ಬೆಂಗಳೂರು: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡುವುದು, ಕೀಳುಮಟ್ಟದ ಪದ ಬಳಕೆ ಮಾಡಿದ ಆರೋಪದ ಮೇಲೆ ಮುಕುಡಪ್ಪ ಮತ್ತು ಪುಟ್ಟಸ್ವಾಮಿ ವಿರುದ್ಧ ಮುಕುಡಪ್ಪ ಅವರ ನಿವಾಸದ ಎದುರು ಕುರುಬ ಸಮಾಜದ ಮುಖಂಡರು, ಸಿದ್ದರಾಮಯ್ಯ ಅವರ ಅಭಿಮಾನಿಗಳು ಪ್ರತಿಭಟನೆ ಮಾಡಿದರು.
ಬಿ.ಬಿ.ಎಂ.ಪಿ. ಮಾಜಿ ಸದಸ್ಯರಾದ ಜಿ.ಕೃಷ್ಣಮೂರ್ತಿ, ಆನಂದ್ ಕುಮಾರ್, ಮು.ಗಣೇಶ, ಕೆ.ಟಿ.ಗಣೇಶ್, ಶ್ರೀನಿವಾಸ್, ಸೋಮು, ಶಶಿ, ಕಾಂತಮಣಿ, ಮಂಜುಳ ಪಾಲ್ಗೊಂಡಿದ್ದರು.
ಜಿ.ಕೃಷ್ಣಮೂರ್ತಿರವರು ಮಾತನಾಡಿ, ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯರವರ 45 ವರ್ಷಗಳ ರಾಜಕೀಯ ಜೀವನವನ್ನು ಕಪ್ಪುಚುಕ್ಕೆ ಇಲ್ಲದಂತೆ ಸಾಗಿಸಿದ್ದಾರೆ. ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಸಿದ್ದರಾಮಯ್ಯರವರಿಗೆ ಸಲ್ಲುತ್ತದೆ ಎಂದರು.
ಅವರ ಆಡಳಿತದಲ್ಲಿ ಹಸಿವಿನಿಂದ ಯಾರೂ ಬಳಲಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿಗೆ ತಂದು 4 ಕೋಟಿ ಜನರು ಈ ಯೋಜನೆಯ ಫಲಾನುಭವಿಗಳು, ಇಂದಿರಾ ಕ್ಯಾಂಟೀನ್ ಮತ್ತು ಜನತೆಗೆ ನೀಡಿದ 165 ಭರವಸೆಗಳನ್ನು ಪೂರೈಸಿದ ಮೊಟ್ಟ ಮೊದಲ ಸರ್ಕಾರ ಸಿದ್ದರಾಮಯ್ಯ ಅವರದು ಎಂದರು.
ಎಲ್ಲ ಧರ್ಮ, ಜಾತಿ,ವರ್ಗದವರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಿಂದ ಅವರು ನೋಡುತ್ತಾರೆ. ಇಂದು ಕರ್ನಾಟಕ ಜನರ ಮನೆ ಮಾತಾಗಿರುವ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳೆಯಬೇಕು ಎಂದು ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡುತ್ತಿದ್ದಾರೆ ಎಂದರು.
ಮುಕುಡಪ್ಪ ಅವರು ಅಧಿಕಾರ ಇರುವ ಪಕ್ಷದ ಕಡೆ ವಾಲುತ್ತಾರೆ. ಮುಕುಡಪ್ಪ ಮತ್ತು ಪುಟ್ಟಸ್ವಾಮಿಯವರು ಸಿದ್ಧರಾಮಯ್ಯ ಅವರ ವಿರುದ್ಧ ಆಡಿರುವ ಅವಹೇಳನಕಾರಿ, ಕೀಳುಮಟ್ಟದ ಪದ ಪ್ರಯೋಗಕ್ಕೆ ಕೂಡಲೆ ರಾಜ್ಯದ ಜನರ ಮುಂದೆ ಕ್ಷಮೆ ಕೇಳಬೇಕು. ಇವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ನಮ್ಮ ರಾಜ್ಯಾದ್ಯಂತ ಹೋರಾಟ ಮುಂದುವರೆಯಲಿದೆ ಎಂದರು.




