ದೇವರ ಹೆಸರಿನಲ್ಲಿ ದಂಧೆ ನಡೆಸುವ ಧಾರ್ಮಿಕ ಮಾಫಿಯಾ: ಸಿದ್ದರಾಮಯ್ಯ

4 years ago

ಬೆಂಗಳೂರು: ರಾಜ್ಯ ಸರ್ಕಾರ ದೇವಸ್ಥಾನಗಳನ್ನು ಸ್ವತಂತ್ರಗೊಳಿಸಿ, ಸ್ವಾಯತ್ತಗೊಳಿಸುವುದಾಗಿ ಹೇಳುತ್ತಿರುವುದು ಅತ್ಯಂತ ಜನವಿರೋಧಿ ನಿಲುವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಸರ್ಕಾರದ ಉದ್ದೇಶಿತ ನಿರ್ಧಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿರುವ ಅವರು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯರಿಗೂ ಇರುವ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸಿ ಕೆಲವೇ ಕೆಲವು ಕೈಗಳಿಗೆ ನೀಡುವ ಹುನ್ನಾರವಾಗಿದೆ ಎಂದಿದ್ದಾರೆ.

ಬಸವಣ್ಣನವರ ನೇತೃತ್ವದ ಶರಣ ಚಳುವಳಿಯನ್ನು ದಮನ ಮಾಡಿದ ಶಕ್ತಿಗಳೇ ಇಂದು ಬಿಜೆಪಿ ಪಕ್ಷದಲ್ಲಿರುವ ಶೂದ್ರ ರಾಜಕಾರಣಿಗಳನ್ನು ಬಳಸಿಕೊಂಡು ದೇವಸ್ಥಾನಗಳನ್ನು ವಶಕ್ಕೆ ತೆಗೆದುಕೊಂಡು ಐದೂವರೆ ಕೋಟಿ ಕನ್ನಡಿಗ ಹಿಂದೂಗಳನ್ನು ಧಾರ್ಮಿಕ ಗುಲಾಮಗಿರಿಯ ಕಡೆಗೆ ತಳ್ಳಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.

ದೇವಸ್ಥಾನಗಳ ಹಣವನ್ನು ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ದೇವಸ್ಥಾನಗಳ ಒಂದು ರೂಪಾಯಿ ಹಣವನ್ನೂ ಮಸೀದಿ, ಚರ್ಚುಗಳಿಗೆ ಬಳಸಿಲ್ಲವೆಂದು ಮುಜರಾಯಿ ಇಲಾಖೆ ನನಗೆ ಉತ್ತರ ನೀಡಿದೆ ಎಂದಿದ್ದಾರೆ.

ಹಿಂದೂ ಮತ್ತು ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರ ವರ್ಷಾಸನ ಮತ್ತು ತಸ್ತೀಕ್ ನೀಡುತ್ತಿರುವುದು ದೇವಸ್ಥಾನಗಳ ಆದಾಯವಲ್ಲ. ಅದು ಸರ್ಕಾರದ ಹಣ. ರಾಜ್ಯದಲ್ಲಿರುವ 30,663 ಹಿಂದೂ ಮತ್ತು ಹಿಂದೂಯೇತರ ಪೂಜಾ ಸ್ಥಳಗಳಿಗೆ ವರ್ಷದಲ್ಲಿ ತಸ್ತೀಕ್ ಮತ್ತು ವರ್ಷಾಸನಗಳ ರೂಪದಲ್ಲಿ ರೂ.150.92 ಕೋಟಿ ನೀಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ರಾಜ್ಯ ಸರ್ಕಾರ 875 ಹಿಂದೂಯೇತರ ಧಾರ್ಮಿಕ ಸಂಸ್ಥೆಗಳಿಗೆ ರೂ.4.20 ಕೋಟಿ ಹಾಗೂ ರೂ. 146.72 ಕೋಟಿ ಹಣವನ್ನು ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಈ ಹಣವೂ ದೇವಾಲಯಗಳ ಹಣವಲ್ಲ. ಇದು ಸರ್ಕಾರ ನೀಡುತ್ತಿರುವ ಪರಿಹಾರದ ಹಣ. ಬಿಜೆಪಿ ನಾಯಕರು ಮೊದಲು ಇದನ್ನು ತಿಳಿದುಕೊಳ್ಳಲಿ ಎಂದಿದ್ದಾರೆ.

ರಾಜ್ಯದಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿ ಒಟ್ಟಾರೆ 34,558 ದೇವಾಲಯಗಳಿವೆ. ಆದಾಯದ ಆಧಾರದಲ್ಲಿ ವಿಂಗಡಿಸಲಾಗಿರುವ ಈ ದೇವಾಲಯಗಳಲ್ಲಿ ಎ ಗುಂಪಿನಲ್ಲಿ 205, ಬಿ ಗುಂಪಿನಲ್ಲಿ 139 ಮತ್ತು ಸಿ ಗುಂಪಿನಲ್ಲಿ 34,214 ದೇವಸ್ಥಾನಗಳಿವೆ. ಕೆಲವು ಬಿಜೆಪಿ ನಾಯಕರ ಕಣ್ಣು ಇದರ ಮೇಲೆ ಬಿದ್ದಿದೆ ಎಂದಿದ್ದಾರೆ.

ಎ ಗುಂಪಿನ ದೇವಾಲಯಗಳ ಬಳಿ ರೂ.1,580 ಕೋಟಿ, ಬಿ ಗುಂಪಿನ ದೇವಾಲಯಗಳ ಬಳಿ ರೂ. 98.67 ಕೋಟಿ ಹಣವಿದೆ. ಅಂದಾಜು 1 ಲಕ್ಷ ಕೋಟಿ ರೂಪಾಯಿ ಬೆಲೆಯ ಭೂಮಿ, ಒಡವೆ, ವಸ್ತುಗಳಿವೆ. ಇದರ ಮೇಲೆ ದುಷ್ಟ ಸರ್ಕಾರದ ಕಣ್ಣು ಬಿದ್ದಿದೆ ಎಂದಿದ್ದಾರೆ.

ಒಂದು ವರ್ಗದ ದುಷ್ಟ ಕಣ್ಣು ಇದರ ಮೇಲೆ ಬಿದ್ದಿದೆ. ದೇವರ ಹೆಸರಿನಲ್ಲಿ ದಂಧೆ ನಡೆಸುವ ಧಾರ್ಮಿಕ ಮಾಫಿಯಾ ಇಂದು ಶೇ. 80 ರಷ್ಟು ಜನರಿರುವ ಹಿಂದೂಗಳ ಆಸ್ತಿಯನ್ನು ಕಬಳಿಸಿ ಎರಡು- ಮೂರು ಪರ್ಸೆಂಟ್ ಜನರ ಅಧೀನಕ್ಕೆ ತೆಗೆದುಕೊಳ್ಳುವ ಭೀಕರ ಹುನ್ನಾರವಿದು ಎಂದಿದ್ದಾರೆ.

Leave a Reply