ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಸೋಲಿನ ಬಗ್ಗೆ ಆತ್ಮಾವಲೋಕನಕ್ಕೆ ಮುಂದಾಗಿರುವ ಬಿಜೆಪಿ, ಎಲ್ಲಾ ಕ್ಷೇತ್ರಗಳ ಉಸ್ತುವಾರಿ ಹಾಗೂ ಪೇಜ್ ಪ್ರಮುಖ್ ನಾಯಕರಿಂದ ಸಮಗ್ರ ವರದಿ ನಿರೀಕ್ಷಿಸಿದೆ.
ಪಕ್ಷದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಕ್ಷಣವೇ ವರದಿ ತರಿಸಿಕೊಳ್ಳಲು ನಿರ್ಧರಿಸಲಾಗಿದ್ದು, ವರದಿ ಬಂದ ನಂತರ ಕ್ಷೇತ್ರವಾರು ಅವಲೋಕನ ಮಾಡಲು ತೀರ್ಮಾನಿಸಲಾಗಿದೆ.
ಇಂದು ನಡೆದ ಸಭೆಯಲ್ಲಿ ಉಸ್ತುವಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷದ ನಾಯಕರಾಗಿ ಹಾಗೂ ಉಪನಾಯಕರಾಗಿ ಮಾಜಿ ಸಚಿವ ಆರ್.ಅಶೋಕ್ ಮತ್ತು ವಿಧಾನ ಪರಿಷತ್ ಪ್ರತಿಪಕ್ಷ ನಾಯಕನಾಗಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ನೇಮಕ ಮಾಡಲು ಚರ್ಚೆ ನಡೆಯಿತು.
ಬುಧವಾರ ನೂತನವಾಗಿ ಆಯ್ಕೆಯಾಗಿರುವ ಶಾಸಕರ ಸಭೆ ನಡೆಯಲಿದ್ದು, ಪ್ರತಿಪಕ್ಷದ ನಾಯಕ ಮತ್ತು ಉಪನಾಯಕನ ಆಯ್ಕೆ ನಡೆಯಲಿದೆ.
ಸಭೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಶೀಘ್ರದಲ್ಲಿ ರಾಜ್ಯ ಮಟ್ಟದಲ್ಲಿ ಹಾಗೂ ಕ್ಷೇತ್ರವಾರು ಪರಾಮರ್ಶೆ ಸಭೆಗಳನ್ನು ನಡೆಸಲಿದ್ದೇವೆ. ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳ ಕ್ಷೇತ್ರವಾರು ಸಭೆಯನ್ನು ನಡೆಸಿ ಸೋಲಿನ ಪರಾಮರ್ಶೆ ಮಾಡಲಾಗುವುದು ಎಂದು ತಿಳಿಸಿದರು. ಕಾರ್ಯಕರ್ತರು ಸೋಲಿನ ಪರಾಮರ್ಶೆ ಜೊತೆಗೆ ಮುಂದಿನ ಸಾಲಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸನ್ನದ್ಧರಾಗಬೇಕು ಎಂದು ಮನವಿ ಮಾಡಿದರು.
ವಿಶ್ವವಂದ್ಯ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಅತಿ ಹೆಚ್ಚು ಸಂಸದರ ಬೆಂಬಲದೊಂದಿಗೆ ಪ್ರಧಾನಿಯಾಗಲು 2024ರ ಚುನಾವಣೆಯಲ್ಲಿ ಹಗಲಿರುಳಿನ್ನದೆ ದುಡಿಯಬೇಕು ಎಂದು ಮನವಿ ಮಾಡಿದರು.
ಶೀಘ್ರವೇ ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.



