ಬೆಂಗಳೂರು: ಸಚಿವ ಎಸ್.ಟಿ.ಸೋಮಶೇಖರ್, ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಅಭ್ಯರ್ಥಿ ಕೆ.ಜಿ.ಎಫ್ ಬಾಬು ಅವರ ಕುಟುಂಬದ ಮಹಿಳೆಯರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರು ನಮ್ಮ ಪಕ್ಷದ ಶಾಸಕಿ ಲಕ್ಷ್ಮೀ ಹೆಬ್ಬಾಕ್ಕರ್ ಅವರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವುದು ಬಿ.ಜೆ.ಪಿ. ಮಹಿಳಾ ವಿರೋಧಿ ನಿಲುವು ತಾಳಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಬೆಂಗಳೂರು ನಗರ ಜಿಲ್ಲಾ ಕೇಂದ್ರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಲ್ಮಾ ತಾಜ್ ಹೇಳಿದರು.
ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮೌರ್ಯ ವೃತ್ತ ಗಾಂಧಿ ಪ್ರತಿಮೆ ಬಳಿ ಬೆಂಗಳೂರು ನಗರ ಜಿಲ್ಲಾ ಕೇಂದ್ರ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತಾಡಿದ ಸಲ್ಮಾ ತಾಜ್, ಹಲವು ಬಿ.ಜೆ.ಪಿ. ನಾಯಕರು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಳೆ ತಾಯಿ, ತಂಗಿ, ಅಕ್ಕನಾಗಿ ಕುಟುಂಬವನ್ನು ನಿಬಾಯಿಸುತ್ತಾಳೆ. ಮಹಿಳೆಯನ್ನು ಗೌರವದಿಂದ ಕಾಣುವ ಮನೋಭಾವನೆಯನ್ನು ಬಿ.ಜೆ.ಪಿ.ಯವರು ಬೆಳಸಿಕೊಳ್ಳಬೇಕು ಎಂದರು.
ಮಹಿಳಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತೆಯರು ಭಾಗವಹಿಸಿದ್ದರು.



