ಬಾದಾಮಿ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಕೋರಿದ ಸಿದ್ದರಾಮಯ್ಯ

5 years ago

ಬಾದಾಮಿಯ ನನ್ನ ಪ್ರೀತಿಯ ಎಲ್ಲ ಬಂಧುಗಳೇ,
ಕರ್ನಾಟಕದ ಸುವರ್ಣಯುಗದ ಶಿಲ್ಪಿ ಇಮ್ಮಡಿ ಪುಲಿಕೇಶಿ ಎಂಬ ಧೀರೋದ್ದಾತ ಕನ್ನಡದರಸನ ನಾಡು ಬಾದಾಮಿ. ಆ ಪರಂಪರೆಯ ವಾರಸುದಾರರಾದ ಈ ನೆಲದ ಜನ ಸತ್ಯ, ನ್ಯಾಯ, ಧರ್ಮಕ್ಕೆ ನಿಷ್ಠರಾದ ಸ್ವಾಭಿಮಾನಿಗಳು ಎಂಬ ಹೆಗ್ಗಳಿಕೆ ಇದೆ. ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸುಸಂದರ್ಭದಲ್ಲಿ ಬಾದಾಮಿಯ ನನ್ನ ಎಲ್ಲ ಬಂಧು-ಬಾಂಧವರಿಗೆ ತುಂಬು ಹೃದಯದ ಶುಭಕಾಮನೆಗಳು.
ತಮ್ಮ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಹಿರಿಯ ಚೇತನಗಳಿಗೂ ನಾಡಿನ ಸಮಸ್ತ ಜನತೆಯ ಪರವಾಗಿ ನನ್ನ ಗೌರವಪೂರ್ವಕ ನಮನಗಳು.
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಒಂಭತ್ತು ದಶಕಗಳ ದೀರ್ಘ ಇತಿಹಾಸ ಇದೆ.ಈ ಹೋರಾಟದಲ್ಲಿ ಉತ್ತರ ಕರ್ನಾಟಕ ಸ್ವಾತಂತ್ರ್ಯಪ್ರೇಮಿಗಳ ಕೊಡುಗೆಯೂ ದೊಡ್ಡ ಪ್ರಮಾಣದಲ್ಲಿದೆ. ಬ್ರಿಟಿಷರ ಗುಲಾಮಗಿರಿಯಿಂದ ದೇಶದ ಬಿಡಗಡೆಯಷ್ಟೇ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಏಕೈಕ ಉದ್ದೇಶವಾಗಿರಲಿಲ್ಲ. ಸ್ವತಂತ್ರ ಭಾರತವನ್ನು ಹೇಗೆ ಕಟ್ಟಬೇಕೆಂಬ ಬಗ್ಗೆಯೂ ಅವರು ಕನಸು ಕಂಡಿದ್ದರು. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಮಹಾತ್ಮ ಗಾಂಧೀಜಿಯವರು ಗ್ರಾಮ ಸ್ವರಾಜವನ್ನು ಸ್ಥಾಪಿಸಲು ಬಯಸಿದ್ದರು.
ಅದೇ ರೀತಿ ಸ್ವತಂತ್ರ ಭಾರತವನ್ನು ಸ್ವಾವಲಂಬಿಯಾಗಿಸಿ ಜಾತ್ಯತೀತತೆಯ ನೆಲೆಗಟ್ಟಿನಲ್ಲಿ ಬಲಪಡಿಸಬೇಕು ಎಂದು ಪಂಡಿತ ಜವಾಹರಲಾಲ ನೆಹರೂ ಹಂಬಲಿಸಿದ್ದರು. ಸ್ವತಂತ್ರ ಭಾರತದ ಮುನ್ನಡೆಗೆ ದಾರಿ ತೋರಿಸುವ ಸಂವಿಧಾನವನ್ನು ರಚಿಸಿದ ಬಾಬಾಸಾಹೇಬ್ ಅಂಬೇಡ್ಕರ್ ರಾಜಕೀಯ ಸ್ವಾತಂತ್ರ್ಯ ಜತೆಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡದೆ ಇದ್ದರೆ ಸಮಾನತೆಯ ತಳಹದಿಯ ಮೇಲೆ ಎಲ್ಲರಿಗೂ ಸಲ್ಲುವ ದೇಶ ನಿರ್ಮಾಣ ಸಾಧ್ಯ ಇಲ್ಲವೆಂದು ಹೇಳುತ್ತಿದ್ದರು. ಅವರ ಆಶಯಗಳ ಸಾಕಾರರೂಪವಾಗಿ ಸಂವಿಧಾನ ನಮ್ಮ ಮುಂದಿದೆ.
ಕೇವಲ ರಾಜಕೀಯ ಸ್ವಾತಂತ್ರ್ಯದಿಂದ ಇಂತಹದ್ದೊಂದು ಭಾರತವನ್ನು ಕಟ್ಟಲು ಸಾಧ್ಯ ಇಲ್ಲ. ಇದಕ್ಕಾಗಿ ನಾವು ಜನರಿಗೆ ರಾಜಕೀಯ ಸ್ವಾತಂತ್ರ್ಯದ ಜೊತೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನೂ ನೀಡಬೇಕಾಗುತ್ತದೆ. ಇದನ್ನೇ ಬಾಬಾಸಾಹೇಬ್ ಅಂಬೇಡ್ಕರ್ ಮತ್ತೆ ಮತ್ತೆ ಹೇಳಿದ್ದರು. ರಾಜಕೀಯ ಪ್ರಜಾಪ್ರಭುತ್ವದಷ್ಟೇ ಮಹತ್ವದ್ದು ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇಲ್ಲದ ಸಾಮಾಜಿಕ ಪ್ರಜಾಪ್ರಭುತ್ವ ಎನ್ನುವುದು ಅವರ ಆಶಯವಾಗಿತ್ತು.
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಪಕ್ಷದ ವರಿಷ್ಠರ ಮತ್ತು ಈ ಕ್ಷೇತ್ರದ ಜನತೆಯ ಅಪೇಕ್ಷೆ ಮೇರೆಗೆ ನಾನು ಇಲ್ಲಿ ಬಂದು ಸ್ಪರ್ಧಿಸಬೇಕಾಯಿತು.ದಕ್ಷಿಣ ಕರ್ನಾಟಕದಲ್ಲಿ ಹುಟ್ಟಿರುವ ನನಗೆ ಉತ್ತರಕರ್ನಾಟಕದ ಬಾದಾಮಿ ಸ್ವಲ್ಪದೂರದಊರು. ಭೌಗೋಳಿಕವಾದ ಈ ದೂರ ಎಷ್ಟೇ ಇದ್ದರೂ ಬಾದಾಮಿಜನ ನನ್ನ ಹೃದಯಕ್ಕೆ ಹತ್ತಿರದವರು. ಪ್ರೀತಿ-ವಿಶ್ವಾಸಕ್ಕೆಎಲ್ಲಿಯದೂರ? ನನ್ನ ಸ್ಪರ್ಧೆಯ ಹಿಂದೆ ಭೌಗೋಳಿಕ ದೂರವನ್ನು ನಿವಾರಿಸಿ ಉತ್ತರ ಮತ್ತು ದಕ್ಷಿಣ ಕರ್ನಾಟಕವನ್ನು ಇನ್ನಷ್ಟು ಸಮೀಪಕ್ಕೆ ತಂದು ಬೆಸೆಯುವ ಉದ್ದೇಶ ಕೂಡಾ ಇತ್ತು. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅದರಲ್ಲಿ ನಾನು ಯಶಸ್ಸು ಕಂಡಿದ್ದೇನೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.
ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಅಭಿವೃದ್ಧಿಯ ವಿಷಯದಲ್ಲಿ ರಾಜಧಾನಿಯಿಂದ ದೂರ ಇರುವ ಉತ್ತರ ಕರ್ನಾಟಕವನ್ನು ಸರ್ಕಾರಗಳು ನಿರ್ಲಕ್ಷಿಸಿದೆ ಎಂಬ ದೂರು ಇದೆ. ಈ ಪ್ರಾದೇಶಿಕ ತಾರತಮ್ಯ ನಿವಾರಣೆಗೆ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನಮಾಡಿತ್ತು. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷಸ್ಥಾನಮಾನ ನೀಡಲಾಯಿತು. ರಾಜ್ಯದಲ್ಲಿ ನಮ್ಮ ಸರ್ಕಾರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಹೆಚ್ಚಿನ ಅನುದಾನ ನೀಡಿ ಈ ಭಾಗದ ಭಾಗ್ಯದ ಬಾಗಿಲು ತೆರೆಯಿತು.
ಉತ್ತರ ಕರ್ನಾಟಕದ ಬಗೆಗಿನ ನನ್ನ ಕಾಳಜಿಯ ವಿಸ್ತರಣೆಯೇ ಬಾದಾಮಿಯಲ್ಲಿ ನನ್ನ ಸ್ಪರ್ಧೆಯ ನಿರ್ಧಾರ. ರಾಜ್ಯದಯಾವುದೇ ಭಾಗದಲ್ಲಿ ಹುಟ್ಟಿದರೂ ನಾವೆಲ್ಲಕನ್ನಡಿಗರು. ಈ ಸಂದೇಶವನ್ನು ನೀಡುವುದು ಕೂಡಾ ನಾನು ಇಲ್ಲಿ ಬಂದು ಸ್ಪರ್ಧಿಸುವ ಉದ್ದೇಶವಾಗಿತ್ತು.
ನಾನು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಮತ್ತೆ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡಲು ಅವಕಾಶ ಒದಗಿ ಬಂದದ್ದು ನನ್ನ ಪುಣ್ಯವೆಂದು ಭಾವಿಸಿದ್ದೇನೆ. ಇದೇ ವೇಳೆ ಹದಿಮೂರು ಮುಂಗಡಪತ್ರಗಳನ್ನೂ ರೂಪಿಸಿ ಮಂಡಿಸುವ ಅವಕಾಶವೂ ನನಗೆ ಒದಗಿಬಂದಿತ್ತು.
ನನ್ನ ಅಧಿಕಾರದ ಅವಧಿಯಲ್ಲಿ ಸಾಮಾನ್ಯ ಮನುಷ್ಯನನ್ನು ಕೇಂದ್ರವಾಗಿಟ್ಟುಕೊಂಡು ಅಭಿವೃದ್ದಿಯ ಮಾದರಿಯೊಂದನ್ನು ರೂಪಿಸಿದ್ದೆ. ಇದನ್ನು ಹಲವಾರು ಆರ್ಥಿಕ ಮತ್ತು ಸಾಮಾಜಿಕ ತಜ್ಞರು “ಕರ್ನಾಟಕ ಅಭಿವೃದ್ದಿ ಮಾದರಿ” ಎಂದು ಬಣ್ಣಿಸಿದ್ದರು.
ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯ ಲಭಿಸಬೇಕು…. ಬಡವ-ಬಲ್ಲಿದರೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಬೇಕು…… ಕೃಷಿ ಸಂಪತ್ತು ಬೆಳೆಯಬೇಕು…. ಉದ್ಯಮ ಕ್ಷೇತ್ರದಲ್ಲಿ ಪ್ರಗತಿಯಾಗಬೇಕು…. ದುಡಿಯುವ ಕೈಗಳಿಗೆ ಉದ್ಯೋಗ ಸಿಗಬೇಕು….. ಮೂಲಸೌಲಭ್ಯಗಳು ವೃದ್ಧಿಯಾಗಬೇಕು…. ನೆಮ್ಮದಿಯಿಂದ ಬದುಕುವಷ್ಟು ಆದಾಯ ಪ್ರತಿ ಕುಟುಂಬದ ಪಾಲಿಗಿರಬೇಕು…. ಸಂಪತ್ತು, ಅಧಿಕಾರ ಮತ್ತು ಅವಕಾಶ ಸರ್ವರಿಗೂ ಸಮದೃಷ್ಟಿಯಿಂದ ಹಂಚಿಕೆಯಾಗಬೇಕು- ಇದು ನನ್ನ ಕನಸಿನ ‘ಕರ್ನಾಟಕ ಅಭಿವೃದ್ದಿ ಮಾದರಿ.
ಈ ‘ಕರ್ನಾಟಕ ಅಭಿವೃದ್ದಿ ಮಾದರಿಯ ಫಲವಾಗಿಯೇ ನಮ್ಮ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗಿತ್ತು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಜೊತೆಯಲ್ಲಿ ಹೆಚ್ಚುವರಿ 25 ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವ ದೇಶದ ಮೊದಲ ಸರ್ಕಾರ ನಮ್ಮದು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ.
ಸಮಾಜದಕಟ್ಟಕಡೆಯ ಮನುಷ್ಯನೂ ಸೇರಿದಂತೆ ಜಾತಿ, ಮತ, ಪ್ರದೇಶದ ಭೇದವಿಲ್ಲದೆ, ಪ್ರತಿಯೊಬ್ಬ ಪ್ರಜೆಯೂ ಸರ್ಕಾರದ ಒಂದಲ್ಲ ಒಂದು ಯೋಜನೆಯ ಫಲಾನುಭವಿಗಳಗಬೇಕೆಂಬ ಉದ್ದೇಶದಿಂದ ನಮ್ಮ ಸರ್ಕಾರ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದೆ.
ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಅನಿಲಭಾಗ್ಯ, ಕೃಷಿಭಾಗ್ಯ, ಕೃಷಿಯಂತ್ರಧಾರೆ, ಪಶುಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ, ಆನ್ ಲೈನ್ ಮಾರುಕಟ್ಟೆ, 24 ಗಂಟೆ ವಿದ್ಯುತ್ ಪೂರೈಕೆ. ರೈತಬೆಳಕು, ರೈತಸೂರ್ಯ, ಮುಖ್ಯಮಂತ್ರಿಗಳ ಗ್ರಾಮವಿಕಾಸ, ಶುದ್ಧ ನೀರಿನಘಟಕ, ನಮ್ಮ ಹೊಲ, ನಮ್ಮರಸ್ತೆ, ಇಂದಿರಾಕ್ಯಾಂಟೀನ್, ಸವಿರುಚಿಕ್ಯಾಂಟೀನ್, ರೈತರಸಾಲಮನ್ನಾ, ಬಡ್ಡಿರಹಿತ ಸಾಲ, ಮೊದಲಾದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೆವು.
ಹಸಿವುಮುಕ್ತ ಕರ್ನಾಟಕ ನಿರ್ಮಾಣಗೊಳ್ಳುತ್ತಿತ್ತು, ಅಪೌಷ್ಠಿಕತೆಯ ದರ ಕಡಿಮೆಯಾಗಿತ್ತು, ಜನರ ಆರೋಗ್ಯ ಸುಧಾರಣೆಯಾಗಿತ್ತು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಾವು ಮೇಲಕ್ಕೇರುತ್ತಿದ್ದೆವು. ಅತಿವೃಷ್ಟಿ-ಅನಾವೃಷ್ಟಿಗಳನ್ನು ಸಮರ್ಥವಾಗಿ ಎದುರಿಸಿದ್ದೆವು, ನೆಲ-ಜಲ-ಭಾಷೆಯ ಹಿತಾಸಕ್ತಿಯನ್ನು ರಕ್ಷಿಸಿದ್ದೆವು.
ನೀರಾವರಿ ಯೋಜನೆಗಳಿಗೆ ದಾಖಲೆಯ ಅನುದಾನ, ರಸ್ತೆ ಸಂಪರ್ಕದ ವ್ಯಾಪಕ ಉನ್ನತೀಕರಣ, ಇಂಧನ ವಿಷಯದಲ್ಲಿ ಕ್ಷಮತೆ ಹಾಗೂ ಸ್ವಾವಲಂಬನೆ,ಉದ್ಯೋಗಖಾತರಿ ಮತ್ತು ಕುಡಿಯುವ ನೀರಿನ ಪೂರೈಕೆಯ ಯೋಜನೆಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಯ ಹೊಸಶಖೆ ಪ್ರಾರಂಭವಾಗಿತ್ತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಬಲೀಕರಣಕ್ಕಾಗಿ ವಿಶೇಷ ಉಪಯೋಜನೆಯನ್ನು ಅನುಷ್ಠಾನ ಹಾಗೂ ನಿರ್ಲಕ್ಷಕ್ಕೊಳಗಾದ ಸಮುದಾಯಗಳ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಕ್ರಾಂತಿಕಾರಿ ಕಾಯ್ದೆ ಕೂಡ ನಮ್ಮ ಸಾಧನೆ.
ಕರ್ನಾಟಕ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿತ್ತು ದುಡಿಯುವ ಕೈಗಳಿಗೆ ಉದ್ಯೋಗದ ಅವಕಾಶ ಹೆಚ್ಚಾಗಿತ್ತು. ಕರ್ನಾಟಕ ನವೋದ್ಯಮಗಳ ತವರಾಗಿತ್ತು..
ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಬಾಳು ನೀಡುವ ಸರ್ವೋದಯತತ್ವದ ಅಭಿವೃದ್ದಿ ಮಾದರಿ ನಮ್ಮದಾಗಿತ್ತು. ಇದನ್ನು ನಜನ ಹೆಮ್ಮೆಯಿಂದ‘ಕರ್ನಾಟಕ ಅಭಿವೃದ್ದಿ ಮಾದರಿ’ಎಂದು ಕೊಂಡಾಡುತ್ತಿದ್ದರು..
ಈ ಅಭಿವೃದ್ಧಿ ಮಾದರಿಗೆ ಸಾಮಾಜಿಕ ನ್ಯಾಯದಕನಸುಗಾರ ಬಸವಣ್ಣ, ಗ್ರಾಮ ಸ್ವರಾಜ್ಯದ ಹರಿಕಾರ ಮಹಾತ್ಮಗಾಂಧಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವದ ಹೋರಾಟಗಾರಡಾ ಬಿ. ಆರ್. ಅಂಬೇಡ್ಕರ್ ಮತ್ತಿತರ ಸಾಮಾಜಿಕ ಮತ್ತುರಾಜಕೀಯಚಿಂತಕರ ಆಶಯಗಳು ಪ್ರೇರಣೆ ನೀಡಿವೆ
ಅಭಿವೃದ್ದಿಯ ಪಥದಲ್ಲಿ ಶರವೇಗದಲ್ಲಿ ಮುಂದೋಡುತ್ತಿದ್ದ ನಮ್ಮ ರಾಜ್ಯ ಇತ್ತೀಚೆಗೆ ಕುಂಟುತ್ತಾ ಸಾಗುತ್ತಿದೆ ಎಂದು ಹೇಳಲು ವಿಷಾದವೆನಿಸುತ್ತದೆ. ಈ ಸಂದರ್ಭದಲ್ಲಿ ನಾನು ಇದನ್ನು ವಿವರವಾಗಿ ಪ್ರಸ್ತಾಪಿಸಲು ಹೋಗುವುದಿಲ್ಲ.
ನನ್ನ ಕನಸಿನ ‘ಕರ್ನಾಟಕ ಅಭಿವೃದ್ದಿ ಮಾದರಿ’ಯನ್ನು ಬಾದಾಮಿಯ ನನ್ನ ಕ್ಷೇತ್ರದಲ್ಲಿಯೂ ಅನುಷ್ಠಾನಗೊಳಿಸಲು ಕಳೆದ ಮೂರು ವರ್ಷಗಳಿಂದ ಪ್ರಯತ್ನ ಪಟ್ಟಿದ್ದೇನೆ. ಸುಮಾರು ಎರಡು ಸಾವಿರ ಕೋಟಿ ರೂಪಾಯಿಯ ಹಲವಾರು ಯೋಜನೆಗಳು ಇಲ್ಲಿ ಅನುಷ್ಠಾನಗೊಳ್ಳುತ್ತಿದೆ. ಕೆಲವು ಯೋಜನೆಗಳು ಈಗಾಗಲೇ ಪೂರ್ಣಗೊಂಡಿವೆ.
ಕುಡಿಯುವ ನೀರು ಪೂರೈಕೆ, ರಸ್ತೆ- ಸೇತುವೆ-ಶಾಲಾಕಟ್ಟಡ-ಬಸ್ ನಿಲ್ದಾಣ ನಿರ್ಮಾಣ, ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಏತನೀರಾವರಿ-ಬ್ಯಾರೇಜ್-ಕಾಲುವೆಗಳು, ಪ್ರವಾಸೋದ್ಯಮದ ಮೂಲಸೌಕರ್ಯಗಳು, ಸಮುದಾಯ ಭವನ, ಆಡಳಿತ ಕಚೇರಿಗಳು, ಎಪಿಎಂಸಿ ಕಟ್ಟಡ, ಜವಳಿ ಪಾರ್ಕ್…ಹೀಗೆ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿಯ ಹೊಸಶಖೆ ಪ್ರಾರಂಭವಾಗಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ, ಮುಂದುವರಿಯಲಿದೆ ಎಂಬ ಭರವಸೆಯನ್ನು ಈ ಸಂದರ್ಭದಲ್ಲಿ ನೀಡುತ್ತಿದ್ದೇನೆ.
ಸ್ವಾತಂತ್ರ್ಯ ಹೋರಾಟಗಾರರ ಎದುರಿಗಿದ್ದದ್ದು ಗುಲಾಮಗಿರಿಯಿಂದ ಬಿಡುಗಡೆಯ ಏಕೈಕ ಗುರಿ. ಆ ಹೋರಾಟದ ಕಣದಲ್ಲಿ ಶತ್ರು ರೂಪದಲ್ಲಿ ಎದುರಿಗಿದ್ದವರು ಬ್ರಿಟಿಷರು ಮಾತ್ರ. ಆದರೆ ಇಂದು ಆ ಶತ್ರುವಿನ ಜಾಗದಲ್ಲಿ ಬಡತನ, ಅನಕ್ಷರತೆ, ಅನಾರೋಗ್ಯ, ಜಾತೀಯತೆ, ಕೋಮುವಾದ, ಮೂಡನಂಬಿಕೆಗಳೆಂಬ ಸಾಮಾಜಿಕ ಪಿಡುಗುಗಳು ನಿಂತಿವೆ.
ಈ ಸಾಮಾಜಿಕ ಪಿಡುಗುಗಳ ವಿರುದ್ಧ ಎರಡನೆ ಸ್ವಾತಂತ್ರ್ಯಹೋರಾಟ ನಡೆಯಬೇಕಾದ ಕಾಲದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ನಮ್ಮ ಅಸ್ತ್ರವಾಗಿ ಬಳಕೆಯಾಗಬೇಕಾಗಿರುವುದು ವಿಶ್ವಮಾನ್ಯತೆ ಪಡೆದಿರುವ ನಮ್ಮ ಸಂವಿಧಾನ. ಸಂವಿಧಾನದ ಆಶಯಗಳು ಈಡೇರಿದಾಗ ನಮ್ಮ ಸ್ವಾತಂತ್ರ್ಯಹೋರಾಟಗಾರರು ಕಂಡ ಕನಸು ನನಸಾಗಲು ಸಾಧ್ಯ.
ಇತ್ತೀಚಿನ ದಿನಗಳಲ್ಲಿ ಕೋಮುವಾದ ಮತ್ತು ಜಾತಿವಾದವೂ ಸೇರಿದಂತೆ ಬಹುರೂಪಿ ಫ್ಯಾಸಿಸಂ ನಾಲ್ಕು ದಿಕ್ಕುಗಳಿಂದಲೂ ಆವರಿಸುತ್ತಿದೆ. ಜಾತಿ-ಧರ್ಮಗಳ ಭೇದವಿಲ್ಲದೆ ಇದು ಬೆಳೆಯುತ್ತಿರುವುದು ಕಳವಳಕಾರಿ ಬೆಳವಣಿಗೆ. ಧರ್ಮ ವೈಯಕ್ತಿಕವಾದುದು. ಅದನ್ನು ವ್ಯಕ್ತಿ, ಸಮುದಾಯ ಮತ್ತು ಕೋಮುಗಳ ನಡುವೆ ದ್ವೇಷ ಸೃಷ್ಟಿಸಿ ಆ ಮೂಲಕ ರಾಜಕೀಯ ಲಾಭಪಡೆಯುವ ಸಾಧನಗಳಾಗಿ ಬಳಸಿಕೊಳ್ಳುವುದು ಧರ್ಮದ್ರೋಹದ ಕೆಲಸ. ಇಂತಹ ಕೃತ್ಯಗಳಲ್ಲಿ ತೊಡಗಿರುವ ದೇಶವಿರೋಧಿಗಳ ಹುನ್ನಾರಗಳನ್ನು ವಿಫಲಗೊಳಿಸುತ್ತೇವೆ ಎಂದು ಪ್ರತಿಯೊಬ್ಬ ಪ್ರಜೆಯೂ ಇಂದಿನ ದಿನ ಪಣತೊಡಬೇಕಾಗಿದೆ.
ಸ್ವಾತಂತ್ರ್ಯದ ಅರ್ಥ ಸಂಕುಚಿತವಾದುದಲ್ಲ, ವಿಶಾಲವಾದುದು. ಅದು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾದುದಲ್ಲ. ನಮ್ಮ ಭಾಷೆ, ಸಂಸ್ಕೃತಿ, ಆಹಾರ, ಉಡುಗೆತೊಡುಗೆ ಎಲ್ಲವೂ ನಮ್ಮ ಸ್ವಾತಂತ್ರ್ಯ. ಮತ್ತೊಬ್ಬರ ಈ ಸ್ವಾತಂತ್ರ್ಯವನ್ನು ಗೌರವಿಸುವುದು ನಿಜವಾದ ದೇಶಪ್ರೇಮ. ದೇಶಭಕ್ತಿ ಎನ್ನುವುದು ರಾಜಕೀಯ ಘೋಷಣೆ ಅಲ್ಲ, ಆಗಬಾರದು ಕೂಡಾ. ಅದು ಪ್ರತಿಯೊಬ್ಬ ಭಾರತೀಯನ ಹೃದಯಂತರಾಳದಿಂದ ಪುಟಿದೆದ್ದು ಬರುವ ಜೀವಪರ ದನಿ.
ಈ ದೇಶವನ್ನು ಪರಸ್ಪರ ಪ್ರೀತಿ, ಸಹಕಾರ ಮತ್ತು ಸೌಹಾರ್ದತೆಯ ಮೂಲಕ ಕಟ್ಟಬೇಕಾಗಿದೆ. ದ್ವೇಷಾಸೂಯೆಗಳಿಂದ ಕೆಡವಿಹಾಕಬಹುದು, ಕಟ್ಟಲಾಗುವುದಿಲ್ಲ.
ಬಡವರ ಬಗ್ಗೆ ಕಾಳಜಿ, ಶೋಷಿತರ ಬಗ್ಗೆ ಅನುಕಂಪ. ಮಹಿಳೆಯರ ಬಗ್ಗೆ ಗೌರವ ನಿಜವಾದ ದೇಶಪ್ರೇಮ. ಸಮಾನತೆಯ ತಳಹದಿಯ ಮೇಲೆ ಸಮಾಜ ನಿರ್ಮಾಣದ ಮೂಲಕ ಸಂವಿಧಾನದ ಆಶಯಗಳನ್ನು ಪ್ರಾಮಾಣಿಕವಾಗಿ ಈಡೇರಿಸುವುದೇ ದೇಶಪ್ರೇಮ.
ಈ ದೇಶದ ಬಡತನ, ಅಜ್ಞಾನ, ಅನಕ್ಷರತೆ, ಮೌಢ್ಯ, ರೋಗ ರುಜಿನ, ಅಸಮಾನತೆಗಳನ್ನು ಹೋಗಲಾಡಿಸುವುದು, ದೇಶವನ್ನು ವಿಭಜಿಸುವಂತಹ ಕೋಮುದ್ವೇಷ, ಜಾತೀಯತೆಯಂತಹ ಸಂಕುಚಿತ ಚಿಂತನೆಗಳನ್ನು ನಿರ್ಮೂಲನೆ ಮಾಡುವುದು. ಇದರೊಂದಿಗೆ ಈ ಮೂಲಕ ನಾಡಿನ ಕಟ್ಟಕಡೆಯ ಮನುಷ್ಯನ ಕಣ್ಣೀರು ಒರೆಸುವ ಜವಾಬ್ದಾರಿ ನಮ್ಮದಾಗಿದೆ. ನಾವು-ನೀವೆಲ್ಲ ಇಂತಹ ಜವಾಬ್ದಾರಿಯುತ ದೇಶಪ್ರೇಮಿ ಪ್ರಜೆಗಳಾಗೋಣ ಎಂದು ಹಾರೈಸಿ ತಮ್ಮೆಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
ಜೈ ಹಿಂದ್ – ಜೈ ಕರ್ನಾಟಕ
  • ಸಿದ್ದರಾಮಯ್ಯ, ಮಾಜಿ ಸಿಎಂ

Leave a Reply