ಚಿಕ್ಕಮಗಳೂರು: ಕೊರೋನ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂವನ್ನು ಮುಂದುವರೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ, 15 ರಿಂದ 18ರ ವಯೋಮಾನದವರಿಗೆ ಕೊರೋನ ಲಸಿಕೆ ಅಭಿಯಾನಕ್ಕೆ ಇಂದು ಚಾಲನೆ ನೀಡಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಇನ್ನಷ್ಟು ದಿನ ರಾತ್ರಿ ಕರ್ಫ್ಯೂ ಮುಂದುವರೆಯಲಿದೆ ಎಂದರು.
ಸೋಂಕು ತಡೆಯುವ ನಿಟ್ಟಿನಲ್ಲಿ ಸರ್ಕಾರದ ಜೊತೆ ಸಾರ್ವಜನಿಕರು ಕೈ ಜೋಡಿಸಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಇಲ್ಲವಾದಲ್ಲಿ ಲಾಕ್ಡೌನ್ ಅನಿವಾರ್ಯವಾಗಬಹುದು ಎಂದರು.
ಸದ್ಯಕ್ಕೆ ಲಾಕ್ಡೌನ್ ಮಾಡುವ ಉದ್ದೇಶ ಇಲ್ಲ. ಅನಿವಾರ್ಯವಾದರೆ ಮಾಡಬೇಕಾಗಬಹುದು. ಜನರ ಜೀವ ಉಳಿಸಲು ಆರ್ಥಿಕಾಭಿವೃದ್ಧಿ ಮತ್ತು ಶಾಲಾ-ಕಾಲೇಜು ಬಂದ್ ಮಾಡಬೇಕಾಗಬಹುದು. ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಜನ ಪಾಲಿಸಬೇಕು. ಯಾವುದೇ ಕಾರಣಕ್ಕೂ ಕೋವಿಡ್ ನಿಯಮಗಳನ್ನು ಮುರಿಯದೆ ಅನುಸರಿಸಬೇಕು ಎಂದು ಕಿವಿಮಾತು ಹೇಳಿದರು.
ಕೊರೊನಾ ತಡೆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಸೂಕ್ತ ರೀತಿಯಲ್ಲಿ ದೊರೆಯದಿದ್ದಲ್ಲಿ ಲಾಕ್ಡೌನ್ ಅನಿವಾರ್ಯವಾಗಬಹುದು. ಈಗಾಗಲೇ ಮಾಸ್ಕ್ ಧರಿಸದೆ ಓಡಾಟ ಮಾಡುವುದು ಕಂಡು ಬರುತ್ತಿದೆ. ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಸಾವಿರಾರು ಜನ ಸೇರುತ್ತಿದ್ದಾರೆ. ಇದು ಸೋಂಕು ಹರಡಲು ಎಡೆಮಾಡಿಕೊಡಬಹುದು. ಈಗಾಗಲೇ ಕೋವಿಡ್ 2ನೇ ಅಲೆಯಲ್ಲಿ ಉಂಟಾದ ಸಾವು-ನೋವುಗಳು ನಮ್ಮ ನೆನಪಿನಲ್ಲಿವೆ. ಅದಕ್ಕೆ ಅವಕಾಶ ಕೊಡದಂತೆ ತಡೆಯುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಕರೆನೀಡಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.97ರಷ್ಟು ಮೊದಲ ಹಾಗೂ ಶೇ.81ರಷ್ಟು ಎರಡನೇ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಇದಕ್ಕಾಗಿ ಅಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಅಭಿನಂದಿಸಿದರು. ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್, ಜಿಲ್ಲಾಧಿಕಾರಿ ರಮೇಶ್, ಜಿಲ್ಲಾ ಆರೋಗ್ಯಾಧಿಕಾರಿ ಮೊದಲಾದವರು ಹಾಜರಿದ್ದರು.




