ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನೇಮಕ ಅಕ್ರಮದ ಬಗ್ಗೆ ತನಿಖೆ ನಡೆಸಲು ನೇಮಿಸಿದ್ದ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ಆಯೋಗದ ಶಿಫಾರಸುಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪಿಎಸ್ಐ ನೇಮಕ ಹಗರಣದ ತನಿಖೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಮತ್ತೊಂದು ತನಿಖೆ ನಡೆಸಲು ಶಿಫಾರಸ್ಸು ಮಾಡಲಾಗಿದೆ. ಅದರಂತೆ ಎಸ್ಐಟಿ ತನಿಖೆ ನಡೆಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದರು.
ಪಿಎಸ್ಐ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದ ಕೆಲವರು ಸಮಿತಿ ನೀಡಿದ್ದ ಸಮನ್ಸ್ ಗೆ ಹಾಜರಾಗಿ ತಮ್ಮ ಹೇಳಿಕೆ ನೀಡಿಲ್ಲ. ಸಮಿತಿಯು 113 ಆರೋಪಿಗಳನ್ನು ಗುರುತಿಸಿದೆ. ಖಾಸಗಿ ವ್ಯಕ್ತಿಗಳು, ಮಧ್ಯವರ್ತಿಗಳು, ಸರ್ಕಾರಿ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾದ ಆರೋಪವಿದೆ. ಭ್ರಷ್ಟಾಚಾರ, ಕ್ರಿಮಿನಲ್ ಆರೋಪವೂ ಇದೆ. ಹೀಗಾಗಿ ಎಸ್ಐಟಿ ತನಿಖೆ ಸೂಕ್ತ ಎಂಬ ನಿರ್ಧಾರ ಮಾಡಲಾಯಿತು. ಸಿಐಡಿ ಕೂಡ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ 17 ಪ್ರಕರಣಗಳ ತನಿಖೆಯನ್ನು ನಡೆಸುತ್ತಿದೆ ಎಂದರು.




