ಪ್ರತಿಯೊಬ್ಬರೂ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ: ರಾಮನಾಥ್ ಕೋವಿಂದ್

5 years ago

ದೆಹಲಿ: ಈ ವರ್ಷ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಹಲವು ವಿಶೇಷತೆಗಳಿಂದ ಆಚರಿಸಲಾಗುತ್ತಿದೆ. ಕಾರಣ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸ್ಮರಣೀಯ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂಪ್ರದಾಯದಂತೆ ದೇಶವನ್ನುದ್ದೇಶಿ ಭಾಷಣ ಮಾಡಿದ ಅವರು, ಭಾರತ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶ-ದೇಶದ ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳನ್ನು ಕೋರಿದರು.

ನಾವು ಸ್ವಾತಂತ್ರ್ಯ ಸಿಕ್ಕ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ಈ ದಿನದ ಹಿಂದೆ ಹಲವರ ತ್ಯಾಗ, ಬಲಿದಾನಗಳಿವೆ. ದೇಶ ನೋಡದೇ ಇರುವ ಅನೇಕರ ಹೋರಾಟ, ಅಜ್ಞಾತರಾದ ಹಲವರ ಬಲಿದಾನಗಳಿವೆ ಎಂದರು.

ಅಮೃತ ಮಹೋತ್ಸವದ ವೇಳೆ ಸಂಭ್ರಮ ಹೆಚ್ಚಿದೆ. ಆದರೆ ದೇಶದಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಣವಾಗಿಲ್ಲ. ಆದ್ದರಿಂದ ಎಚ್ಚರತಪ್ಪಬಾರದು. ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಪ್ರತಿಯೊಬ್ಬರು ಕೊರೋನಾ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿ ತ್ಯಾಗ, ಬಲಿದಾನ ಮಾಡಿದ ಸ್ವಾತಂತ್ರ್ಯ ವೀರರಿಗೆ ನನ್ನ ನಮನಗಳು. ಇಂದು ಹಿಂದಿನ 75 ವರ್ಷಗಳನ್ನು ಮೆಲುಕು ಹಾಕಿದರೆ ನಾವೆಷ್ಟು ದೂರ ಸಾಗಿದ್ದೇವೆ ಎನ್ನುವುದು ಅರ್ಥವಾಗುತ್ತದೆ. ಅನೇಕ ಅಡೆತಡೆಗಳನ್ನು ಹಿಮ್ಮೆಟ್ಟಿಸಿ ಒಗ್ಗಟ್ಟಾಗಿ ನಿಂತು ಸವಾಲುಗಳ ವಿರುದ್ಧ ಹೋರಾಡಿದ್ದೇವೆ. ಸುಖದುಃಖಗಳನ್ನು ಸಮನಾಗಿ ಹಂಚಿಕೊಂಡಿದ್ದೇವೆ ಎಂದು ಮೆಲುಕು ಹಾಕಿದರು.

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಸಾಧನೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. 121 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಈ ಬಾರಿ ಭಾರತ ಅತೀ ಹೆಚ್ಚು ಸ್ಪರ್ದಿಗಳನ್ನು ಕ್ರೀಡಾಕೂಟಕ್ಕೆ ಕಳುಹಿಸಲಾಗಿದೆ. ಪದಕ ಭೇಟೆಯಲ್ಲೂ ಭಾರತ ಗಣನೀಯ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.

Leave a Reply