ಎಸ್ಎಫ್ಐಗೆ ರಾಜಿನಾಮೆ ನೀಡಿದ ನಂತರ ನನ್ನ ವಿರುದ್ಧ ಅಪಪ್ರಚಾರ

2 years ago

ರಾಜಕೀಯ ಷಡ್ಯಂತ್ರ 

ದಿನಾಂಕ: 03-09-2024 ರಂದು ಎಸ್ಎಫ್ಐ  ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಇತರೆ ಪದಾಧಿಕಾರಿಗಳು ಕೋಲಾರದಲ್ಲಿ ಸುದ್ದಿಗೋಷ್ಠಿ ನಡೆಸಿ ನನ್ನನ್ನು ಎಸ್ಎಫ್ಐ ನಿಂದ ತೆಗೆದು ಹಾಕಲಾಗಿದೆ ಎಂದು ಹೇಳಿರುತ್ತಾರೆ. ಇದು ನನ್ನ ವರ್ಚಸ್ಸು ಕುಂದಿಸುವ‌ ರಾಜಕೀಯ ಷಡ್ಯಂತ್ರ ಆಗಿದೆ.

ಕಳೆದ ಹದಿನೈದು ವರ್ಷಗಳಿಂದ ಎಸ್ಎಫ್ಐ ಸಂಘಟನೆ ಕಟ್ಟಿದ ನಾನು ನನ್ನ ವಿದ್ಯಾಭ್ಯಾಸ ಮುಗಿಸಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡು ವೈಯಕ್ತಿಕ ಬದುಕು ಕಟ್ಟಿಕೊಳ್ಳಲು ದಿನಾಂಕ 26-03-2023 ರಂದು ಬೆಂಗಳೂರಿನಲ್ಲಿ ನಡೆದ ಎಸ್ಎಫ್ಐ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಾನೇ ಸ್ವತಃ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಆ ಸಭೆಯಲ್ಲಿ ಪದಾಧಿಕಾರಿಗಳಿಂದ ಅನುಮೋದನೆ ಮಾಡಿಸಿ ಲಿಖಿತ ರೂಪದಲ್ಲಿ ನಿರ್ಣಯ ಮಾಡಿಸಿ ಸಂಘಟನೆಯಿಂದ ಬಿಡುಗಡೆಯಾಗಿದ್ದೇನೆ. ಮತ್ತು ಅದೇ ಸಭೆಯಲ್ಲಿ ನನ್ನ ಸ್ಥಾನಕ್ಕೆ ಬೇರೊಬ್ಬ ರಾಜ್ಯ ಕಾರ್ಯದರ್ಶಿಯ ಆಯ್ಕೆಯಾಗಿರುತ್ತಾರೆ. ನಾನು ಸಂಘಟನೆಯ ಜವಾಬ್ದಾರಿಗಳಿಂದ ಸಂಪೂರ್ಣವಾಗಿ ಬಿಡುಗಡೆ ಆಗಿದ್ದೇನೆ. ವಕೀಲ ವೃತ್ತಿ ಮಾಡಿಕೊಂಡಿದ್ದೇನೆ. ಆದರೆ ನಾನು ಸಂಘಟನೆಯಿಂದ ಬಿಡುಗಡೆ ಆಗಿ ಒಂದುವರೆ ವರ್ಷ ಕಳೆದ ಮೇಲೆ ನಾನು ಯೂಥ್ ಕಾಂಗ್ರೆಸ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವುದರಿಂದ ಇದೀಗ ವಾಸುದೇವರೆಡ್ಡಿಯನ್ನು ಎಸ್ಎಫ್ಐ ನಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಪತ್ರಿಕಾಗೊಷ್ಠಿ ನಡೆಸಿರುವುದು ರಾಜಕೀಯ ಷಡ್ಯಂತ್ರದ ಭಾಗವಾಗಿದೆ. ನನ್ನನ್ನು ಉಚ್ಛಾಟನೆ ಮಾಡಲು ನಾನು ಎಸ್ಎಫ್ಐ ನಲ್ಲಿ ಯಾವ ಹುದ್ದೆಯಲ್ಲೂ ಇಲ್ಲ. ಮತ್ತೆ ಅದು ಹೇಗೆ ಉಚ್ಛಾಟನೆ ಮಾಡಲು ಸಾಧ್ಯ? ಇದು ಹಾಸ್ಯಾಸ್ಪದವಾಗಿದೆ.

ನಾನು ಎಸ್ಎಫ್ಐ ನಿಂದ ಬಿಡುಗಡೆಯಾದ ನಂತರ ಸಹ ಪ್ರಜಾಸತ್ತಾತ್ಮಕ ಚಳುವಳಿಯಲ್ಲಿ ಕೆಲಸ ಮಾಡಲು ಆಸಕ್ತಿ ವಹಿಸಿ ಪತ್ರ ಕೊಟ್ಟಿದ್ದೆ. ಆ ಬಗ್ಗೆ ಆರು ತಿಂಗಳಾದರು ಕನಿಷ್ಠ ಪ್ರತಿಕ್ರಿಯೆ ಇಲ್ಲ. ಕಾಯಬೇಕಾಗಿತ್ತು ಅನ್ನುವ ಹಾರಿಕೆಯ ಉತ್ತರ ಬಿಟ್ಟು ಯಾವ ಭರವಸೆಯೂ ಸಿಗಲಿಲ್ಲ. ಹದಿನೈದು ವರ್ಷಗಳಿಂದ ಜನರ ನಡುವೆ ಕೆಲಸ ಮಾಡಿ ಕೈ ಕಟ್ಟಿಕೊಂಡು ಮನೆಯಲ್ಲಿ ಕೂರಲು ನನಗೆ ಸಾಧ್ಯವಿರಲಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷದಲ್ಲಿ ಕಳೆದ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ನೇರವಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಅದು ನಮ್ಮ ರಾಜಕೀಯ ನಿಲುವುಗಳಿಗೆ ಬದ್ಧವಾಗಿ. ನಿಮ್ಮ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತು ನನ್ನ ಸೈದ್ಧಾಂತಿಕ ವಿಚಾರಗಳಿಗೆ ಹತ್ತಿರವಾಗಿರುವ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಈಗ ನಡೆಯುತ್ತಿರುವ ಯೂಥ್ ಕಾಂಗ್ರೆಸ್ ಚುನಾವಣೆಯಲ್ಲಿ ಕೋಲಾರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಇಡೀ ಜಿಲ್ಲೆಯ ಯುವಜನತೆಯಿಂದ ನನಗೆ ವ್ಯಕ್ತವಾಗುತ್ತಿರುವ ಬೆಂಬಲ ಕಂಡು ನನ್ನ ರಾಜಕೀಯ ಜೀವನದ ಬೆಳವಣಿಗೆಯಿಂದ ಕಂಗಾಲಾಗಿರುವ ಕೆಲವರು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಷಡ್ಯಂತ್ರದ ಭಾಗವಾಗಿ ರಾಜಕೀಯ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಯಾರೂ ನಂಬುವುದಿಲ್ಲ ಮತ್ತು ಕಳೆದ 15 ವರ್ಷಗಳಿಂದ ನನ್ನ ಹೋರಾಟವನ್ನು ಕಂಡಿರುವ ಜನರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತಿದೆ. ಜನರ ಆಶಿರ್ವಾದ ಇರುವುದರಿಂದ ನನ್ನ ಗೆಲುವನ್ನು  ಇಂತಹ ಅಪಪ್ರಚಾರಗಳಿಂದ ತಡೆಯಲು ಸಾಧ್ಯವಿಲ್ಲ.

ನಾನು ಕಳೆದ 15 ವರ್ಷಗಳಿಂದ ಎಸ್ಎಫ್ಐ ಸಂಘಟನೆಯಲ್ಲಿದ್ದು ತಳಮಟ್ಟದಿಂದ ವಿದ್ಯಾರ್ಥಿ ಚಳವಳಿ ಕಟ್ಟಲು ಶ್ರಮಿಸಿದ್ದೇನೆ. ಗ್ರಾಮ, ತಾಲೂಕು, ಜಿಲ್ಲಾ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ, ರಾಜ್ಯ ಕಾರ್ಯದರ್ಶಿಯಾಗಿ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ದಶಕದ ಅವಧಿಯಲ್ಲಿ ಬಲಿಷ್ಠವಾಗಿ ಜಿಲ್ಲೆ/ರಾಜ್ಯದಲ್ಲಿ ಎಸ್ಎಫ್ಐ ಸಂಘಟನೆ ಕಟ್ಟಿದ್ದೇನೆ. ಈ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಇದನ್ನು ಗಮನಿಸಿರುವ ವಿದ್ಯಾರ್ಥಿ-ಯುವಜನರಿಗೆ ನನ್ನ ಬಗ್ಗೆ ಅಪಾರ ಗೌರವವಿದೆ. ಇದನ್ನು ಹಾಳು ಮಾಡುವ ಉದ್ದೇಶದಿಂದ ಸುಳ್ಳು ಭ್ರಷ್ಟಾಚಾರ ಆರೋಪಗಳನ್ನು ಹೊರಿಸಿದ್ದಾರೆ ಅಷ್ಟೇ. ನಾನು ಯಾವುದೇ ಹಣಕಾಸು ಭ್ರಷ್ಟಾಚಾರ ನಡೆಸಿಲ್ಲ. ನಡೆಸಿದ್ದರೆ ಸಾಕ್ಷಿ ಸಮೇತ ಸಾಬೀತು ಪಡಿಸಿದರೆ ನಾನು ಸಾರ್ವಜನಿಕ ಜೀವನದಲ್ಲಿ ಮುಂದುವರೆಯುವುದಿಲ್ಲ.

ಇನ್ನೂ ನನ್ನ ಸ್ವಂತ ಹಣದಲ್ಲಿ ಸಂಘಟನೆ ಕಟ್ಟಿದ್ದೇನೆ, ಅನೇಕ ಕಾರ್ಯಕರ್ತರಿಗೆ ಸ್ಪಂದಿಸಿದ್ದೇನೆ. ಈ  ಬಗ್ಗೆ ನನ್ನನ್ನು ಹತ್ತಿರದಿಂದ ಕಂಡಿರುವವರಿಗೆ ಗೊತ್ತಿದೆ.

ನನ್ನ ಜೀವನವನ್ನು ಸಂಘಟನೆಗಾಗಿ ಮುಡಿಪಾಗಿಟ್ಟು ಅನೇಕ ತೊಂದರೆ, ಸವಾಲುಗಳನ್ನು ಎದುರಿಸಿದ್ದೇನೆ. ನನ್ನ ವಿದ್ಯಾಭ್ಯಾಸದ ಜೊತೆಯಲ್ಲಿ ಪ್ರಾಮಾಣಿಕ, ನಿಷ್ಠೆಯಿಂದ ವಿದ್ಯಾರ್ಥಿ ಚಳವಳಿ, ಸಂಘಟನೆ ಕಟ್ಟುತ್ತಿದ್ದೆ. ಇದನ್ನು ಸಹಿಸದ ಸಂಘಟನೆಯ ಒಳಗಡೆ ನನ್ನ ವಿರುದ್ಧ ಒಂದು ಗುಂಪು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡುತ್ತಿತ್ತು. ಅನೇಕ ಬಾರಿ ಮಾನಸಿಕ ಹಿಂಸೆ ನೀಡಿದ್ದಾರೆ ಹಾಗೂ ನನ್ನನ್ನು ಸಂಘಟನೆಯಲ್ಲಿ ಮುಕ್ತವಾಗಿ ಕೆಲಸ ಮಾಡಲು ಆಗದಂತೆ ಉಸಿರುಗಟ್ಟಿದ ವಾತಾವರಣ ನಿರ್ಮಾಣ ಮಾಡಲಾಗಿತ್ತು. ಇದೇ ತಂಡ ಈಗ ಮತ್ತೊಮ್ಮೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ನನ್ನ ಬೆಳವಣಿಗೆಯನ್ನು ಸಹಿಸದೆ ಹೂಡಿರುವ ಷಡ್ಯಂತ್ರ. ಇದಕ್ಕೆಲ್ಲ ಎದುರುವ ಜಾಯಮಾನ ನನ್ನದಲ್ಲ. ನಾನು ಮತ್ತೆ ಜನರ ಮಧ್ಯೆ ಸಕ್ರಿಯವಾಗಿ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಕ್ಕ ಉತ್ತರ ನೀಡುತ್ತೇನೆ.

ನಾನು ಸಂಘಟನೆಯಿಂದ ದೂರ ಇದ್ದರು ಆ ಸಂಘಟನೆಯ ಬಗ್ಗೆ ಅಪಾರ ಗೌರವವಿದೆ. ಸಂಘಟನೆಯ ಒಳಗೆ ನನ್ನ ವಿರುದ್ಧ ವಿನಾ ಕಾರಣ ದ್ವೇಷ ಕಾರುವ ಕೆಲ ವ್ಯಕ್ತಿಗಳ ಷಡ್ಯಂತ್ರ ಮಾಡಿ ನನ್ನನ್ನು ಸಂಘಟನೆಯಿಂದ ಹೊರ ಹೋಗುವಂತೆ ಮಾಡಿದ್ದಾರೆ. ಅಂತಹವರ ಮುಖವಾಡಗಳು ಶೀಘ್ರದಲ್ಲೇ ಕಳಚುವೆ.

ವಿನಾ ಕಾರಣ ವ್ಯಕ್ತಿಗತ ದ್ವೇಷ, ಗುಂಪುಗಾರಿಕೆ, ಹಿಂಬಾಲಕರನ್ನು ಸೃಷ್ಟಿಸಿಕೊಳ್ಳುವುದು, ಈ ಗುಂಪುಗಾರಿಕೆಯ ದೃಷ್ಟಿಕೋನದಿಂದ ರೂಪಿಸಿಕೊಂಡಿರುವ ಪೂರ್ವಾಗ್ರಹ ಪೀಡಿತ ಮನಸ್ಥಿತಿಗಳಿಂದ ಕಾರ್ಯಕರ್ತರ ಮೇಲೆ ಆರೋಪಗಳು ಸೃಷ್ಟಿಸಿ ಅದನ್ನೇ ದೊಡ್ಡದು ಮಾಡಿ ಇವನು/ಳು ಬೇರೆ ಗುಂಪಿನವರು ಎನ್ನುವ ಕಾರಣಕ್ಕೆ ಮುಗಿಬಿದ್ದು ವ್ಯವಸ್ಥಿತ ದಾಳಿ ನಡೆಸುವ ಅನಾಹುತಕಾರಿ ನಡೆಗಳಿಂದ  ಚಳುವಳಿಗೋಸ್ಕರ ಜೀವನ ಮುಡಿಪಾಗಿಟ್ಟು ಕೆಲಸ ಮಾಡಲು ಸಿದ್ಧರಿರುವ, ಪ್ರಾಮಾಣಿಕವಾಗಿ ಸಂಘಟನೆ ಕಟ್ಟುವವರನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕ್ರಾಂತಿಯ ಕನಸು ಹೊತ್ತು ಸಂಘಟನೆಗೆ ಬಂದು ಕುಟುಂಬವನ್ನು ಬಿಟ್ಟು, ವೈಯಕ್ತಿಕ ಬದುಕು ಎಂಬುದೇ ಇಲ್ಲದೆ ತ್ಯಾಗ ಮಾಡಿ ದುಡಿದ ನಂತರ ಏಕಾಏಕಿ ಒಂದು ದಿನ ನಾವು ಕಟ್ಟಿದ ಸಂಘಟನೆಯೇ ನಮ್ಮನ್ನು ತಬ್ಬಲಿ ಮಾಡಿದರೆ ಅಂತಹ ಕಾರ್ಯಕರ್ತನ ಸ್ಥಿತಿ ಹೇಗಿರುತ್ತೆ ಅಂತ ಅನುಭವಿಸಿದವರಿಗೆ ಮಾತ್ರ ಅರ್ಥವಾಗುವುದು.

ಈ ಕಾರಣಗಳಿಗಾಗಿ ಈಗಾಗಲೇ ಚಳುವಳಿ ಅನೇಕ ಕಾರ್ಯಕರ್ತರನ್ನು ಕಳೆದುಕೊಂಡಿದೆ. ಇವರಲ್ಲಿ ನಾನು ಒಬ್ಬ ಅಷ್ಟೇ… ನನ್ನಂತಹ ಅನೇಕ ಕಾರ್ಯಕರ್ತರು ಚಳುವಳಿಗಳಲ್ಲಿ ಬೆಳೆದು ಒಲ್ಲದ ಮನಸ್ಸಿನಿಂದಲೇ ಅನಿವಾರ್ಯವಾಗಿ ಬೇರೆ ಪಕ್ಷಗಳ ಕಡೆ ಹೋಗುವುದರ ಹಿಂದೆ ಇಂತಹ ಅನೇಕ  ಕೈವಾಡಗಳು ಇರುತ್ತವೆ.

ಇಂದು ನನ್ನ ವಿರುದ್ಧ ಅಪಪ್ರಚಾರ ನಡೆಸಿ ಸಂಭ್ರಮಿಸುತ್ತಿರುವ ನನ್ನ ದ್ವೇಷಿಗಳೇ ನೀವು ಭಾವಿಸಿರಬಹುದು. ನನ್ನನ್ನು ನೀವು ಡಿಸ್ಟರ್ಬ್ ಮಾಡಿದ್ದೇವೆ ಅಂತ ಅಂದು ನಿಮ್ಮ ಭ್ರಮೆ ಅಷ್ಟೆ… ಇಂತಹ ನಯವಂಚನೆಗಳ ವಿರುದ್ಧ ಹೋರಾಟ ನನಗೆ ಹೊಸದಲ್ಲ. ಇನ್ನೇನು ನಿಮ್ಮಿಂದ ನಿರೀಕ್ಷಿಸಲು ಸಾಧ್ಯ? ಇದರಿಂದ ನಿಮಗೆ ತಾತ್ಕಾಲಿಕ ವೈಯಕ್ತಿಕ ಸಂತೋಷ ಸಿಕ್ಕಿರಬಹುದು ಅಷ್ಟೇ. ಅದು ಶಾಶ್ವತವಲ್ಲ… ಜನರಿಗಾಗಿ, ಜನರ ನಡುವೆ ಕೆಲಸ ಮಾಡುವುದು ಅಷ್ಟೇ ನನ್ನ ಗುರಿ. ಇದಕ್ಕೆ ಇದೀಗ ಸಂಘಟನೆಯ ಗಡಿ ಸಹ ಇಲ್ಲ. ಈಗ ನಾನು ಇನ್ನೂ ಹೆಚ್ಚು ಮುಕ್ತವಾಗಿ ಜನರ ನಡುವೆ ಕೆಲಸ ಮಾಡಲಿದ್ದೇನೆ.

ಇಷ್ಟು ವರ್ಷಗಳ ನಂತರ ಹೊಳೆದಿದ್ದು… ಮುಕ್ತರಾಗೋದು ಬೇರೆ, ಸ್ವಾತಂತ್ರ್ಯರಾಗೋದೇ ಬೇರೆ! ಸ್ವಾತಂತ್ರ್ಯ ಸಿಕ್ಕಿದೆ ಮುಕ್ತರಾಗೋಣ.

“ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.”

ನಾನಾ ವಿಧದ ಮುಖವಾಡಗಳ ಸಂತೆಯಲ್ಲಿ…… ಹೊರಗಡೆ ಬಂದವನು ಮಾತ್ರ ಕಣ್ಣಿಗೆ ಬೆತ್ತಲೆ!! ಅಲ್ಲೇ ಉಳಿದು ಮುಖವಾಡ ಧರಿಸಿ ಬದುಕುವವರಿಗಿಂತ ಮುಕ್ತವಾಗಿ ಬಹಿರಂಗವಾದವರೆ ಉತ್ತಮ. ಮುಖವಾಡ ತೊಟ್ಟು ನಾಟಕೀಯವಾಗಿ ಬದುಕುತ್ತಿರುವವರು ವೈಯಕ್ತಿಕ ಸಂಕಟ ತೋಡಿಕೊಂಡಿದ್ದೀರಿ ಅಷ್ಟೇ.

ನನ್ನ ರಾಜಕೀಯ ನಿಲುವು ನಿಮಗೆ ಇಷ್ಟವಾಗದಿದ್ದರೆ ರಾಜಕೀಯವಾಗಿ ಎದುರಿಸಿ. ವೈಯಕ್ತಿಕ ತೇಜೋವಧೆಯ, ದ್ವೇಷದ ನಂಜು ಕಾರುವ ಮೂಲಕವಲ್ಲ.

ಜನರ ಪರ ಹೋರಾಟ ಮಾಡಲು ವಿಶಾಲ ಅವಕಾಶಗಳಿವೆ. ಬನ್ನಿ ಅಲ್ಲಿ ಮುಖಾಮುಖಿಯಾಗೋಣ. ನಮ್ಮ ಬದ್ಧತೆ, ನಮ್ಮ ತ್ಯಾಗಗಳನ್ನು ಜನತೆಗಾಗಿ ಕೆಲಸ ಮಾಡುವುದರಲ್ಲಿ ತೊಡಗಿಸೋಣ. ಈ ಕೆಲಸಕ್ಕೆ ಬಾರದ ವೈಯಕ್ತಿಕ ತೇಜೋವಧೆಗಳಲ್ಲಿ ಏನಿದೆ?

ಕಟ್ಟುವುದು ಕಠಿಣ ಹಾಳು ಮಾಡುವುದು ಸುಲಭ…! ನಿಮ್ಮದು ಸುಲಭದ ಕೆಲಸವೇ ಹೊರತು.. ಇದು ನಿಮ್ಮ ಸಾಧನೆಯಲ್ಲ.

– ವಾಸುದೇವರೆಡ್ಡಿ.ಕೆ, ಯೂಥ್ ಕಾಂಗ್ರೆಸ್ ಚುನಾವಣೆಯಲ್ಲಿ ಕೋಲಾರ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

Leave a Reply