ಅಧಿಕಾರಕ್ಕಾಗಿ ಕಾಂಗ್ರೆಸ್ ಕೆಲವು ರಾಷ್ಟ್ರ ವಿರೋಧಿ ಸಂಘಟನೆಗಳೊಂದಿಗೆ ಕೈಜೋಡಿಸಿದೆ: ಬಿಜೆಪಿ

3 years ago

ಬೆಂಗಳೂರು: ಅಧಿಕಾರ ಹಿಡಿಯುವ ಕಾರಣಕ್ಕಾಗಿ ಕಾಂಗ್ರೆಸ್ ಕೆಲವು ರಾಷ್ಟ್ರ ವಿರೋಧಿ ಸಂಘಟನೆಗಳೊಂದಿಗೆ ಕೈಜೋಡಿಸಿದೆ. ನಿಷೇಧಿತ ಸಂಘಟನೆಗಳ ಜೊತೆ ಸಖ್ಯ ಹೊಂದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ದ್ವಿವೇದಿ, ನಿಷೇಧಿತ ಪಿಎಫ್‍ಐ ಮತ್ತು ಎಸ್‍ಡಿಪಿಐ ನಂತಹ ಶಕ್ತಿಗಳೊಂದಿಗೆ ತಾವು ಹೊಂದಿರುವ ಸಂಬಂಧವೇನು ಎಂಬುದನ್ನು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಹಿಂದಿನ ಕಾಂಗ್ರೆಸ್ ಸರ್ಕಾರ ಸಾಕ್ಷ್ಯಾಧಾರ ಕೊರತೆ ಇದೆ ಎಂದು ಹೇಳಿ ಪಿಎಫ್‍ಐ, ಎಸ್‍ಡಿಪಿಐ ಕಾರ್ಯಕರ್ತರ ಮೇಲಿನ 1,700 ಪ್ರಕರಣಗಳನ್ನು ಹಿಂತೆಗೆದುಕೊಂಡಿತ್ತು. ಇದು ಆ ಸಂಘಟನೆಗಳ ಮೇಲೆ ಕಾಂಗ್ರೆಸ್‍ಗಿರುವ ಪ್ರೀತಿ ಮತ್ತು ಸಂಬಂಧವನ್ನು ತೋರುತ್ತದೆ ಎಂದು ಟೀಕಿಸಿದರು

ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಹಂಪಿ ಉತ್ಸವ ನಿರ್ಲಕ್ಷಿಸಿ, ಟಿಪ್ಪು ಜಯಂತಿ ಆಚರಣೆಗೆ ಆಸಕ್ತಿ ತೋರಿತು. 2019ರಲ್ಲಿ ಅಂದಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಹ ಟಿಪ್ಪುಗೆ ಗೌರವ ನಮನ ಸಲ್ಲಿಸಿದ್ದರು. ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳಿಗೆ ಪಿಎಫ್‍ಐ, ಎಸ್‍ಡಿಪಿಐ ಸಂಘಟನೆಗಳು ಕುಮ್ಮಕ್ಕು ನೀಡಿದ್ದವು. ಹಿಜಾಬ್ ವಿವಾದವನ್ನು ಸಹ ಇದೇ ಸಂಘಟನೆಗಳು ಹುಟ್ಟು ಹಾಕಿದ್ದವು ಎಂದು ಆರೋಪಿಸಿದರು.

ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಂಗಳೂರು ಸ್ಫೋಟ ಪ್ರಕರಣವನ್ನು ಹೇಗೆ ಭಯೋತ್ಪಾದಕ ಕೃತ್ಯ ಎನ್ನಲಾಗುತ್ತದೆ. ಈ ಪ್ರಕರಣದ ಆರೋಪಿ ಅಮಾಯಕ ಎಂದು ಹೇಳಿದ್ದರು. ಇದು ಆ ಸಂಘಟನೆಯ ಮೇಲೆ ಡಿ.ಕೆ.ಶಿವಕುಮಾರ್ ಅವರಿಗೆ ಇರುವ ಪ್ರೀತಿ ತೋರುತ್ತದೆ ಎಂದರು.

ಈ ಚುನಾವಣೆಯಲ್ಲಿ ರಾಷ್ಟ್ರವಿರೋಧಿಗಳು ಮತ್ತು ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ ಪಕ್ಷಗಳಿಗೆ ಮತದಾರರು ತಕ್ಕ ಉತ್ತರ ಉತ್ತರವನ್ನು ನೀಡಲಿದ್ದಾರೆ. ಶಾಂತಿ ಮತ್ತು ಪ್ರಗತಿಯೊಂದಿಗೆ ರಾಜ್ಯವನ್ನು ಕೊಂಡೊಯ್ಯುವ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದರು.

ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಚಾಮರಾಜಪೇಟೆ  ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಮಾತನಾಡಿ, ಕಾಂಗ್ರೆಸ್ ಪಕ್ಷ ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಸಿಮಿಯನ್ನು ನಿಷೇಧಿಸಿದ ನಂತರ 2016ರಲ್ಲಿ ಅದೇ ಸಂಘಟನೆಯ ಮುಂದಿನ ಭಾಗವಾಗಿ ಪಿಎಫ್‍ಐ ಹುಟ್ಟಿಕೊಂಡಿತು. ಪಿಎಫ್‍ಐಯನ್ನು ನಿಷೇಧಿಸಿದ ನಂತರ ಅದರ ಚಟುವಟಿಕೆಗಳು ಎಸ್‍ಡಿಪಿಐ ಮೂಲಕ ನಡೆಯುತ್ತಿವೆ ಎಂದು ದೂರಿದರು.

ಕಾಲದಿಂದ ಕಾಲಕ್ಕೆ ಒಂದೇ ಉದ್ದೇಶದ ಶಕ್ತಿ ಬೇರೆ, ಬೇರೆ ರೂಪ ಪಡೆಯುತ್ತಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಹೆಸರಿನಲ್ಲಿ ಎಸ್‍ಡಿಪಿಐ ನಂತಹ ಸಂಘಟನೆಗಳು ಮಧ್ಯ ಏಷ್ಯಾ ದೇಶಗಳಿಂದ ಅಪಾರ ಮೊತ್ತದ ದೇಣಿಗೆ ಪಡೆಯುತ್ತಿವೆ. ಈ ಹಣವನ್ನು ಕೇರಳದ ಮೂಲಕ ಇಡೀ ದೇಶಕ್ಕೆ ರಾಷ್ಟ್ರ ವಿರೋಧಿ, ಭಯೋತ್ಪಾದನೆ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಎಸ್‍ಡಿಪಿಎಐ ನಂತಹ ಸಂಘಟನೆಗಳು ಇತರ ಅಂಗ ಸಂಸ್ಥೆಗಳ ಮೂಲಕವೂ ಹಲವು ಮಾರ್ಗಗಳಿಂದ ವಿದೇಶಗಳಿಂದ ಹಣ ಪಡೆಯುತ್ತಿವೆ. ಪಿಎಫ್‍ಐ ಮೇಲೆ 19 ಕೊಲೆ ಪ್ರಕರಣಗಳು ಧೃಡಪಟ್ಟಿದ್ದು, ಇದರ 160ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಗಿದೆ. ಹಾಗೆಯೇ ಈ ಸಂಘಟನೆಯ ನೂರಾರು ಸದಸ್ಯರ ಕೊಲೆ ಯತ್ನ ಪ್ರಕರಣಗಳಿವೆ ಎಂದು ಹೇಳಿದರು.

Leave a Reply