ಬೆಂಗಳೂರು: ಬಿಎಂಟಿಸಿ ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಸಹಿ ಮಾಡಿ 16 ಕೋಟಿ ರೂ ವಂಚನೆ ನಡೆಸಿದ ಶಾಂತಿನಗರದ ಬಿಎಂಟಿಸಿ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಎಂಟಿಸಿಯ ಅಂದಿನ ಸಂಚಾರ ಮುಖ್ಯ ವ್ಯವಸ್ಥಾಪಕರಾಗಿದ್ದ ಶ್ರೀರಾಮ್ ಮುಲ್ಕವಾನ್ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರು ಆರೋಪಿತ ಅಧಿಕಾರಿಗಳ ಪತ್ತೆಗಾಗಿ ಶೋಧ ನಡೆಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಟಿ.ಹೆಚ್ ತಿಳಿಸಿದ್ದಾರೆ.
ಕಳೆದ 2020 ರಿಂದ 2023ರವರೆಗೆ ನಡೆದ ಅವ್ಯವಹಾರ ಇದಾಗಿದೆ. ಬಿಎಂಟಿಸಿ ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಳು ಅಧಿಕಾರಿಗಳು ಬಿಎಂಟಿಸಿ ಭದ್ರತೆ ಹಾಗೂ ಜಾಗೃತದಳ ನಿರ್ದೇಶಕ ಅರುಣ್ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರ ಹೆಸರಿನಲ್ಲಿ ಸಹಿ ಇರುವ ಕಡತವನ್ನು ಕಲರ್ ಜೆರಾಕ್ಸ್ ಮಾಡಿ ಅದರಲ್ಲಿ ನಕಲಿ ಸಹಿ ಹಾಕಿ ಸುಮಾರು 16 ಕೋಟಿವರೆಗೂ ವಂಚಿಸಿರುವುದಾಗಿ ಆಪಾದಿಸಿ ಬಿಎಂಟಿಸಿಯ ವಿಚಕ್ಷಣಾ ದಳದ ಅಧಿಕಾರಿಗಳು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಅಕ್ರಮ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಏಳು ಜನರನ್ನು ಕಮರ್ಷಿಯಲ್ ವಿಭಾಗದಿಂದ ಬೇರೆಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ. ಮೊದಲ ಆರೋಪಿ ಶ್ರೀ ರಾಮ್ ಮುಲ್ಕಾವನ್ ( ಅಂದಿನ ) ಮುಖ್ಯ ಸಂಚಾರ ವ್ಯವಸ್ಥಾಪಕ) ಎರಡನೇ ಆರೋಪಿ ಶ್ಯಾಮಲಾ. ಎಸ್. ಮದ್ದೋಡಿ, (ವಿಭಾಗೀಯ ಸಂಚಾರ ಅಧಿಕಾರಿ) ಮೂರನೇ ಆರೋಪಿ ಮಮತಾ. ಬಿ.ಕೆ. (ಸಹಾಯಕ ಸಂಚಾರ ವ್ಯವಸ್ಥಾಪಕ), 4 ನೇ ಆರೋಪಿ ಅನಿತಾ.ಟಿ , (ಸಹಾಯಕ ಸಂಚಾರ ಅಧೀಕ್ಷಕಿ), ಐದನೇ ಆರೋಪಿ ಗುಣಶೀಲ, (ಸಹಾಯಕ ಸಂಚಾರ ನಿರೀಕ್ಷಕಿ) ಆರನೇ ಆರೋಪಿ ವೆಂಕಟೇಶ್. ಆರ್, (ಕಿರಿಯ ಸಹಾಯಕ)7 ನೇ ಆರೋಪಿ ಪ್ರಕಾಶ್ ಕೊಪ್ಪಳ, (ಕಿರಿಯ ಸಹಾಯಕ)ಯಾಗಿದ್ದು ಇವರೆಲ್ಲರೂ ತಲೆಮರೆಸಿಕೊಂಡಿದ್ದಾರೆ.
ಹಿಂದೆ ಬಿಎಂಟಿಸಿಯಲ್ಲಿ ಎಂಡಿಗಳಾಗಿದ್ದ ಶಿಖಾ, ರೇಜು ಮತ್ತು ಭದ್ರತಾ ಮತ್ತು ಜಾಗೃತದಳದ ನಿರ್ದೇಶಕ ಅರುಣ್. ಕೆ ಸಹಿಯನ್ನು ಪೋರ್ಜರಿ ಮಾಡಿದ್ದಾರೆ. ಒಂದು ಕಡತದಲ್ಲಿ 10 ಕೋಟಿ 50 ಲಕ್ಷ ಹಾಗೂ ಮತ್ತೊಂದು ಕಡತದಲ್ಲಿ 6 ಕೋಟಿ 91 ಲಕ್ಷ ಹಾಗೂ 21 ಲಕ್ಷದ 64 ಸಾವಿರ, 1 ಲಕ್ಷದ 5 ಸಾವಿರ ಹೀಗೆ ಒಟ್ಟು ಸುಮಾರು 17 ಕೋಟಿ 64 ಲಕ್ಷ ರುಪಾಯಿ ಸಂಸ್ಥೆಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಕ್ರಮದ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ತನಿಖೆಗೆ ಆದೇಶಿಸಿದ್ದರು. ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಅಲ್ಲಲ್ಲಿ ಅಕ್ರಮ ನಡೆಯುತ್ತಲೆ ಇತ್ತು. ಅಧಿಕಾರಿಗಳು ಗೂಗಲ್ಪೇ, ಫೋನ್ಪೇ ಮೂಲಕ 4-5 ಲಕ್ಷ ರೂ. ಲಂಚ ತೆಗೆದುಕೊಂಡಿರುವುದು ಸಾಬೀತಾಗಿದೆ.
ಕೊರೊನಾ ಲಾಕ್ಡೌನ್ ವೇಳೆ ವಿನಾಯಿತಿ ನೀಡುವ ಸಂಬಂಧ ಪರವಾನಗಿ ಶುಲ್ಕ ಮನ್ನಾ ಮಾಡಬಹುದು ಎಂದು ಹೇಳಿ ಪತ್ರ ಬರೆದು ನಕಲಿ ಸಹಿ ಮಾಡಿ 21 ಲಕ್ಷ ವಂಚಿಸಿದ್ದರು. ಅಲ್ಲದೆ, ಬಿಎಂಟಿಸಿ ಹಿರಿಯ ಅಧಿಕಾರಿಗಳು ಕಡತಗಳಿಗೆ ಅನುಮೋದಿಸಿದ ಸಹಿಗಳನ್ನು ಕಲರ್ ಜೆರಾಕ್ಸ್ ಮಾಡಿ ಸಂಸ್ಥೆಗೆ 16 ಕೋಟಿವರೆಗೂ ವಂಚಿಸಿದ್ದರು.
ಅವ್ಯವಹಾರ ಎಸಗಿರುವುದು ಗೊತ್ತಾಗುತ್ತಿದ್ದಂತೆ ಬಿಎಂಟಿಸಿ ಅಧಿಕಾರಿಗಳು ದೂರು ನೀಡಿದ ಮೇರೆಗೆ ಆರೋಪಿಯನ್ನ ಬಂಧಿಸಲಾಗಿದೆ. ವಂಚನೆ ಪ್ರಕರಣದಲ್ಲಿ ಇನ್ನು ಆರು ಮಂದಿ ಭಾಗಿಯಾಗಿದ್ದು, ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಡಿಸಿಪಿ ತಿಳಿಸಿದರು.
ಪ್ರತ್ಯೇಕ ಪ್ರಕರಣ: ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಆರೋಪಿಗಳಿಗೆ ಜಾಮೀನು ಕೊಡಿಸಲು ಸರ್ಕಾರಿ ಕಚೇರಿಯ ಸೀಲ್ಗಳನ್ನು ನಕಲು ಮಾಡಿ ದಾಖಲಾತಿಗಳನ್ನು ಸೃಷ್ಟಿಸುತ್ತಿದ್ದ ಜಾಲವೊಂದನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪತ್ತೆ ಹಚ್ಚಿ ಓರ್ವ ಮಹಿಳೆ ಸೇರಿದಂತೆ 9 ಜನರನ್ನು ಬಂಧಿಸಿದ್ದರು.
ಪುಟ್ಟಸ್ವಾಮಿ, ನಸ್ರೀನ್, ರಾಜಣ್ಣ, ಮಂಜುನಾಥ್, ಆಂಜಿನಪ್ಪ, ಕುಮಾರ್, ಚಂದ್ರಗೌಡ, ಸೊಣ್ಣೆಗೌಡ ಮತ್ತು ಟಿ.ಎಂ.ರಾಜಪ್ಪ ಬಂಧಿತ ಆರೋಪಿಗಳು.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ನಕಲಿ ಸೀಲ್ಗಳು, ನಕಲಿ ಆಧಾರ್ ಕಾರ್ಡ್, ನಕಲಿ ಪ್ರಮಾಣಪತ್ರ, ನಕಲಿ ಲೆಟರ್ಗಳು, ನಕಲಿ ಪಹಣಿ ಪತ್ರಗಳು, ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ಲ್ಯಾಮಿನೇಷನ್ ಮಷಿನ್ ಮತ್ತು ಆಟೋರಿಕ್ಷಾ ವಶಕ್ಕೆ ಪಡೆದುಕೊಳ್ಳಲಾಗಿತ್ತು.




