ಬೆಂಗಳೂರು: ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದರೆ BJP Karnataka ಶಾಸಕ ಅಪ್ಪಚ್ಚು ರಂಜನ್ ರಾತೋರಾತ್ರಿ ಪೊಲೀಸ್ ಠಾಣೆಗೆ ಹೋಗಿ ಬಿಡಿಸಿಕೊಂಡು ಬಂದಿದ್ದು ಯಾಕೆ? ಕಾಂಗ್ರೆಸ್‌ನವನೆಂದು ಹೇಳಿಕೊಂಡರೆ ಮಾತ್ರ ಪೊಲೀಸರಿಂದ ಬಿಡಿಸ್ತೇನೆ ಎಂದು ಷರತ್ತು ಹಾಕಿ ಬಿಡುಗಡೆ ಮಾಡಿದಿರಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಎರಡು ದಿನಗಳ ಹಿಂದೆ ಕೊಡಗಿನ ನೆರೆ ಸಂತ್ರಸ್ತರ ಭೇಟಿಗೆ ತೆರಳಿದ ವೇಳೆ ಸಿದ್ದರಾಮಯ್ಯ ಅವರ ಮೇಲೆ ಕೆಲವು ದುಷ್ಕರ್ಮಿಗಳು ಮೊಟ್ಟೆ ಎಸೆದಿದ್ದರು. ಈ ಮೊಟ್ಟೆ ಎಸೆದ ವ್ಯಕ್ತಿ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ‘ಆಪರೇಷನ್ ಕಮಲ’ ಎಂದರೆ ಶಾಸಕರಿಗೆ ಮಾತ್ರ ಎಂದು ತಿಳಿದುಕೊಂಡಿದ್ದೆವು. ಈಗ ಬೀದಿ ಪುಂಡರ ‘ಆಪರೇಷನ್ ಕಮಲ’ ಕೂಡಾ ಬಿಜೆಪಿ ನಡೆಸುತ್ತದೆ ಎಂದು ಮಡಿಕೇರಿಯಲ್ಲಿ ಸಾಬೀತಾಗಿದೆ ಎಂದು ಕಾಲೆಳೆದಿದ್ದಾರೆ.
ಬಿಜೆಪಿಯ ಇಂತಹ ನಾಟಕಗಳೆಲ್ಲ ಹಳತಾಗಿದೆ. ಮೊಟ್ಟೆ ಎಸೆದವ ಕಾಂಗ್ರೆಸ್ ಪಕ್ಷದವನಾಗಿದ್ದರೆ ಅವನನ್ನು ಮೊದಲು ಜೈಲಿಗೆ ಕಳಿಸಿ. ನಿಮಗ್ಯಾಕೆ ಅವನ ಹಿತರಕ್ಷಣೆಯ ಉಸಾಬರಿ? ಎಂದು ಪ್ರಶ್ನಿಸಿದ್ದಾರೆ.



