ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿಜ್ಞಾನ ಕಲಿಕೆಗೆ ಪ್ರಯೋಗಾಲಯ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಆಡುಗೋಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಏರ್ಪಡಿಸಲಾಗಿದ್ದ ಅತ್ಯಾಧುನಿಕ ಖಗೋಳ ವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ವಿಜ್ಞಾನ ಕಲಿಕೆಯ ಆಸಕ್ತಿ ಹೆಚ್ಚಿಸುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿಜ್ಞಾನ ಕಲಿಕೆಗೆ ನೆರವಾಗುವ ಪ್ರಯೋಗಾಲಯ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಆರಂಭಗೊಂಡ ಅತ್ಯಾಧುನಿಕ ಖಗೋಳ ವಿಜ್ಞಾನ ಪ್ರಯೋಗಾಲಯದ ಅತ್ಯಾಧುನಿಕ ಸೌಲಭ್ಯವು ವಿದ್ಯಾರ್ಥಿಗಳು, ಶಿಕ್ಷಕರಿಗೆ ಖಗೋಳಶಾಸ್ತ್ರದ ಅದ್ಭುತಗಳನ್ನು ಪರಿಶೀಲಿಸಲು ವಿಶಿಷ್ಟವಾದ ವೇದಿಕೆಯನ್ನು ಒದಗಿಸಲಿದೆ ಎಂದು ಅಭಿಪ್ರಾಯಪಟ್ಟರು.
ಖಗೋಳಶಾಸ್ತ್ರ ಪ್ರಯೋಗಾಲಯ ವಿದ್ಯಾರ್ಥಿಗಳಿಗೆ ಸಮಗ್ರ ಮತ್ತು ಸಮೃದ್ಧ ಕಲಿಕೆಯ ಅನುಭವವನ್ನು ಒದಗಿಸಲು ನೆರವಾಗಲಿದೆ. ಅವಕಾಶ ವಂಚಿತ ವಿಜ್ಞಾನ ಕಲಿಕೆಯ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ನ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರಯೋಗಾಲಯ ಸಬಲೀಕರಣಗೊಳಿಸಲಿದೆ. ಸರ್ಕಾರಿ ಶಾಲೆಗಳ ಸಹಯೋಗದೊಂದಿಗೆ ಆಕಾಶ-ವೀಕ್ಷಣೆ ಅವಧಿಗಳನ್ನು ಸಹ ಒಳಗೊಂಡಿದೆ. ಶಿಕ್ಷಣವನ್ನು ಮುಂದುವರೆಸುವಲ್ಲಿ ಮತ್ತು ಅರ್ಥಪೂರ್ಣ ಪರಿಣಾಮ ಉಂಟುಮಾಡುವಲ್ಲಿ ಬ್ರಿಲಿಯೊದ ಅಂಗವಾದ ಎಸ್ ಟಿಇಎಂ ಲರ್ನಿಂಗ್ ಮತ್ತು ಬ್ರಿಂಗಿಂಗ್ ಸ್ಮೈಲ್ಸ್ ಫೌಂಡೇಶನ್ ನಡುವೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಪ್ರಯೋಗಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗಿಯಾದ ಅವರು, ದೇಶವು ಸರ್ವಾಂಗೀಣ ಅಭಿವೃದ್ಧಿ ಹೊಂದಲು ವಿಜ್ಞಾನದಲ್ಲಿನ ಪ್ರಗತಿ ಅತಿಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಬ್ರಲ್ಲಿಯೋ ಟೆಕ್ನಾಲಜೀಸ್ ಮುಖ್ಯಸ್ಥ ಅಭಿಷೇಕ್ ರಂಜನ್,ಎಸ್ ಟಿಇಎಂ ಲರ್ನಿಂಗ್ ನ ಸಂಸ್ಥಾಪಕ ಅಶುತೋಷ್ ಪಂಡಿತ್ ಮೊದಲಾದವರು ಹಾಜರಿದ್ದರು.



