ಸುಳ್ಳು ಮತ್ತು BJP ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ದಿನೇಶ್ ಗುಂಡೂರಾವ್
BJPಯವರನ್ನೇ ನಾಚಿಸುವಷ್ಟು ಸುಳ್ಳು ಹೇಳುವ ಬೊಮ್ಮಾಯಿ ಎಂದ ಶಾಸಕ
ಬೆಂಗಳೂರು: ಸುಳ್ಳು ಮತ್ತು BJP ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಫಾಲ್ಸ್ ಪ್ರೊಪಾಗ್ಯಾಂಡಾ ಹಾಗೂ ಸುಳ್ಳು BJPಯ ಬಂಡವಾಳ. ಸದ್ಯದ ತೈಲಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳಲು ಕಟ್ಟುಕಥೆ ಕಟ್ಟುತ್ತಿರುವ BJP, ದೇಶದ ಜನರನ್ನು ಕುರಿಮಂದೆ ಎಂದು ಭಾವಿಸಿದಂತಿದೆ. ಆದರೆ ದೇಶದ ಜನ, BJPಯವರು ತಿಳಿದುಕೊಂಡಷ್ಟು ಮೂರ್ಖರಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಬಿಜೆಪಿ ಪ್ರತಿಕ್ರಿಯಿಸುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುತ್ತಿರುವ BJPಯವರು ಸತ್ಯ ಮುಚ್ಚಿಡುತ್ತಿದ್ದಾರೆ ಎಂದಿದ್ದಾರೆ.
ಬೊಮ್ಮಾಯಿಯವರೇ, ಕಳೆದ ಏಳೂವರೆ ವರ್ಷಗಳಲ್ಲಿ ಕರ್ನಾಟಕದಿಂದ ತೈಲದ ಮೇಲಿನ ಅಬಕಾರಿ ಸುಂಕವನ್ನು ನಿಮ್ಮ ಕೇಂದ್ರ ಸಂಗ್ರಹಿಸಿರುವುದೆಷ್ಟು? ಅಡಿಷನಲ್ ಎಕ್ಸೈಸ್ ಡ್ಯೂಟಿಯಿಂದ ನಮ್ಮ ರಾಜ್ಯಕ್ಕೆ ಬಂದಿರುವುದೆಷ್ಟು? ಎಂದು ಅವರು ಪ್ರಶ್ನಿಸಿದ್ದಾರೆ.
ನಿಯಮದ ಪ್ರಕಾರ ಕೇಂದ್ರ ಸಂಗ್ರಹಿಸುವ ಒಟ್ಟಾರೆ ಅಬಕಾರಿ ಸುಂಕದಲ್ಲಿ, ಶೇ42% ರಷ್ಟು (ಹೆಚ್ಚುವರಿ ಅಬಕಾರಿ ಸುಂಕ)ದ ರೂಪದಲ್ಲಿ ರಾಜ್ಯಗಳಿಗೆ ವಾಪಸ್ಸಾಗಬೇಕು. ಕೇಂದ್ರ 2014ರ ಮಾರ್ಚ್‌ನಿಂದ ಇಂದಿನವರೆಗೂ ಸಂಗ್ರಹಿಸಿರುವ ಮೊತ್ತವೇ 25 ಲಕ್ಷ ಕೋಟಿ. ಅದರಲ್ಲಿ ರಾಜ್ಯದ ಪಾಲು 1,37,000 ಕೋಟಿ. ಈ ಮೊತ್ತದಲ್ಲಿ ರಾಜ್ಯಕ್ಕೆ ಹಿಂದಿರುಗಿ ಬಂದಿದೆಷ್ಟು? ಎಂದು ಅವರು ಲೆಕ್ಕ ಕೇಳಿದ್ದಾರೆ.
ಕಳೆದ ಏಳೂವರೆ ವರ್ಷಗಳಲ್ಲಿ ಕರ್ನಾಟಕವೊಂದರಿಂದಲೇ 1,37,000 ಕೋಟಿ ಅಬಕಾರಿ ಸುಂಕವನ್ನು ಕೇಂದ್ರ ಸಂಗ್ರಹಿಸಿದೆ. ಈ ಮೊತ್ತದಲ್ಲಿ ಶೇ.42%ರಷ್ಟು ರಾಜ್ಯಕ್ಕೆ ವಾಪಾಸ್ಸಾಗಬೇಕು. ಶೇ.42% ಲೆಕ್ಕಾಚಾರದಂತೆ ರಾಜ್ಯಕ್ಕೆ 57,540 ಕೋಟಿ ಬರಬೇಕಿತ್ತು. ಆದರೆ ರಾಜ್ಯಕ್ಕೆ ಇಲ್ಲಿಯವರೆಗೂ ಸಿಕ್ಕಿರುವುದು 5,000 ಕೋಟಿ ಮಾತ್ರ. ಇನ್ನುಳಿದ ಹಣದ ಕಥೆ ಏನು? ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ರಾಜ್ಯಕ್ಕೆ ಬರಬೇಕಾಗಿದ್ದ 57,540 ಕೋಟಿ ಹೆಚ್ಚುವರಿ ಅಬಕಾರಿ ಸುಂಕದಲ್ಲಿ ಕೇವಲ 5000 ಕೋಟಿ ಸಂದಾಯವಾಗಿದೆ. 2019-20ರ ಸಾಲಿನಲ್ಲಿ 1,200 ಕೋಟಿ, 20-21ರಲ್ಲಿ 800 ಕೋಟಿ ಸಿಕ್ಕಿದೆ. ಕಳೆದ ಏಳೂವರೆ ವರ್ಷದಲ್ಲಿ ರಾಜ್ಯಕ್ಕೆ ಸಿಕ್ಕಿರುವುದು ಚಿಲ್ಲರೆ ಕಾಸಷ್ಟೆ. ಇನ್ನುಳಿದ ರಾಜ್ಯದ ಪಾಲು ಕೇಳಲು BJP ಯವರಿಗೆ ಧಮ್ ಇಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ.
ಕೇಂದ್ರ, ರಾಜ್ಯದ GST ಪಾಲಲ್ಲೂ ವಂಚಿಸಿದೆ. ಹೆಚ್ಚುವರಿ ಅಬಕಾರಿ ಸುಂಕದಲ್ಲೂ ವಂಚಿಸುತ್ತಿದೆ. ತಿಂಗಳಿಗೊಮ್ಮೆ ದೆಹಲಿಗೆ ಟ್ರಿಪ್ ಮಾಡುವ ಬೊಮ್ಮಾಯಿಯವರಿಗೆ ಕೇಂದ್ರದ ಬಳಿ ರಾಜ್ಯದ ನ್ಯಾಯಯುತ ಪಾಲು ಕೇಳಲು ಬೆನ್ನುಹುರಿಯೇ ಇಲ್ಲ. ಪಾಲು ಕೇಳಿ ಅಂದರೆ ಸಾಲ ಕೇಳಿ ಬರುವ ಬೊಮ್ಮಾಯಿಯವರು ಬೆಲೆಯೇರಿಕೆಯನ್ನು ಸಮರ್ಥಿಸಿಕೊಳ್ಳುವುದು ಈ ನಾಡಿನ ದುರಂತ ಎಂದಿದ್ದಾರೆ.
ಬೊಮ್ಮಾಯಿಯವರು ಕಳೆದ ಅಧಿವೇಶನದಲ್ಲಿ ಬೆಲೆಯೇರಿಕೆಯನ್ನು ನಾಚಿಕೆ ಬಿಟ್ಟು ಸಮರ್ಥಿಸಿಕೊಂಡಿದ್ದರು. ಬೆಲೆಯೇರಿಕೆಯ ನಡುವೆಯೂ ಸರ್ಕಾರ ಸಾಧನೆ ಮಾಡಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು. ಕಳೆದ 7 ತಿಂಗಳಿನಿಂದ ಕೇಂದ್ರ ಉಚಿತ ಅಕ್ಕಿ ಕೊಡುತ್ತಿದೆ ಎಂಬ ಅಂಶ ಪ್ರಸ್ತಾಪಿಸಿದ್ದರು. ಆದರೆ ಬೊಮ್ಮಾಯಿಯವರಿಗೆ ಆ ಉಚಿತ ಅಕ್ಕಿಯೊಳಗಿನ ಗುಟ್ಟು ಗೊತ್ತಿದೆಯೆ? ಎಂದು ಅವರು ಪ್ರಶ್ನಿಸಿದ್ದಾರೆ.
ಆಹಾರ ಭದ್ರತಾ ಕಾಯ್ದೆಯ ಪ್ರಕಾರ ಭಾರತ 30 ಮಿ.ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಮಾಡಿಕೊಳ್ಳಬೇಕು. ಆದರೆ ದೇಶದಲ್ಲಿ 100 ಮಿ.ಮೆಟ್ರಿಕ್ ಟನ್ ಬಫರ್ ಸ್ಟಾಕ್ ಇದೆ. ಹೀಗೆ ಹೆಚ್ಚುವರಿಯಾಗಿ ಸಂಗ್ರಹವಾದ ಅಕ್ಕಿ ಕೊಳೆತು ಹೋಗುತ್ತಿದ್ದರೆ, ಮತ್ತೊಂದು ಕಡೆ ಕೇಂದ್ರ ಎಥೆನಾಲ್ ಉತ್ಪಾದಿಸಲು ಈ ಅಕ್ಕಿಯನ್ನು KGಗೆ 18 ರೂಪಾಯಿಯಂತೆ ಮಾರಾಟ ಮಾಡುತ್ತಿದೆ ಎಂದಿದ್ದಾರೆ.
ಹೆಂಡ ಮಾಡಲು ಲಿಕ್ಕರ್ ಕಂಪನಿಗಳಿಗೆ ಅಕ್ಕಿ ಮಾರುವ ಕೇಂದ್ರಕ್ಕೆ ಆ ಅಕ್ಕಿಯನ್ನು ಬಡವರಿಗೆ ಕೊಡುವುದು ಕಷ್ಟವೇ? ಆಹಾರ ಭದ್ರತಾ ಕಾಯ್ದೆಯ ಪ್ರಕಾರ ದೇಶದ 92 ಕೋಟಿ ಜನರಿಗೆ ಉಚಿತ ಅಕ್ಕಿ ನೀಡಬೇಕು. ಆದರೆ ಸರ್ಕಾರ 2011ರ ಜನಗಣತಿ ಅನುಸಾರ 82 ಕೋಟಿ ಜನರಿಗೆ ಮಾತ್ರ ಅಕ್ಕಿ ವಿತರಿಸುತ್ತಿದೆ. ಉಳಿದ 12 ಕೋಟಿ ಜನರ ಅಕ್ಕಿ ಯಾರ ಉಡಿಗೆ? ಎಂದು ಅವರು ಪ್ರಶ್ನಿಸಿದ್ದಾರೆ.
ಮೂಲ BJPಯವರಲ್ಲದ ಬೊಮ್ಮಾಯಿಯವರು, ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ BJP ಸೇರಿ ಮನುಷತ್ವವನ್ನೂ ಕಳೆದುಕೊಂಡಿದ್ದಾರೆ. ಮೂಲ BJPಯವರನ್ನೇ ನಾಚಿಸುವಷ್ಟು ಸುಳ್ಳು ಹೇಳುವ ಬೊಮ್ಮಾಯಿಯವರು, ಬೆಲೆಯೇರಿಕೆಯ ನೈಜ ಕಾರಣ ಮುಚ್ಚಿಡುತ್ತಿದ್ದಾರೆ. ಇನ್ನಾದರೂ ಬೊಮ್ಮಾಯಿಯವರು ಮನುಷ್ಯ ಸಹಜ ಗುಣಗಳಿಂದ ವರ್ತಿಸಲಿ ಎಂದು ಅವರು ಆಶಿಸಿದ್ದಾರೆ.




