ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನನ್ನಿಂದ ಆಡಳಿತವನ್ನಾಗಲಿ, ಪೊಲೀಸಿಂಗ್ ಆಗಲಿ ಕಲಿಯಬೇಕಿಲ್ಲ ಎಂದು ಹೇಳಿದ್ದೀರಿ, ಧನ್ಯವಾದಗಳು. ನನ್ನಿಂದಾಗಲಿ, ನಿಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಅವರಿಂದಾಗಲಿ ನೀವು ಏನಾದರೂ ಕಲಿತಿದ್ದರೆ, ಕೇವಲ ಅಧಿಕಾರಕ್ಕಾಗಿ ಕೋಮುವಾದಿ ಪಕ್ಷದ ಜೊತೆ ಹೇಗೆ ಸೇರಿಕೊಳ್ಳುತ್ತಿದ್ದೀರಿ ಅಲ್ಲವೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಅನೈತಿಕ ಪೊಲೀಸ್ ಗಿರಿ ತಡೆಯಿರಿ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಸಿಎಂ ಬಸವರಾಜ ಬೊಮ್ಮಾಯಿ ನಿಮ್ಮಿಂದ ಏನನ್ನೂ ಕಲಿಯಬೇಕಿಲ್ಲ ಎಂದಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ನಾನೇ ಹಿಂದೂಗಳನ್ನು ಕೊಲ್ಲಿಸಿದೆ ಎಂದು ನಿಮ್ಮ ಪರಿವಾರದ ಕೂಗುಮಾರಿಗಳ ರೀತಿ ಆರೋಪ ಮಾಡಿದ್ದೀರಿ. ಇಂತಹ ಬೇಜವಾಬ್ದಾರಿ ಹೇಳಿಕೆಗಿಂತ ಮೊದಲು ನೀವು ಕೂತಿದ್ದ ಕುರ್ಚಿಯ ಘನತೆ ಬಗ್ಗೆ ಯೋಚಿಸಬೇಕಿತ್ತು. ಈ ಆರೋಪಕ್ಕಾಗಿ ನಾನು ಕಾನೂನುಕ್ರಮಕ್ಕೆ ಮುಂದಾಗಬಹುದು. ಕಿರಿಯರಿದ್ದೀರಿ ತಿದ್ದಿಕೊಳ್ಳಿ ಎಂದಷ್ಟೇ ಹೇಳಬಲ್ಲೆ ಎಂದಿದ್ದಾರೆ.
ನೀವು ಗೃಹಸಚಿವರಾಗಿದ್ದವರು, ಈಗ ಮುಖ್ಯಮಂತ್ರಿ ಆಗಿದ್ದೀರಿ. ನನ್ನ ಸರ್ಕಾರದ ಕಾಲದಲ್ಲಿ ನೂರಾರು ಹಿಂದೂಗಳ ಹತ್ಯೆಯಾಯಿತು ಎಂದು ಕಾಗಕ್ಕ-ಗುಬ್ಬಕ್ಕ ಕತೆ ಹೇಳುತ್ತಾ ಕೂರಬೇಡಿ, ನಾವೇ ಪ್ರಕಟಿಸಿದ ಅಧಿಕೃತ ಮಾಹಿತಿ ಕೊಡುತ್ತೇನೆ. ತನಿಖೆ ಮಾಡಿ ಜನರಿಗೆ ಸತ್ಯ ತಿಳಿಸಿ ಎಂದು ಸಲಹೆ ನೀಡಿದ್ದಾರೆ.
2013-18ರ ಅವಧಿಯಲ್ಲಿ ಕೋಮು ಸಂಘರ್ಷದಲ್ಲಿ ಹತ್ಯೆಗೀಡಾಗಿದ್ದ ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಎಸ್ ಡಿಪಿಐ/ಪಿಎಫ್ಐ ಸಂಘಟನೆಯವರು. ಹನ್ನೊಂದು ಮುಸ್ಲಿಮ್ ಮತ್ತು ಹತ್ತು ಹಿಂದುಗಳ ಹತ್ಯೆಯ ಆರೋಪಿಗಳು ಭಜರಂಗದಳ ಮತ್ತು ಹಿಂದು ಜಾಗರಣಾ ವೇದಿಕೆಗೆ ಸೇರಿದವರು ಎಂದು ಲೆಕ್ಕ ನೀಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ಯೆಗೀಡಾಗಿದ್ದಾರೆಂದು ಆರೋಪಿಸಿ ನಿಮ್ಮ ಪಕ್ಷದವರೇ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದ ಪಟ್ಟಿಯಲ್ಲಿದ್ದ ಜೀವಂತವಾಗಿ ಇರುವ ಅಶೋಕ್ ಪೂಜಾರಿ ಅವರ ಹೆಸರನ್ನು ಸೇರಿಸಿರುವ ನಿಮ್ಮ ಪಕ್ಷ ತನ್ನ ಬಣ್ಣ ತಾನೇ ಬಯಲು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದು ನೆನಪಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಹಿಂದೂಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ನೀವು ಹೊನ್ನಾವರದ ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ನಿಮ್ಮ ಪ್ರಭಾವ ಬೀರಿ ಶೀಘ್ರವಾಗಿ ಈ ಹತ್ಯೆಯ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷಿಸಿ. ಒಬ್ಬ ಹಿಂದು ಯುವಕನ ಸಾವಿಗೆ ನ್ಯಾಯಕೊಡಿಸಲು ಪ್ರಯತ್ನಿಸುವಿರಾ? ಎಂದು ಸವಾಲೆಸೆದಿದ್ದಾರೆ
ದಕ್ಷಿಣ ಕನ್ನಡದ ಪ್ರಕಾಶ್ ಕುಳಾಯಿ, ಕೇಶವ ಶೆಟ್ಟಿ, ಹರೀಶ್ ಪೂಜಾರಿ, ಬ್ರಹ್ಮಾವರದ ಪ್ರವೀಣ್ ಪೂಜಾರಿ, ಚಿಕ್ಕಮಗಳೂರಿನ ಕಲ್ಲಪ್ಪ ಹಂಡಿಬಾಗ್, ಮತ್ತು ಧನ್ಯಶ್ರೀ ಹಾಗೂ ವಿಜಯಪುರದ ದಾನಮ್ಮ ಹತ್ಯೆಯ ಆರೋಪಿಗಳನ್ನು ಕೂಡಾ ದಯವಿಟ್ಟು ಶಿಕ್ಷಿಸಿ. ಇವರೆಲ್ಲರೂ ಹಿಂದುಗಳು ಎನ್ನುವುದು ನೆನಪಲ್ಲಿರಲಿ ಎಂದು ಕಾಲೆಳೆದಿದ್ದಾರೆ.
ಮಂಗಳೂರಿನ ವಿನಾಯಕ ಬಾಳಿಗಾ ಅವರ ಹತ್ಯೆಯ ಪ್ರಮುಖ ಆರೋಪಿಯಾದ ನರೇಶ್ ಶೆಣೈಯ ಖಾಸಾ ದೋಸ್ತ್ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್. ಕಟ್ಟಾ ಹಿಂದೂ ಆಗಿದ್ದ ಬಾಳಿಗಾ ಅವರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಸೋದರಿಯರಿಗೆ ದಯವಿಟ್ಟು ನೀವಿಬ್ಬರೂ ಕೂಡಿ ನ್ಯಾಯ ಕೊಡಿಸಿ ಎಂದು ಸವಾಲೊಡ್ಡಿದ್ದಾರೆ.
ನೀವು ಮತ್ತು ನಿಮ್ಮ ಪಕ್ಷದ ನಾಯಕರು ಆಗಾಗ ಟಿಪ್ಪು ಸುಲ್ತಾನ ಹೆಸರಿನ ಜಪ ಮಾಡುವ ಮೊದಲು ನಿಮ್ಮದೇ ನಾಯಕರಾದ ಬಿ.ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್. ಅಶೋಕ್ ಸೇರಿದಂತೆ ನಿಮ್ಮದೇ ಪಕ್ಷದ ನಾಯಕರು ಟಿಪ್ಪು ವೇಷ ಹಾಕಿ ಖಡ್ಗಹಿಡಿದು ಕುಣಿದಾಡಿದ ಪೋಟೊಗಳನ್ನು ನೋಡಿ ಕಣ್ತುಂಬಿಕೊಳ್ಳಿ ಎಂದು ಈ ಹಿಂದೆ ಟಿಪ್ಪು ಸುಲ್ತಾನ್ ಜಯಂತಿ ವೇಳೆ ಬಿಜೆಪಿ ನಾಯಕರು ಭಾಗವಹಿಸಿರುವ ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.




