ಬೆಂಗಳೂರು: ನಗರದ 10ಕ್ಕೂ ಹೆಚ್ಚು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ( ಐಟಿ) ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ತೆರಿಗೆ ವಂಚನೆಯನ್ನು ಪತ್ತೆಹಚ್ಚಿದ್ದಾರೆ.
ತೆರಿಗೆ ವಂಚನೆ ಹಿನ್ನೆಲೆಯಲ್ಲಿ ನಗರದ 10 ಕಡೆಗಳಲ್ಲಿ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆಗಳ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡಗಳು ರಾತ್ರೋರಾತ್ರಿ ಚೆನ್ನೈ, ದೆಹಲಿಯಿಂದ ನಗರಕ್ಕೆ ಆಗಮಿಸಿ ದಾಳಿ ಕೈಗೊಂಡಿದ್ದಾರೆ.
ವಿಜಯನಗರ, ಬಿಟಿಎಂ ಲೇಔಟ್ , ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ತೆರಿಗೆ ವಂಚನೆ ಮಾಡಿರುವ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆ ಮೇಲೆ ದಾಳಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸದ್ಯ ಮನೆ ಹಾಗೂ ಕಚೇರಿಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ನಡೆಸಿದ್ದಾರೆ.
ಎಲ್ಲೆಲ್ಲಿ ದಾಳಿ?:
ವಿಜಯನಗರದ ಪ್ರಶಾಂತನಗರದ ವೈದ್ಯೆ ನಿವಾಸದ ಮೇಲೆ
ಮೇಕ್ರಿಸರ್ಕಲ್ ಬಳಿಯ ಗಜರಾಜ ಜುವೆಲರ್ಸ್ ಮೇಲೆ
ಶಾಂತಿನಗರದ ಉದ್ಯಮಿ ನವೀನ್ ಮನೆ ಮೇಲೂ ಐಟಿ ದಾಳಿ
ಎರಡು ಇನೋವಾ ಕಾರಿನಲ್ಲಿ ಬಂದಿರುವ ಎಂಟು ಐಟಿ ಅಧಿಕಾರಿಗಳು, ನವೀನ್ ಅವರ ಶಾಂತಿನಗರದಲ್ಲಿನ ದೊಡ್ಡ ಐಶಾರಾಮಿ ಬಂಗಲೆಯಲ್ಲಿ ದಾಖಲೆ ಪರಿಶೀಲನೆ
ಕಳೆದ ಸೆ. 27ರಂದು ಸಹ ಬೆಂಗಳೂರಿನ ವಿವಿದೆಡೆ ಐಟಿ ದಾಳಿಯಾಗಿತ್ತು. ಬೆಂಗಳೂರಿನ ಹುಳಿಮಾವು ಸಮೀಪದ ಆಪಸ್ ಅಪಾರ್ಟ್ ಮೆಂಟ್ ನ 14ನೇ ಮಹಡಿಯಲ್ಲಿರುವ ಉದ್ಯಮಿಯೊಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.




