ಕಳೆದ ಮಾರ್ಚ್ ತಿಂಗಳಿನಲ್ಲಿ ಬರೆದು ಮುಗಿಸಿದ್ದ ಚಂಪಾರಣ್ಯ ಸತ್ಯಾಗ್ರಹ ಹೋರಾಟದ ಕೃತಿಯನ್ನು ಕಳೆದ ಒಂದು ವಾರದಿಂದ ಒಬ್ಬ ಪ್ರಜ್ಞಾವಂತ ಓದುಗನಾಗಿ ಓದುತ್ತಾ, ಅಲ್ಲಿನ ತಪ್ಪುಗಳನ್ನು ತಿದ್ದುತ್ತಾ ಕುಳಿತಿದ್ದೆ. ಮಾಹಿತಿ ಅಥವಾ ವಿಶ್ಲೇಷಣೆ ಸಾಲದು ಎಂದು ಅನಿಸಿದ ಕಡೆ ಹೊಸದಾಗಿ ಬರೆಯುತ್ತಿದ್ದೀನಿ. ನಾನು ಲೇಖಕನಾಗಿ ಕೃತಿಯನ್ನು ಬರೆದು ಮಗಿಸಿದ ನಂತರ ಕನಿಷ್ಠ ಮೂರು ಬಾರಿಯಾದರೂ ಪ್ರಬುದ್ಧ ಓದುಗನಾಗಿ ಓದುತ್ತಾ ಕೃತಿಯನ್ನು ತಿದ್ದುವ ಸಂಪ್ರದಾಯವನ್ನು ಅನುಸರಿಸುತ್ತೇನೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಬೆಂಗಳೂರು-ಮೈಸೂರು ನಡುವೆ ಚಲಿಸುವ ರೈಲುಗಳಲ್ಲಿ ಮದ್ದೂರು ವಡೆ ಮಾರಾಟ ಮಾಡುವ ಹುಡುಗರು ವಡೆ ಮಾರಾಟಕ್ಕೆ ಪ್ರಸಿದ್ಧವಾದ ತಂತ್ರವೊಂದನ್ನು ಬಳಸುತ್ತಾರೆ. ‘’ ಬಿಸಿಯಿಲ್ಲ ಅಂದ್ರೆ, ಕಾಸ್ ವಾಪಸ್’’ ಇದೇ ತಂತ್ರವನ್ನು ನಾನು ಕೃತಿ ರಚನೆಯ ಸಂದರ್ಭದಲ್ಲಿ ಬಳಸಿಕೊಳ್ಳುತ್ತೇನೆ. ಹಣ ನೀಡಿ ಕೃತಿಯನ್ನು ಕೊಳ್ಳುವ ಓದುಗನಿಗೆ ಕೃತಿಯು ಕನಿಷ್ಠ ಮಟ್ಟದಲ್ಲಾದರೂ ಆತ್ಮ ತೃಪ್ತಿಯನ್ನು ನೀಡಬೇಕು. ಆತ ಅಥವಾ ಆಕೆ ಇನ್ನೊಬ್ಬರ ಬಳಿ ಕೃತಿಯ ಬಗ್ಗೆ ಮಾತನಾಡುವಂತಿರಬೇಕು. ಇದು ಲೇಖಕನಾಗಿ ನಾನು ನಂಬಿಕೊಂಡು ಬಂದಿರುವ ಧೋರಣೆ.
ಈ ಕಾರಣದಿಂದ ನಾನು ಕೃತಿ ರಚನೆಯಾದ ನಂತರ ತಿಂಗಳುಗಟ್ಟಲೆ ಕೃತಿಯನ್ನು ಪಕ್ಕಕ್ಕಿಟ್ಟು ನಂತರ ಮರು ಓದುತ್ತೇನೆ. ಪ್ರತಿ ಓದಿನಲ್ಲಿಯೂ ಕೃತಿಯ ದೋಷಗಳು ಎದ್ದು ಕಾಣುತ್ತವೆ. ತಿದ್ದುತ್ತಾ ಹೋಗುತ್ತೇನೆ. ಸೃಜನಶೀಲ ಕೃತಿಯಾಗಲಿ ಇಲ್ಲವೆ, ಅಧ್ಯಯನ ಶೀಲ ಕೃತಿಗಳಾಗಲಿ ಅವುಗಳು ಧ್ಯಾನಸ್ಥ ಮನಸ್ಸಿನಿಂದ ರೂಪುಗೊಂಡ ರಚನೆಗಳಾಗಿರಬೇಕು. ಕೃತಿ ರಚನೆ ಎಂದರೆ, ರಾಗಿ ಮೆಷಿನ್ ನಲ್ಲಿ ಮೇಲೆ ರಾಗಿ ಹಾಕಿ ಕಳೆಗೆ ಪೌಡರ್ ಅಥವಾ ಹಿಟ್ಟಿಗೆ ಬೋಸಿ ಒಡ್ಡುವ ಕ್ರಿಯೆ ಅಲ್ಲ. ಇಂದಿನ ನಮ್ಮ ಕನ್ನಡದ ಸಾಹಿತ್ಯ ಲೋಕದ ದುರಂತವೆಂದರೆ, ಈಗ ಎಲ್ಲೆಡೆ ಕಥೆ, ಕಾದಂಬರಿ ಮತ್ತು ಕಾವ್ಯದ ರಾಗಿ ಮಿಷನ್ ಗಳು ಅಸ್ತಿತ್ವದಲ್ಲಿವೆ. ಅಷ್ಟೇ ಏಕೆ ನಮ್ಮ ಮಂಡ್ಯದಲ್ಲಿ ವರ್ಷಕ್ಕೆ ಹನ್ನೆರೆಡು ಮಹಾಕಾವ್ಯ ಬರೆಯುವ ರಾಗಿ ಮೆಷಿನ್ ತುಂಬಾ ಸಕ್ರಿಯವಾಗಿದೆ.
ನಾನು ಮತ್ತು ನನ್ನ ತಲೆಮಾರಿನ ಬಹುತೇಕ ಮಂದಿ 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಜಾರಿಗೆ ತಂದಿದ್ದ ತುರ್ತು ಪರಿಸ್ಥಿತಿಗೆ ಸಾಕ್ಷಿಯಾಗಿದ್ದವು. ಅದೇ ರೀತಿಯಲ್ಲಿ 1977 ರಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾಗಾಂಧಿ ಪತನಗೊಂಡಿದ್ದನ್ನೂ ಸಹ ನಾವು ನೋಡಿದೆವು. ಅಂತಹ ಸನ್ನಿವೇಶ ಈ ಬಾರಿಯ ಚುನಾವಣೆಯಲ್ಲಿ ಸಂಭವಿಸಬಹುದೆಂದು ಕೆಲವರು ಕನಸು ಕಾಣುತ್ತಿದ್ದಾರೆ.
47 ವರ್ಷಗಳ ಹಿಂದೆ ಭಾರತದಲ್ಲಿ ಬಡತನವಿತ್ತು, ಅನಕ್ಷರತೆ ಇತ್ತು ನಿಜ, ಆದರೆ, ಮತದಾರರು ಮಾನಸಿಕವಾಗಿ ಇಂದಿನ ಮತದಾರರ ಹಾಗೆ ಭ್ರಷ್ಟರಾಗಿರಲಿಲ್ಲ ಈ ಸತ್ಯವನ್ನುನಾವು ಈಗ ಅರಿಯಬೇಕಿದೆ. ಇಂದಿರಾ ಅವರನ್ನು ಮಣಿಸಿ, ಅಧಿಕಾರದ ಚುಕ್ಕಾಣಿ ಹಿಡಿದ ವಿರೋಧ ಪಕ್ಷಗಳು ಜನತಾ ಪಕ್ಷದ ಹೆಸರಿನಲ್ಲಿ ಹಾಗೂ ಮುರಾರ್ಜಿ ದೇಸಾಯಿ ನೇತೃತ್ವದಲ್ಲಿ ಅಧಿಕಾರದ ಗದ್ದುಗೆ ಏರಿದವು. ಕೇವಲ ಎರಡು ವರ್ಷದ ಅವಧಿಯಲ್ಲಿ ಕಿತ್ತಾಡಿಕೊಂಡು ತಕ್ಕಡಿಯೊಳಗಿನ ಕಪ್ಪೆಗಳಂತಾಗಿ ಅಧಿಕಾರ ಕಳೆದುಕೊಂಡವು.
ಇಂದಿರಾಗಾಂಧಿಯವರನ್ನು ಮಣಿಸಿದ್ದ ಇದೇ ಭಾರತದ ಮತದಾರರು 1980 ರ ಚುನಾವಣೆಯಲ್ಲಿ ಈ ವಿರೋಧ ಪಕ್ಷವನ್ನು ಕಸದ ಬುಟ್ಟಿಗೆ ಹಾಕಿ ಇಂದಿರಾ ಅವರನ್ನು ಮತ್ತೇ ಅಧಿಕಾರಕ್ಕೆ ತಂದರು. ಆ ಸಂಧರ್ಭದಲ್ಲಿ ಇಂದಿರಾ ಅವರು ಚಿಕ್ಕಮಗಳೂರಿನಿಂದ ಲೋಕ ಸಭೆಗೆ ಆಯ್ಕೆಯಾದರು. ಈ ಇತಿಹಾಸದ ಪಾಠವನ್ನು ಅಧಿಕಾರದ ಗದ್ದುಗೆಯಲ್ಲಿ ಕುಳಿತು ನೈತಿಕವಾಗಿ ದಿವಾಳಿಯೆದ್ದು ಹೋಗಿರುವ ಮಂದಿ ಹಾಗೂ ಅಧಿಕಾರಕ್ಕೆ ಹಂಬಲಿಸುತ್ತಿರುವ ಮಂದಿ ಇಬ್ಬರೂ ಕಲಿಯಬೇಕಿದೆ. ಈ ಚುನಾವಣೆಯಲ್ಲಿ ಭ್ರಷ್ಟ ಸರ್ಕಾರಕ್ಕೆ ಪರ್ಯಾಯ ಏನು? ಎಂಬ ಪ್ರಶ್ನೆಗೆ ಯಾವ ಮತದಾರನ ಬಳಿಯೂ ಸ್ಪಷ್ಟವಾದ ಉತ್ತರವಿಲ್ಲ. ಪ್ರಜಾಪ್ರಭುತ್ವದ ಅಡಿಪಾಯವೇ ಕುಸಿಯುತ್ತಿರುವಾಗ, ಹೊಸ ವ್ಯವಸ್ಥೆಗೆ ಜನತೆ ಕಾಯುವಂತಹ ಸ್ಥಿತಿ ನಿರ್ಮಾಣವಾಗಿದೆ.
ನನಗೆ ಈ ಸಂದರ್ಭದಲ್ಲಿ 1917 ರ ಏಪ್ರಿಲ್ ತಿಂಗಳಿನಲ್ಲಿ ಬಿಹಾರದ ಚಂಪಾರಣ್ಯದ ಬಿರು ಬಿಸಿಲಿನಲ್ಲಿ ರಸ್ತೆ ಇಲ್ಲದ ಹಳ್ಳಿಗಳಲ್ಲಿ ಗಾಂಧೀಜಿ ಅವರು ತಮ್ಮ ಸಂಗಡಿಗರೊಂದಿಗೆ ಸಂಚರಿಸುತ್ತಾ, ಅಲ್ಲಿನ ಬಡ ಮುಗ್ದ ಜನರ ಮಾತುಗಳಿಗೆ ಕಿವಿಗೊಡುತ್ತಾ, ಅವರ ಕಣ್ಣೀರಿಗೆ ಕರವಸ್ತ್ರವಾದ ಬಗೆ ಇದೆಯಲ್ಲ ಅದು ಇಂದಿಗೂ ನನಗೆ ವಿಸ್ಮಯದ ಸಂಗತಿ ಎನಿಸಿದೆ. 107 ವರ್ಷಗಳ ಹಿಂದಿನ ಚಂಪಾರಣ್ಯದ ಹೋರಾಟದ ಕಥನವನ್ನು ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸುತ್ತಾ ದಾಖಲಿಸುತ್ತಿದ್ದೀನಿ. ನಮ್ಮ ನೆಲದ ಸಂಸ್ಕೃತಿಗೆ ಸಂಬಂಧ ಪಡದ, ನಮ್ಮ ಭಾಷೆಯನ್ನು ಅರಿಯದ ಈ ಮಹಾತ್ಮ ನಮ್ಮ ನೆಲಕ್ಕೆ ಬಂದು ನಮ್ಮನ್ನು ಶೋಷಣೆ ಮಾಡುತ್ತಿದ್ದ ಬ್ರಿಟೀಷರಿಗೆ ತಕ್ಕಪಾಠ ಕಲಿಸುತ್ತಿದ್ದಾನಲ್ಲ! ಎಂದು ಆಶ್ಚರ್ಯ ಪಟ್ಟ ಅಲ್ಲಿನ ಜನತೆ ಗಾಂಧಿ ಅವರು ರಸ್ತೆಯಲ್ಲಿ ನಡೆದು ಬರುತ್ತಿದ್ದರೆ, ದೇವರ ದರ್ಶನಕ್ಕೆ ಭಕ್ತರು ಕಾಯುವಂತೆ ಕಾಯುತ್ತಿದ್ದರು.

ಚಂಪಾರಣ್ಯದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅಲ್ಲಿನ ಜಿಲ್ಲಾ ನ್ಯಾಯಾಧೀಶ ಜಿಲ್ಲೆಯಾದ್ಯದಂತ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ, ಗಾಂಧೀಜಿಯವರನ್ನು ತಕ್ಷಣ ಚಂಪಾರಣ್ಯವನ್ನು ತೊರೆಯುವಂತೆ ಆದೇಶಿಸಿದಾಗ, ಗಾಂಧೀಜಿ ಅವರು ನ್ಯಾಯಾಧೀಶನ ಆದೇಶವನ್ನು ಧಿಕ್ಕರಿಸಿದರು. ಇಲ್ಲಿನ ಜನತೆ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ. ನಾನು ಇಲ್ಲಿಗೆ ಬಂದಿರುವುದು ಬೆಂಕಿ ಹಚ್ಚಲು ಅಲ್ಲ, ಕತ್ತಲು ಆವರಿಸಿಕೊಂಡಿರುವ ಮನ ಮತ್ತು ಮನೆಗಳಿಗೆ ಬೆಳಕಿನ ದೀಪ ಹಚ್ಚಲು ಆಗಮಿಸಿದ್ದೀನಿ ಎಂದು ನ್ಯಾಯಾಧೀಶನಿಗೆ ಪತ್ರ ಬರೆದರು.

ಮೋತಿಹಾರಿ ಪಟ್ಟಣದ ನ್ಯಾಯಾಲಯಕ್ಕೆ ಗಾಂಧೀಜಿ ಅವರು ಹಾಜರಾಗುವ ದಿನ ಚಂಪಾರಣ್ಯದ ನೂರಾರು ಹಳ್ಳಿಗಳಿಂದ ಬಂದಿದ್ದ ಸಾವಿರಾರು ರೈತರು ಮತ್ತು ಬಡ ಕೂಲಿ ಕಾರ್ಮಿಕರು ಮಹಾತ್ಮನಿಗೆ ನೈತಿಕ ಬೆಂಬಲ ನೀಡಿ, ಅಂದಿನ ಬಿಹಾರದ ಗವರ್ನರ್ ಮತ್ತು ಜಿಲ್ಲಾ ನ್ಯಾಯಾಧೀಶನ ದೇಹದಲ್ಲಿ ಬೆವರು ಹರಿಯುವಂತೆ ಮಾಡಿದ್ದರು

ಶತಮಾನದ ಹಿಂದೆ ಬ್ಯಾರಿಸ್ಟರ್ ಪದವಿ ಪಡೆದು. ಕಾನೂನು ಸಲಹೆಗಾರನಾಗಿ ದುಡಿದು ಹಣ ಸಂಪಾದಿಸಬೇಕಿದ್ದ ವ್ಯಕ್ತಿಯೊಬ್ಬ ಹೀಗೆ ಭಾರತದ ಹಳ್ಳಿ, ಹಳ್ಳಿ ತಿರುಗಿ ಅವರ ನೋವಿನ ಕಥನಕ್ಕೆ ಸಾಕ್ಷಿಯಾದ ಕಥನ ಅಕ್ಷರಕ್ಕೆ ನಿಲುಕುವ ಸಂಗತಿಯಲ್ಲ. ಗಾಂಧೀಜಿ ಮತ್ತು ಅವರ ಹೋರಾಟ ಕುರಿತಂತೆ ಕೂದಲು ಸೀಳುವ ಅನಿಷ್ಠ ಕ್ರಿಯೆಗೆ ಈಗಲಾದರೂ ನಾವು ವಿದಾಯ ಹೇಳಬೇಕಿದೆ.
ಇದರ ಜೊತೆ ಜೊತೆಯಲ್ಲಿ ಇಂತಹ ಹೋರಾಟದ ಮೂಲಕ ಆ ಮಹಾತ್ಮ ಭಾರತಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತರಬೇಕಿತ್ತೆ? ಎಂಬ ಅಸಮಾಧಾನದ ನೋವಿನ ಪ್ರಶ್ನೆ ಇಂದಿನ ದಿನಗಳಲ್ಲಿ ಎಲ್ಲರಲ್ಲೂ ಕಾಡುತ್ತಿದೆ.
ಈ ಕಾರಣದಿಂದಾಗಿ ಇದು ನಮ್ಮದಲ್ಲದ ಭಾರತ, ನಮ್ಮದಲ್ಲದ ಪಕ್ಷಗಳು ಮತ್ತು ನಮ್ಮದಲ್ಲದ ಚುನಾವಣೆ ಎಂಬ ಭಾವನೆ ಪ್ರಜ್ಞಾವಂತರ ಎದೆಯೊಳಗೆ ಬಲವಾಗಿ ಬೇರೂರುತ್ತಿದೆ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




