ಇಮ್ಮಡಿ ಪುಲಿಕೇಶಿ ಮೂರ್ತಿ ಸ್ಥಾಪನೆ ಆಂದೋಲನಕ್ಕೆ ಸಿದ್ದು ಬೆಂಬಲ

4 years ago

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿಯ ಮೂರ್ತಿಯನ್ನು ಸ್ಥಾಪಿಸಬೇಕೆಂಬ ಆಂದೋಲನಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಮೂರ್ತಿಯನ್ನು ವಿಧಾನಸೌಧದ ಆವರಣದಲ್ಲಿಯೇ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ  ಅವರು, ನಾಡದೊರೆ ಇಮ್ಮಡಿ ಪುಲಿಕೇಶಿಯ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಬೇಕು. ಕನ್ನಡದ ಅಸ್ಮಿತೆಯಾಗಿರುವ ಕನ್ನಡಿಗ ದೊರೆಯ ಸಾಧನೆಯನ್ನು ವಿಸ್ತೃತವಾಗಿ ನಮ್ಮ ಪಠ್ಯಪುಸ್ತಕಗಳಲ್ಲಿ ಕೂಡಾ ಸೇರಿಸಬೇಕು ಎಂದಿದ್ದಾರೆ.

ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಹಾರಾಷ್ಟ್ರವೂ ಸೇರಿದಂತೆ ಕರ್ನಾಟಕವನ್ನು ಆಳಿದ ಇಮ್ಮಡಿ ಪುಲಿಕೇಶಿ ತನ್ನ ಚಿಂತನೆ ಮತ್ತು ಧೋರಣೆಗಳಲ್ಲಿ ಜನಪರ, ಜಾತ್ಯತೀತ ಮತ್ತು ಅಭಿವೃದ್ದಿಯ ಹರಿಕಾರನೂ ಆಗಿದ್ದ. ವಿಳಂಬವಾಗಿಯಾದರೂ ಅರ್ಹಗೌರವ ಸಲ್ಲಿಕೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave a Reply