ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್

3 years ago

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಮತದಾರರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷಕ್ಕೆ ಮನ್ನಣೆ ನೀಡಲಿದ್ದಾರೆ. ಹೀಗಾಗಿ, ತಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ವಿಶ್ವಾಸದಲ್ಲಿರುವ ಜೆಡಿಎಸ್ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆಗಳನ್ನು ಪ್ರಣಾಳಿಕೆಯ ರೂಪದಲ್ಲಿ ಜನರ ಮುಂದಿಟ್ಟಿದೆ.

ಪಕ್ಷದ ಪ್ರಣಾಳಿಕೆಯನ್ನು ಕರುನಾಡ ಜನತೆಗೆ ಜೆಡಿಎಸ್ ಪರಿಹಾರ ಎಂಬ ಭರವಸೆಯ ಪತ್ರ ಎಂದು ಕರೆಯಲಾಗಿದೆ. ಇದನ್ನು ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬಿಡುಗಡೆ ಮಾಡಿದರು.

ಪಂಚರತ್ನ ಯೋಜನೆಗಳಾದ ಆರೋಗ್ಯ ಸಂಪತ್ತು, ವಸತಿ ಆಸರೆ, ಯುವನವ ಮಾರ್ಗ ಮತ್ತು ಮಹೀಳಾ ಸಬಲೀಕರಣ, ಕನ್ನಡವೇ ಮೊದಲು, ಶಿಕ್ಷಣವೇ ಆಧುನಿಕ ಶಕ್ತಿ ಎಂಬುವು ಸೇರಿದಂತೆ 12 ಪ್ರಮುಖ ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಆರೋಗ್ಯ ಸಂಪತ್ತು, ರೈತ ಚೈತನ್ಯ, ಹಿರಿಯ ನಾಗರಿಕರಿಗೆ ಸನ್ಮಾನ, ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ ಹಾಗೂ ಪ್ರಗತಿ, ಯುವಜನ ಸಬಲೀಕರಣ, ವಿಕಲ ಚೇತನರಿಗೆ ಆಸರೆ, ಆರಕ್ಷಕರಿಗೆ ಅಭಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಏಳಿಗೆ ಹಾಗೂ ವೃತ್ತಿ ನಿರತ ವಕೀಲರ ಅಭ್ಯುದಯ ಜೆಡಿಎಸ್ ಭರವಸೆಯ ಪ್ರಮುಖ ಅಂಶಗಳಾಗಿವೆ.

ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಾಲ ಮನ್ನಾ, ವರ್ಷಕ್ಕೆ 5 ಅಡುಗೆ ಅನಿಲ ಸಿಲಿಂಡರ್ ಉಚಿತ, ಗರ್ಭಿಣಿಯರಿಗೆ 6 ತಿಂಗಳ ಕಾಲ 6 ಸಾವಿರ ರೂ. ಭತ್ಯೆ,ವಿಧವಾ ವೇತನಾ 900 ನಿಂದ 2500 ರೂ.ಗೆ ಹೆಚ್ಚಳ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ 5 ಸಾವಿರ ವೇತನ, ಕನಿಷ್ಠ ಪಕ್ಷ15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಪಿಂಚಣಿ ನೀಡುವ ಭರವಸೆ ನೀಡಿದೆ.

ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಕಾಯ್ದೆ ಜಾರಿ, ಕೇಂದ್ರ ಸರ್ಕಾರದ ಎಲ್ಲಾ ಪರೀಕ್ಷೆ ಕನ್ನಡದಲ್ಲಿ ಬರೆಯಲು ಆದ್ಯತೆ ನೀಡಲು ಕೇಂದ್ರಸರ್ಕಾರದ ಮೇಲೆ ಒತ್ತಡ ತರುವುದು, ಕೃಷಿಕರಿಗೆ ಪ್ರತಿ ಎಕರೆಗೆ 10 ಸಾವಿರ ರೂ.ಸಹಾಯ ಧನ, ಕೃಷಿ ಕಾರ್ಮಿಕ ಕುಟುಂಬಕ್ಕೆ 2 000 ರೂ. ಸಹಾಯ ಧನ, ರೈತರ ಯುವಕರನ್ನು ಮದುವೆ ಆಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹಧನ ನೀಡುವ ಭರವಸೆ ನೀಡಲಾಗಿದೆ.

ಹಿರಿಯ ನಾಗರಿಕರಿಗೆ ನೀಡುವ ಮಾಸಾಶನ 1500 ರಿಂದ 5 ಸಾವಿರ ರೂ.ಗೆ ಹೆಚ್ಚಳ, ಪ್ರೌಢಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಬೈಸಿಕಲ್, ಪದವಿ ಕಾಲೇಜು ವ್ಯಾಸಂಗ ಮಾಡುವ 18 ವರ್ಷ ತುಂಬಿರುವ 60 ಸಾವಿರ ವಿದ್ಯಾರ್ಥಿನಿಯರಿಗೆ ವಿದ್ಯುತ್ ಚಾಲಿತ ಮೊಪೆಡ್ ನೀಡುವ ಭರವಸೆ ನೀಡಲಾಗಿದೆ.

ದುಬಾರಿ ವೆಚ್ಚದ ವೈದ್ಯಕೀಯ ಶಸ್ತ್ರ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಪರಿಹಾರಧನವನ್ನು 24 ಗಂಟೆಯಲ್ಲಿ ಬಿಡುಗಡೆ,ಆಯುಷ್ಮಾನ್ ಭಾರತ್, ಯಶಸ್ವಿನಿ ಯೋಜನೆ ಅಡಿ ಸೇರ್ಪಡೆ ಯಾಗದ ಕಾಯಿಲೆಗೂ ಪರಿಹಾರ,  ಜಯದೇವ ಮಾದರಿಯಲ್ಲಿ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರಾಜ್ಯದಲ್ಲಿ ನಿಮ್ಹಾನ್ಸ್ ಮಾದರಿಯಲ್ಲಿ 500 ಹಾಸಿಗೆಯುಳ್ಳ ನರರೋಗ ವೈದ್ಯಕೀಯ ಸಂಸ್ಥೆ ಸ್ಥಾಪನೆ ಮಾಡುವುದು ಜೆಡಿಎಸ್ ಭರವಸೆಯ ಮುಖ್ಯಾಂಶಗಳಾಗಿವೆ.

ಬಳಿಕ ಮಾತನಾಡಿದ ದೇವೇಗೌಡ,12 ಭರವಸೆಗಳನ್ನು ನಾನು ಘೋಷಣೆ ಮಾಡಿದ್ದೇನೆ. ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಅಲ್ಪಸಂಖ್ಯಾತರಿಗೆ ಏನೇನು ಮಾಡಬೇಕೆಂಬ ಬಗ್ಗೆ ಒಂದು ಸಮಿತಿ ನೇಮಕ ಮಾಡಿದ್ದು, ಅವರು ಕೊಟ್ಟ ವರದಿ ಜಾರಿ ಮಾಡೋದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂದರು.

ಪ್ರಣಾಳಿಕೆ ಬಿಡುಗಡೆ ಬೇರೆ ದಿನ ಆಗುತ್ತೆ. ಇಂದು ಕಾರ್ಯಕ್ರಮಗಳ ಭರವಸೆ ಮಾತ್ರ ಹಂಚಿಕೊಂಡಿದ್ದೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಏನು ಮಾಡಿದ್ದೆ ಎಂಬ ದಾಖಲೆ ಇದೆ. ಯಾವುದೂ ಸುಳ್ಳು ಹೇಳಲ್ಲ ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ರಾಜ್ಯದ ಎಲ್ಲಾ ಕಡೆ ಓಡಾಟ ನಡೆಸಿ ವಿಷಯ ಸಂಗ್ರಹ ಮಾಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಹಾಕುತ್ತಾರೆ. ಕಮ್ಯುನಿಸ್ಟ್ ಪಾರ್ಟಿಯವರು ನಾನು ಆಸ್ಪತ್ರೆಯಲ್ಲಿ ಇದ್ದಾಗ ಸಂಪರ್ಕ ಮಾಡಿದ್ದರು. ಎಲ್ಲಾ ಹೊಣೆಗಾರಿಕೆಯನ್ನು ಕುಮಾರಸ್ವಾಮಿಗೆ ನೀಡಿದ್ದೇನೆ. ಮೂರು ಕ್ಷೇತ್ರಗಳಲ್ಲಿ ಕುಮಾರಸ್ವಾಮಿ ಪ್ರಚಾರಕ್ಕೆ ಹೋಗುತ್ತಾರೆ. ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡುತ್ತಾರೆ ಎಂದರು.

ಒಕ್ಕಲಿಗರು ಹಿಂದುಳಿದವರು ಎಂದು ಮೀಸಲಾತಿ ವಿಚಾರದಲ್ಲಿ ಬರೆದಿದ್ದಾರೆ. ನನ್ನ ಸಮಾಜಕ್ಕೆ ಶೇ.4ರಷ್ಟು ಕೊಟ್ಟು, ಮುಸ್ಲಿಮರಿಗೆ ಶೇ. 4 ರಷ್ಟು ಮೀಸಲಾತಿ, ಉಳಿದ ಸಣ್ಣ ಸಮುದಾಯಗಳಿಗೆ ಶೇ.1ರಷ್ಟು ನೀಡಿದ್ದೆ. ಆಗಿನ ಪ್ರಧಾನಿ ಚಂದ್ರಶೇಖರ್ ಕೈ ಕಾಲು ಕಟ್ಟಿ ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದೆ. ನಾನು ಯಾರಿಗೂ ಕೇಡು ಬಯಸಿಲ್ಲ ಎಂದು ಹೇಳಿದರು.

Leave a Reply