ಒಳ ಮೀಸಲಾತಿ ಜಾರಿ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಸಾಧ್ಯತೆ

2 years ago

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಬಹುದಿನದ ಬೇಡಿಕೆಯಾದ ಒಳ ಮೀಸಲಾತಿ ಜಾರಿ ಕುರಿತಂತೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.

 

ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಿರುವ ಸಿಎಂ ಸಿದ್ದರಾಮಯ್ಯ, ಸಂವಿಧಾನದ ಆಶಯ ಮತ್ತು ಕಾನೂನು ನಿಯಮಗಳಿಗೆ ಅನುಸಾರವಾಗಿ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಿದ್ದಾರೆ. 

ಸದ್ಯ ವಿಧಾನಸಭೆಯ ಮೂರೂ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಚುನಾವಣೆ ಮುಗಿದ ನಂತರ ಎಲ್ಲ ಸಮುದಾಯದ ಮುಖಂಡರ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯದ ವಿವಿಧ ಕಡೆ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ಸಮುದಾಯದ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು.

ಸಚಿವರಾದ ಕೆ.ಎಚ್‌.ಮುನಿಯಪ್ಪ, ಆರ್‌.ಬಿ.ತಿಮಾಪುರ್‌, ರಾಜ್ಯಸಭೆಯ ಮಾಜಿ ಸದಸ್ಯ ಎಲ್‌.ಹನುಮಂತಯ್ಯ, ಮಾಜಿ ಸಚಿವರಾದ ಆಂಜನಯ್ಯ, ಶಿವಣ್ಣ, ವಿಧಾನಪರಿಷತ್‌ ಸದಸ್ಯ ಡಾ.ತಿಮ್ಮಯ್ಯ, ಶಾಸಕ ಬಸಂತಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸೇರಿದಂತೆ ಮತ್ತಿತರರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

ಸುಪ್ರೀಂಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಒಳಮೀಸಲಾತಿ ನೀಡಲು ರಾಜ್ಯಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದ್ದು, ಅದರ ಅನುಸಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಪಂಗಡಗಳಿಗೆ ಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದಲ್ಲಿ ಕೇಳಿ ಬರುತ್ತಿರುವ ಆಗ್ರಹದ ಬಗ್ಗೆ ಈ ನಾಯಕರು ಸಭೆಯ ಗಮನ ಸೆಳೆದರು.

ಹಲವು ದಶಕಗಳ ಈ ಬೇಡಿಕೆ ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲ್ಪಟ್ಟಿದೆ. ರಾಜಕೀಯವಾಗಿ ಎಲ್ಲಾ ಪಕ್ಷಗಳೂ ಈ ವಿಚಾರವನ್ನು ಮುಂದಿಟ್ಟುಕೊಂಡು ಸಮುದಾಯವನ್ನು ದಿಕ್ಕು ತಪ್ಪಿಸುತ್ತಿವೆ. ಕಾಂಗ್ರೆಸ್‌‍ ಪಕ್ಷ ವಿಧಾನಸಭಾ ಚುನಾವಣೆಗೂ ಮುನ್ನ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಿ ಒಳಮೀಸಲಾತಿ ಕಲ್ಪಿಸುವ ಭರವಸೆ ನೀಡಿತ್ತು. ಅದರ ಅನುಸಾರ ಸರ್ಕಾರ ಬಂದ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಜನರಿಗೆ ಕೊಟ್ಟ ಮಾತಿನ ಪ್ರಕಾರ ಸರ್ಕಾರ ನಡೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.

Leave a Reply