ಶ್ರೀನಗರ: ಜಮ್ಮುವಿನ ಕತ್ರಾದಲ್ಲಿರುವ ವೈಷ್ಣೋದೇವಿ ದೇವಾಲಯದಲ್ಲಿ ಕಾಲ್ತುಳಿತಕ್ಕೆ ಸಿಲುಕಿ 12 ಜನ ಬಲಿಯಾಗಿ, 13 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ದೇವಾಲಯದ ಬಳಿಯ ಮಾತಾ ವೈಷ್ಣೋದೇವಿ ಭವನದಲ್ಲಿ ಈ ಘಟನೆ ಸಂಭವಿಸಿದೆ.
ಸಾವಿನ ಕುರಿತ ಖಚಿತ ಅಂಕಿಅಂಶಗಳ ಕುರಿತು ಇನ್ನೂ ಸಿಕ್ಕಿಲ್ಲ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುವುದು. 13 ಗಾಯಾಳುಗಳನ್ನು ಕತ್ರಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೊತೆಗೆ, ಕಾಲ್ತುಳಿತಕ್ಕೆ ನಿಖರವಾದ ಕಾರಣ ತಿಳಿದಿಲ್ಲ ಎಂದಿದ್ದಾರೆ.
ವೈಷ್ಣೋದೇವಿ ಭವನದ ಬಳಿ ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ನೆರೆದ ಜನಸಮೂಹದಲ್ಲಿ ಗಲಾಟೆ ಸಂಭವಿಸಿದೆ. ಪರಸ್ಪರ ಮಾತಿಗೆ ಮಾತು ಬೆಳೆದು ತಳ್ಳಾಟ, ನೂಕಾಟಕ್ಕೆ ತಿರುಗಿದೆ. ಇದೇ ಕಾರಣಕ್ಕೆ ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ.




