ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಬದಲಾಗುತ್ತಿದ್ದಂತೆ ಆಡಳಿತ ಯಂತ್ರದಲ್ಲೂ ಮಹತ್ವದ ಬದಲಾವಣೆಗಳು ನಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಅದರಲ್ಲೂ ಪ್ರಮುಖವಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹುದ್ದೆ ಸೇರಿದಂತೆ ಆಯಕಟ್ಟಿನ ಪೊಲೀಸ್ ಹುದ್ದೆಗಳು ಬದಲಾಗಲಿವೆ.
ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಕಾಂಗ್ರೆಸ್ ಸರ್ಕಾರ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ಕೆಲ ಮಹತ್ವದ ಬದಲಾವಣೆಗಳು ಮಾಡಲಿದೆ ಎಂಬ ಸೂಚನೆ ಅರಿತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಕೇಂದ್ರ ಸರ್ಕಾರದ ಸೇವೆಗೆ ತೆರಳಿದ್ದಾರೆ.
ಕೇಂದ್ರ ಸರ್ಕಾರದಲ್ಲೂ ಕೆಲವು ಮಹತ್ವದ ಬದಲಾವಣೆಗಳಾಗಲಿವೆ. ಸಿಬಿಐ ನಿರ್ದೇಶಕರ ಹುದ್ದೆ ಖಾಲಿಯಾಗುತ್ತಿದ್ದು, ಇದಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಪ್ರವೀಣ್ ಸೂದ್ ಸೇರಿ ದೇಶದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳು ಹುದ್ದೆಯ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಅಂತಿಮವಾಗಿ ಸೂದ್ ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಸಿಬಿಐ ನಿರ್ದೇಶಕರ ಹುದ್ದೆಗೆ ನೇಮಕ ಕುರಿತಂತೆ
ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷ ನಾಯಕ ಅಧಿರ ರಂಜನ್ ಚೌಧರಿ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಸಭೆ ಸೇರಿ ಪ್ರವೀಣ್ ಸುತವರನ್ನು ನೇಮಕ ಮಾಡಲು ತೀರ್ಮಾನಿಸಿತು.
ಪ್ರವೀಣ ಸೂದ್ ಅವರು ಕರ್ನಾಟಕ ಕೇಡರ್‌ನ 1986-ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಮೂರು ವರ್ಷಗಳ ಹಿಂದೆ ರಾಜ್ಯದ ಡಿಜಿಪಿಯಾಗಿ ನೇಮಕಗೊಂಡರು. ಅವರು ಹಿಮಾಚಲ ಪ್ರದೇಶದ ಮತ್ತು ಐಐಟಿ-ದೆಹಲಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ರಾಜ್ಯ ಕೇಡರ್ ಐಪಿಎಸ್ ಅಧಿಕಾರಿಯಾದರು. ನಗರದಲ್ಲಿ ಡಿಸಿಪಿ, ಹೆಚ್ಚುವರಿ ಪೊಲೀಸ್ ಆಯುಕ್ತ(ಸಂಚಾರ)ಮೈಸೂರು,ಬೆಂಗಳೂರು ಪೊಲೀಸ್ ಆಯುಕ್ತರಾಗಿ ಸಿಐಡಿ ಡಿಜಿಪಿಯಾಗಿ ಸುಮಾರು 38 ವರ್ಷ ಗಳ ಸುಧೀರ್ಘ ಕಾಲ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.
ಅಲೋಕ್ ಮೋಹನ್: ಇಲ್ಲಿವರೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ್ ಸೂದ್ ಅವರು ಸಿಬಿಐ ನಿರ್ದೇಶಕರಾಗಿ ತೆರಳುತ್ತಿರುವ ಹಿನ್ನೆಲೆಯಲ್ಲಿ ಇವರಿಂದ ತೆರವಾದ ಸ್ಥಾನಕ್ಕೆ ಸೇವಾ ಹಿರಿತನದಲ್ಲಿ ಮೊದಲ ಸ್ಥಾನದಲ್ಲಿರುವ ಅಲೋಕ್ ಮೋಹನ್ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಸಂಬಂಧ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದ್ದು, ಬೆಂಗಳೂರು ಮಂಗಳೂರು, ಬೆಳಗಾವಿ, ಮೈಸೂರು, ಹುಬ್ಬಳ್ಳಿ – ಧಾರವಾಡ ಸೇರಿದಂತೆ ಮಹಾನಗರಗಳ ಪೊಲೀಸ್ ಆಯುಕ್ತರೂ ಕೂಡ ಬದಲಾವಣೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತರಾಗಿ ಹಿರಿಯ ಅಧಿಕಾರಿಗಳಾದ ದಯಾನಂದ್ ಹಿತೇಂದ್ರ ಅಥವಾ ಶರತ್ ಚಂದ್ರ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.




