಗಿದೆ.
ಭವಿಷ್ಯ ನಿಧಿ ಪಾವತಿಗೆ ಸಂಬಂಧಿಸಿದಂತೆ ಆರ್ಥಿಕ ನೆರವು ನೀಡುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಸರ್ಕಾರಕ್ಕೆ ಪತ್ರದ ಮೂಲಕ ಕೋರಿಕೆ ಸಲ್ಲಿಸಿದ್ದಾರೆ. ಈ ಪತ್ರದಲ್ಲಿ ಕೊರೋನಾ ಅವಧಿಯಲ್ಲಿ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿವೆ. ಅದರ ಜತೆಗೆ ತೈಲ ಬೆಲೆ, ವೇತನ ಹೆಚ್ಚಳದಿಂದಾಗಿ ನಿಗಮಗಳ ವೆಚ್ಚ ಹೆಚ್ಚಳವಾಗುವಂತಾಗಿದೆ. ಅದರ ಪರಿಣಾಮ ನೌಕರರ ಮತ್ತು ನಿಗಮಗಳ ವಂತಿಗೆಯ ಭವಿಷ್ಯ ನಿಧಿ ಮೊತ್ತವನ್ನು ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆರ್ಥಿಕ ನೆರವು ನೀಡುವಂತೆ ಪತ್ರದಲ್ಲಿ ಮನವಿ ಸಲ್ಲಿಸಿದ್ದಾರೆ.
ಹಲವು ತಿಂಗಳಿನಿಂದ ಭವಿಷ್ಯ ನಿಧಿ ಮೊತ್ತ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಭವಿಷ್ಯ ನಿಧಿ ಕಚೇರಿಯ ಪ್ರಾದೇಶಿಕ ಆಯುಕ್ತರು ಗಂಭೀರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಾರಿಗೆ ನಿಗಮಗಳಿಗೆ ನೀಡಲಾಗಿರುವ ಭವಿಷ್ಯ ನಿಧಿ ವಿನಾಯಿತಿಯನ್ನು ರದ್ದು ಮಾಡುವ ಎಚ್ಚರಿಕೆ ನೀಡಿದ್ದಾರೆ.




