ಬೆಳಗಾವಿ: ಕರ್ನಾಟಕದಲ್ಲಿನ ರಾಜ್ಯ, ಕೇಂದ್ರ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ನೇಮಕಾತಿಯಲ್ಲಿ ಕಡ್ಡಾಯವಾಗಿ ಗ್ರೂಪ್ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ಖಾಸಗಿ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.
ಪರುಷತ್ ನ ಖಾಸಗಿ ಕಾರ್ಯಕಲಾಪದಲ್ಲಿ ವಿಧೇಯಕವನ್ನು ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಮಂಡಿಸಿದರು. ಮೀಸಲಾತಿ ನೀಡುವ ಕುರಿತು ಸಂವಿಧಾನಕ್ಕೆ ತಿದ್ದುಪಡಿ ತರುವ ವಿಧೇಯಕ ಮಂಡಿಸಿ ಸದನದ ಅನುಮತಿ ಕೋರಲಾಗಿತ್ತು. ಸಭಾಪತಿ ಬಸವರಾಜ ಹೊರಟ್ಟಿ ವಿಧೇಯಕವನ್ನು ಮತಕ್ಕೆ ಹಾಕಿದ್ದು, ಧ್ವನಿಮತದ ಮೂಲಕ ಒಪ್ಪಿಗೆ ನೀಡಲಾಯಿತು.
ಸಂವಿಧಾನ ತಿದ್ದುಪಡಿ: ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ. 15 ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.4 ರಿಂದ ಶೇ.7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದ್ದು, ಇದನ್ನು ಸಂವಿಧಾನದ ಶೆಡ್ಯೂಲ್ 9 ರಲ್ಲಿ ಸೇರ್ಪಡೆಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ನ ಟಿ.ಎ.ಶರವಣ ಅವರ ಪರವಾಗಿ ತಿಪ್ಪೇಸ್ವಾಮಿ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಈ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ವಿಧೇಯಕವನ್ನು ಮಂಡಿಸಿ ಒಪ್ಪಿಗೆ ಪಡೆಯಲಾಗುವುದು. ಆನಂತರ ಸಂಸತ್ತಿನಲ್ಲೂ ಈ ಸಂಬಂಧದ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಲು ನಮ್ಮ ಸರ್ಕಾರ ಪ್ರಯತ್ನ ಮಾಡಲಿದೆ. ಸಂಸತ್ತಿನ ಒಪ್ಪಿಗೆ ಪಡೆದ ಬಳಿಕ ಈ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿರುವುದನ್ನು ಶೆಡ್ಯೂಲ್ ಒಂಬತ್ತಕ್ಕೆ ಸೇರ್ಪಡೆಗೊಳಿಸಿಲಾಗುವುದು. ಈ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆಗಳನ್ನು ಸರ್ಕಾರ ಮಾಡುತ್ತಿದೆಯೆಂದು ಅವರು ಭರವಸೆ ನೀಡಿದರು



