ಬೆಂಗಳೂರು: ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ವೇಗಕ್ಕೆ ಮಿತಿ ಹಾಕಲು ಸ್ಪೀಡ್ ರೇಡಾರ್ ಗನ್ ಅಳವಡಿಸಲಾಗುವುದು ಎಂದು ರಾಜ್ಯ ಸಂಚಾರ ವಿಭಾಗದ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಎಕ್ಸ್ಪ್ರೆಸ್ ವೇ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ವೇಗಕ್ಕೆ ಮಿತಿ ಹಾಕಲು ಸ್ಪೀಡ್ ರೇಡಾರ್ ಗನ್ ಅಳವಡಿಸಲಾಗುವುದು ಎಂದು ಅವರು ಟ್ವಿಟ್ ಮಾಡಿದ್ದಾರೆ.
ಈಗಾಗಲೇ ಹೆದ್ದಾರಿಯಲ್ಲಿ ಪ್ರತಿ ಗಂಟೆಗೆ 100 ಕಿ.ಮೀ ವೇಗ, ಕೆಲವೆಡೆ 80 ಕಿ.ಮೀ ವೇಗದ ಮಿತಿ ವಿಧಿಸಿ ಫಲಕಗಳನ್ನು ಹಾಕಲಾಗಿದೆ. ಆದರೆ ಗಂಟೆಗೆ 120 ಕಿ.ಮೀಗೂ ಹೆಚ್ಚು ವೇಗದಲ್ಲಿ ವಾಹನಗಳು ಸಂಚರಿಸುತ್ತಿವೆ. ಇದರಿಂದಾಗಿ ಹೊರಬರುವ ಹಾಗೂ ಒಳಬರುವ ತಾಣಗಳಲ್ಲಿ ಅಪಘಾತಗಳು ಆಗುತ್ತಿವೆ. ಅಪಘಾತಗಳನ್ನು ತಡೆಯಲು ಗಂಟೆಗೆ 100 ಕಿ.ಮೀ ವೇಗ ಮಿತಿಯನ್ನು ಶಿಸ್ತಾಗಿ ಪಾಲಿಸಲು, ಹೆದ್ದಾರಿಯಲ್ಲಿ ಸ್ಪೀಡ್ ರೇಡಾರ್ ಗನ್ ಮತ್ತು ವಾಹನದ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳ ಅಳವಡಿಕೆ ಮಾಡಲಾಗುತ್ತಿದೆ. 100 ಕಿ.ಮೀಗಿಂತಲೂ ಅಧಿಕ ವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಪ್ರಕರಣ ಬುಕ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.




