ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ತನ್ನ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿರುವ ಬಿಜೆಪಿ, ರಾಜ್ಯದ ಬಹುತೇಕ ಎಲ್ಲ ಕಡೆ ಭಿನ್ನಮತದ ಹೊಡೆತ ಅನುಭವಿಸುತ್ತಿದೆ.
ಬಿಕ್ಕಟ್ಟು ಶಮನಕ್ಕೆ ಪಕ್ಷದ ರಾಷ್ಟ್ರೀಯ ನಾಯಕರಾದಿಯಾಗಿ ಎಲ್ಲರೂ ಶ್ರಮಿಸುತ್ತಿದ್ದರೂ ಅನೇಕ ಕಡೆ ಅದು ನಿರೀಕ್ಷಿತ ಫಲಿತಾಂಶ ನೀಡಿಲ್ಲ. ಈ ಬಿಕ್ಕಟ್ಟು ಮತದಾರರ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕಕ್ಕೆ ಸಿಲುಕಿರುವ ನಾಯಕರು ಇದೀಗ, ಅದರ ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಪ್ರಭಾವಿ ನಾಯಕರ ರೋಡ್ ಶೋ ಮತ್ತು ಬಹಿರಂಗ ಸಭೆಗಳನ್ನು ಆಯೋಜಿಸಲು ತಂತ್ರ ರೂಪಿಸಿದ್ದಾರೆ.
ರಾಜ್ಯದ ಎಂಟು ವಲಯಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಪ್ರಚಾರದ ಕಣಕ್ಕಿಳಿಸಲಿರುವ ರಾಜ್ಯ ಬಿಜೆಪಿ ಮೆಗಾ ರ್ಯಾಲಿಗಳು ಮತ್ತು ರೋಡ್ ಶೋಗಳು, 46,000 ಬೂತ್‍ಗಳಲ್ಲಿ ಬೂತ್ ಕಾರ್ಯಕ್ರಮಗಳು ಮತ್ತು ವಿವಿಧ ಗುಂಪುಗಳ ಜನರೊಂದಿಗೆ ಸಭೆಗಳು ಮತ್ತು ಒಂದು ಲಕ್ಷ ವಾಟ್ಸ್ ಆ್ಯಪ್ ಗುಂಪುಗಳಲ್ಲಿ ಸಂದೇಶಗಳನ್ನು ರವಾನಿಸುವ ಅದರ ಪ್ರಚಾರ ಕಾರ್ಯಸೂಚಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಏ.24ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಆನಂತರ ಪಕ್ಷವು ರೋಡ್ ಶೋ ಮತ್ತು ಮೆಗಾ ರ್ಯಾಲಿಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಏ.25ರಂದು ಮೊದಲ ರ್ಯಾಲಿಗಾಗಿ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿಳಿಯುತ್ತಾರೆ. ಬೆಂಗಳೂರು, ಮೈಸೂರು, ಮಂಗಳೂರು, ಬಿಜಾಪುರ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಕೋಲಾರದಲ್ಲೂ ಮತದಾರರನ್ನು ತಲುಪಲು ರ್ಯಾಲಿಗಳನ್ನು ಯೋಜಿಸಲಾಗಿದೆ.
ರಾಜ್ಯದ 52,000 ಬೂತ್‍ಗಳಲ್ಲಿ 46,000 ಬೂತ್‍ಗಳಲ್ಲಿ ಪಕ್ಷದ ಅಸ್ಥಿತ್ವವನ್ನು ಬಲಗೊಳಿಸುವ ಕೆಲಸ ಮಾಡುತ್ತಿದೆ. ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ಬೂತ್‍ಗಳಲ್ಲಿ ಸಭೆ ನಡೆಸಲು ಸೂಚಿಸಲಾಗಿದೆ. ನಾವು ಬೂತ್ ಸಮಿತಿಗಳು, ಪುಟ ಸಮಿತಿಗಳು ಮತ್ತು ತಲಾ 4-5 ಬೂತ್‍ಗಳಿಗೆ ಒಬ್ಬ ಶಕ್ತಿ ಕೇಂದ್ರದ ಉಸ್ತುವಾರಿಯನ್ನು ನೇಮಿಸಿದ್ದೇವೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಬ್ಬರು ತಿಳಿಸಿದ್ದಾರೆ.
10-50 ಕಾರ್ಯಕರ್ತರೊಂದಿಗೆ ಸಣ್ಣ ಸಣ್ಣ ಪ್ರದೇಶಗಳಲ್ಲಿ ಸಂವಾದ, ಸಭೆಗಳು ಮತ್ತು ಬೈಠಕ್‍ಗಳನ್ನು ನಡೆಸಲು ಈ ಉಸ್ತುವಾರಿಗಳಿಗೆ ತಿಳಿಸಲಾಗಿದೆ. ಇದಲ್ಲದೆ, ಒಂದು ಲಕ್ಷಕ್ಕೂ ಹೆಚ್ಚು ವಾಟ್ಸ್ ಆ್ಯಪ್ ಗುಂಪುಗಳು ಮತ್ತು 46,000 ಬೂತ್‍ಗಳಲ್ಲಿ ಪ್ರತಿಯೊಂದೂ ಅಂತಹ ಎರಡು ಗುಂಪುಗಳನ್ನು ಹೊಂದಿದೆ. ವಿವಿಧ ಸಾಮಾಜಿಕ ಗುಂಪುಗಳೊಂದಿಗೆ ಎಸ್ಸಿ -ಎಸ್ಟಿ ಮತದಾರರು, ಒಬಿಸಿ ಮತದಾರರ ಜೊತೆಗೆ ಕಾರ್ಮಿಕ ವರ್ಗದ ಮತದಾರರೊಂದಿಗೆ ಸಭೆ ಸಹ ನಡೆಸಲಾಗುತ್ತದೆ.




